Advertisement

ಉದ್ಯೋಗ ಅರಸಿ ಕಾರ್ಮಿಕರ ಗುಳೆ

02:29 PM Oct 05, 2018 | Team Udayavani |

ಮುದಗಲ್ಲ: ಮಳೆ ಕೈಕೊಟ್ಟಿದ್ದರಿಂದ ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದ್ದು, ಕೂಲಿ ಕಾರ್ಮಿಕರು, ಸಣ್ಣ ರೈತರು ಸೇರಿ ಈ ಭಾಗದ ಸಾವಿರಾರು ಕುಟುಂಬಗಳು ಕೂಲಿ ಅರಸಿ ನೀರಾವರಿ ಹಾಗೂ ನಗರ ಪ್ರದೇಶಗಳತ್ತ ಗುಳೆ ಹೊರಟಿದ್ದಾರೆ.

Advertisement

ಮುಂಗಾರು ಕೃಷಿ ಚಟುವಟಿಕೆ ಆರಂಭದಲ್ಲಿ ಭೂಮಿ ಉಳುಮೆ ಹಾಗೂ ಬಿತ್ತನೆಯಲ್ಲಿ ರೈತರು ತೊಡಗಿದ್ದರು. ಕಾರ್ಮಿಕರಿಗೂ ಕೆಲಸ ಕೂಲಿ ಕೆಲಸ ಸಿಕ್ಕಿತ್ತು. ಆದರೆ ನಂತರ ಮೂರು ತಿಂಗಳು ಮಳೆ ಕೈಕೊಟ್ಟಿದ್ದರಿಂದ ಭೂಮಿಯಲ್ಲಿ ತೇವಾಂಶ ಕಡಿಮೆಯಾದ ಪರಿಣಾಮ ಬೆಳೆ ಬಾಡಿ ಹಾಳಾಗಿವೆ. ಮಳೆ ಆಶ್ರಿತ ರೈತರು ಆಕಾಶದತ್ತ ಮುಖ ಮಾಡಿದ್ದರೆ, ಕೂಲಿ ಕಾರ್ಮಿಕರು, ಸಣ್ಣ ಹಿಡುವಳಿದಾರು ಕೆಲಸವಿಲ್ಲದೇ ಜೀವನ ನಿರ್ವಹಣೆಗೆ ಸಂಕಷ್ಟ ಎದುರಾಗಿದ್ದರಿಂದ ಕೂಲಿ ಅರಸಿ ಕುಟುಂಬ ಸಮೇತ ಗುಳೆ ಹೊರಟಿರುವುದು ಸಾಮಾನ್ಯವಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ 100 ದಿನ ಕೂಲಿ ಕೆಲಸ ಮತ್ತು ದಿನಕ್ಕೆ ಪ್ರತಿಯೊಬ್ಬ ಕಾರ್ಮಿಕನಿಗೆ 236 ರೂ.ಗಳಂತೆ ಕೂಲಿ ನೀಡಲಾಗುತ್ತಿದೆ. ಆದರೂ ಕೆಲಸಕ್ಕಾಗಿ ನೀರಾವರಿ ಪ್ರದೇಶಕ್ಕೆ ಹೋಗುತ್ತಿದ್ದಾರೆ.

ಕೃಷಿ ಕೂಲಿ ಕಾರ್ಮಿಕರು ನೀರಾವರಿ ಪ್ರದೇಶಗಳಾದ ಸುರಪುರ, ಶಾಹಪುರ, ಕೆಂಭಾವಿ, ಹುಣಸಗಿ ಗಂಗಾವತಿ
ತಾಲೂಕಿನ ಕಾಲುವೆ ವ್ಯಾಪ್ತಿಯ ನೀರಾವರಿ ಪ್ರದೇಶಗಳಿಗೆ ತೆರಳಿದರೆ, ಇನ್ನು ಕೆಲವರು ನಗರ ಪ್ರದೇಶಗಳಾದ ಮಂಗಳೂರ, ಬೆಂಗಳೂರ, ಮೈಸೂರು, ಬೆಳಗಾವಿ, ಉಡುಪಿ, ಕುಂದಾಪುರ, ಕಾರವಾರ, ಹೊರ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಗೋವಾದತ್ತ ತೆರಳುತ್ತಿದ್ದಾರೆ. ಕೆಲವರು 407 ವಾಹನ, ಲಾರಿ, ಟ್ರ್ಯಾಕ್ಟರ್‌, ಟಾಟಾ ಏಸ್‌, ಕ್ರೂಸರ್‌ ವಾಹನಗಳನ್ನು ಮಾಡಿಕೊಂಡು ಗುಳೆ ಹೊರಟಿದ್ದರೆ, ಮತ್ತೆ ಕೆಲ ಗ್ರಾಮೀಣ ಜನರು ಸಾರಿಗೆ ಬಸ್‌ಗಳಲ್ಲಿ ಮಂಗಳೂರು, ಕಾರವಾರ, ಪುಣೆ, ಗೋವಾಕ್ಕೆ ಹೊರಡುತ್ತಿದ್ದಾರೆ. ವಿವಿಧ ಗ್ರಾಮಗಳ ನೂರಾರು ಕುಟುಂಬಗಳು ಜೀವನ ನಿರ್ವಹಣೆಗೆ ಬೇಕಾದ ಬಟ್ಟೆ, ಪಾತ್ರೆ, ಪಗಡೆ, ಆಹಾರಧಾನ್ಯಗಳ ಮೂಟೆಗಳೊಂದಿಗೆ ಕೂಲಿ ಅರಸಿ ಹೋಗುತ್ತಿದ್ದಾರೆ.

