Advertisement
ಶ್ರೀನಿವಾಸ್ ಗುಪ್ತಾ ಬಹಳ ವರ್ಷಗಳಿಂದ ಕೂದಲು ವ್ಯಾಪಾರ ನಡೆಸುತ್ತಿದ್ದು, ಉತ್ತರ ಕರ್ನಾಟಕದ ಕೆಲ ದೇವಾಲಯಗಳಲ್ಲಿ ಭಕ್ತರು ನೀಡುವ ಕೂದಲು ಹಾಗೂ ಕೆಲ ಬ್ಯೂಟಿ ಪಾರ್ಲರ್‌ಗಳಿಂದಲೂ ಕೂದಲು ಖರೀದಿಸುತ್ತಿದ್ದರು. ಹಾಗೆಯೇ ಹೆಚ್ಚು ಹಣ ಸಂಪಾದಿಸಲು ಕೆಲ ಮಹಿಳಾ ವಸತಿ ನಿಲಯಗಳಲ್ಲಿ ನೆಲೆಸಿದ್ದ ಮಹಿಳೆಯರು ತಮ್ಮ ಉದ್ದದ ಕೂದಲುಗಳನ್ನು ಕತ್ತರಿಸಿ ಮಾರಾಟ ಮಾಡುತ್ತಿದ್ದರು. ಇವುಗಳನ್ನು ಶ್ರೀನಿವಾಸ ಗುಪ್ತಾ ಖರೀದಿಸಿ, ಆಫ್ರಿಕಾ ಮತ್ತು ಯುರೋಪ್ ದೇಶಗಳಿಗೆ ರಫ್ತು ಮಾಡುತ್ತಿದ್ದರು. ಯುರೋಪ್ ರಾಷ್ಟ್ರಗಳಲ್ಲಿ ಕೂದಲು ವ್ಯಾಪಾರಕ್ಕೆ ಬಹಳ ಬೇಡಿಕೆಯಿದ್ದು, ಬಿಲಿಯನ್ ಲೆಕ್ಕದಲ್ಲಿ ವ್ಯವಹಾರ ನಡೆಯುತ್ತದೆ. ಈ ರಾಷ್ಟ್ರಗಳಲ್ಲಿ ವಿಗ್ ಮಾರಾಟಜೋರಾಗಿದ್ದು, 2015ರಲ್ಲಿ ಆರು ಬಿಲಿಯನ್ ವ್ಯಾಪಾರ ವಹಿವಾಟು ನಡೆದಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಶ್ರೀನಿವಾಸ್ ಗುಪ್ತಾ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ 2.5 ಕೋಟಿ ರೂ. ನಗದು, 2.5 ಕೋಟಿ ಚಿನ್ನ ಮತ್ತು 140 ಕೆ.ಜಿ. ಬೆಳ್ಳಿ ವಸ್ತುಗಳ ಪತ್ತೆಯಾಗಿತ್ತು. ಇದರೊಂದಿಗೆ ಬಹಳ ವರ್ಷಗಳಿಂದ ತೆರಿಗೆ ವಂಚನೆ ಮಾಡಿರುವ ಕುರಿತು ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಅಷ್ಟೇ ಅಲ್ಲದೇ, ಕೆಲ ನಕಲಿ ಬಿಲ್‌ಗಳ ಮೂಲಕ ದ್ವಿತೀಯ ದರ್ಜೆ ಮತ್ತು ನಿರುಪಯುಕ್ತ ಮಾಲು ಮಾರಾಟ ಹಾಗೂ ಖರೀದಿಸಿದ ಲೆಕ್ಕವನ್ನು ಘೋಷಿಸದೆ ತೆರಿಗೆ ವಂಚಿಸಿ, ಬೃಹತ್ ಪ್ರಮಾಣದಲ್ಲಿ ಬೇರೆಡೆ ಹಣ ಹೂಡಿಕೆ ಮಾಡಿದ್ದರು. ಈ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ವೇಳೆ 65 ಕೋಟಿ ರೂ. ಮೌಲ್ಯದ ತೆರಿಗೆ ವಂಚನೆ ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.