ದೇಸಾಯಿ ಭೋಗಾಪುರ ತಾಂಡಾ ನಾಗಲಾಪುರ ಗ್ರಾಪಂ ವ್ಯಾಪ್ತಿಯ ಕುಮಾರಖೇಡ, ತೋಡಕಿ, ಛತ್ತರ, ಛತ್ತರ ತಾಂಡಾ, ನಾಗಲಾಪುರ, ವ್ಯಾಕರನಾಳ, ಅಡವಿಬಾವಿ, ಕಾಚಾಪುರ, ಕಿಲಾರಹಟ್ಟಿ, ಲೆಕ್ಕಿಹಾಳ, ಯರದಿಹಾಳ, ಬಗಡಿ ತಾಂಡಾ, ಜಂತಾಪುರ, ಮಟ್ಟೂರ, ಬುದ್ದಿನ್ನಿ, ತೆರೆಬಾವಿ, ಕನ್ನಾಳ, ತಿಮ್ಮಾಪುರ, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಿಲಾರಹಟ್ಟಿ, ಮೇಗಳಡೊಕ್ಕಿ, ಮೇಣದಾಳ, ಕಳಮಳ್ಳಿ ಸೇರಿ ವಿವಿಧ ಗ್ರಾಮಗಳಿಂದ ನಿತ್ಯ ನೂರಾರು ಕುಟುಂಬಗಳು ಬೇರೆ ಊರುಗಳಿಗೆ ಗುಳೆ ಹೋಗುತ್ತಿದ್ದಾರೆ.
 
ನರೇಗಾ ಕೂಲಿಗಾಗಿ ಅಲೆದಾಟ ಗುಳೆ ಹೊರಟ ಕೂಲಿ ಕಾರ್ಮಿಕರನ್ನು ಪ್ರಶ್ನಿಸಿದರೆ, ಕೂಲಿ ಕೆಲಸ ನೀಡುವಲ್ಲಿ ಗ್ರಾಪಂ
ಅಧಿಕಾರಿಗಳು ತಾರತಮ್ಯ ಮಾಡುತ್ತಾರೆ. ಅನಗತ್ಯ ದಾಖಲೆಗಳನ್ನು ಕೇಳುತ್ತಾರೆ. ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿದರೂ ಕೂಲಿ ಪಾವತಿಗೆ ಅಲೆದಾಡಿಸುತ್ತಾರೆ. ಇಂಜಿನೀಯರ್‌ಗಳು, ಚುನಾಯಿತ ಜನಪ್ರತಿನಿಧಿಗಳು ಕೆಲಸ ನಿರ್ವಹಿಸಿದರೇ ಪೂರ್ತಿ ಹಣ ಪಾವತಿಸುತ್ತಾರೆ. ಆದರೆ ಜನರೆ ಮೈಮುರಿದು ಕೆಲಸ ನಿರ್ವಹಿಸಿದರೆ, ಅಳತೆ ಬಂದಿಲ್ಲ ಎಂದು ಕಡಿಮೆ ಕೂಲಿ ಪಾವತಿಸುತ್ತಾರೆ ಎಂದು ತೊಡಕಿ ಗ್ರಾಮದ ಕೂಲಿ ಕಾರ್ಮಿಕರಾದ ಸುರೇಶ, ಹನುಮಂತಪ್ಪ, ಮರಿಯಪ್ಪ, ಗ್ಯಾನಪ್ಪ ತಮ್ಮ ಅಳಲು ತೋಡಿಕೊಂಡರು. 

Advertisement

ಸರಕಾರ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿದ ಪ್ರತಿಯೊಂದು ಕುಟುಂಬಕ್ಕೆ ಕೆಲಸ ನೀಡಲು ಸಿದ್ದವಿದೆ. ಸಾಮಗ್ರಿ ವೆಚ್ಚದ ಕಾಮಗಾರಿಗಿಂತ ಕೂಲಿ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 
 ಪ್ರಕಾಶ ಒಡ್ಡರ್‌, ತಾಪಂ ಕಾ.ನಿ. ಅಧಿಕಾರಿ ಲಿಂಗಸುಗೂರು

„ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next