Advertisement

ಚುನಾವಣೆ ನಿಯಮ ನಿಖರವಾಗಿ ತಿಳಿದುಕೊಳ್ಳಿ

03:48 PM Apr 20, 2018 | Team Udayavani |

ಕಲಬುರಗಿ: ಚುನಾವಣಾ ಪ್ರಕ್ರಿಯೆಯಲ್ಲಿ ಸೆಕ್ಟರ್‌ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಸೆಕ್ಟರ್‌ ಅಧಿಕಾರಿಗಳು ಚುನಾವಣೆ ನಿಯಮಗಳನ್ನು ನಿಖರವಾಗಿ ತಿಳಿದುಕೊಳ್ಳಬೇಕು. ತರಬೇತಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಕರ್ತವ್ಯದ ಎಲ್ಲ ಅಂಶಗಳನ್ನು ತಿಳಿಯಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್‌. ವೆಂಕಟೇಶಕುಮಾರ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೆಕ್ಟರ್‌ ಅಧಿಕಾರಿಗಳು ಹಾಗೂ ಮಾಸ್ಟರ್‌ ಟ್ರೇನರ್‌ಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಓರ್ವ ಸೆಕ್ಟರ್‌ ಅಧಿಕಾರಿಗೆ 15ರಿಂದ 20 ಮತಗಟ್ಟೆಗಳ ಜವಾಬ್ದಾರಿ ನೀಡಲಾಗಿದೆ. ಈ ಮತಗಟ್ಟೆಗಳಲ್ಲಿ ಏನಾದರೂ ತೊಂದರೆಗಳಿದ್ದರೆ ಅವುಗಳನ್ನು ಸೆಕ್ಟರ್‌ ಅಧಿಕಾರಿಗಳೇ ಪರಿಹರಿಸಬೇಕಾಗುತ್ತದೆ. ಕಾರಣ ಸೆಕ್ಟರ್‌ ಅಧಿಕಾರಿಗಳು ಇಲೆಕ್ಟ್ರಾನಿಕ್‌ ಮತಯಂತ್ರ, ನೀತಿ ಸಂಹಿತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಇನ್ನಿತರೆ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಚುನಾವಣಾಧಿಕಾರಿಗಳು, ಸೆಕ್ಟರ್‌ ಅಧಿಕಾರಿಗಳು ಹಾಗೂ ಮತಗಟ್ಟೆ ಅಧಿಕಾರಿಗಳು ಮಸ್ಟರಿಂಗ್‌ ಸಮಯದಲ್ಲಿ ಆಯಾ ಮತಕ್ಷೇತ್ರಗಳಲ್ಲಿ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳ ಪಟ್ಟಿಯಂತೆ ಅವರ ಹೆಸರು, ಚಿಹ್ನೆ, ಕ್ರಮ ಸಂಖ್ಯೆ ಹೊಂದಾಣಿಕೆ ಆಗಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು. ಎಲೆಕ್ಟ್ರಾನಿಕ್‌ ಮತಯಂತ್ರದಲ್ಲಿ ಯಾವುದೇ ತೊಂದರೆ ಕಂಡು ಬಂದಲ್ಲಿ ಮಸ್ಟರಿಂಗ್‌ ಸಮಯದಲ್ಲಿಯೇ ನಿವಾರಿಸಿಕೊಳ್ಳಬೇಕು. ಪೊಲಿಂಗ್‌ ಪಾರ್ಟಿಗಳು ಮತಗಟ್ಟೆಗೆ ತೆರಳುವ ಮುನ್ನ ಎಲೆಕ್ಟ್ರಾನಿಕ್‌ ಮತಯಂತ್ರ, ವಿವಿ ಪ್ಯಾಟ್‌, ಮತದಾರರ ರಜಿಸ್ಟರ್‌, ಮತದಾರರ ಚೀಟಿ, ಅಧಿಕೃತ ಮತದಾರರ ಪಟ್ಟಿ, ಸೇವಾ ಮತದಾರರ ಪಟ್ಟಿಗಳನ್ನೊಳಗೊಂಡ ಎಲ್ಲ ದಾಖಲಾತಿಗಳನ್ನು ಪಡೆಯಬೇಕು. ಮತಗಟ್ಟೆಗೆ ಹೋದ ನಂತರ ಮತಗಟ್ಟೆ ಪರಿಶೀಲಿಸಿ ಚುನಾವಣಾಧಿಕಾರಿಗಳಿಗೆ ಅಥವಾ ಸೆಕ್ಟರ್‌ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಹೇಳಿದರು.

ಮತದಾನದ ದಿನದಂದು ಬೆಳಗ್ಗೆ 6:00ಕ್ಕೆ ಅಣುಕು ಮತದಾನ ಪ್ರಾರಂಭಿಸಬೇಕು. ಒಂದು ವೇಳೆ ಪೊಲಿಂಗ್‌ ಏಜೆಂಟರು ಬಾರದಿದ್ದಲ್ಲಿ ಮತದಾರರ ಸಮ್ಮುಖದಲ್ಲಿ 50 ಅಣುಕು ಮತದಾನ ಕೈಗೊಳ್ಳಬೇಕು. ಅಣುಕು ಮತದಾನದಲ್ಲಿ ಚಲಾಯಿಸಿದ ಮತಗಳನ್ನು ಕಂಟ್ರೋಲ್‌ ಯುನಿಟ್‌ ನಿಂದ ತೆಗೆದು ಹಾಕಬೇಕು ಹಾಗೂ ವಿವಿ ಪ್ಯಾಟ್‌ನಲ್ಲಿ ಸಂಗ್ರಹವಾದ ಚೀಟಿಗಳನ್ನು ಸಹ ತೆಗೆಯಬೇಕು. ಬೆಳಗ್ಗೆ 7:00ಕ್ಕೆ ವಾಸ್ತವಿಕವಾಗಿ ಮತದಾನ ಪ್ರಾರಂಭವಾಗುವ ಹಾಗೆ ನೋಡಿಕೊಳ್ಳಬೇಕು. 

ಮತದಾನಕ್ಕೆ ಆಗಮಿಸುವ ಮತದಾರರಿಗೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿ ಗುರುತು ಹಾಕಬೇಕು. ಮತವನ್ನು ಗುಪ್ತವಾಗಿ ಚಲಾಯಿಸಬೇಕಾಗಿರುವುದರಿಂದ ಮತಗಟ್ಟೆಯಲ್ಲಿ ಮೊಬೈಲ್‌ ಬಳಸದಂತೆ ನಿಷೇಧಿಸಬೇಕು ಹಾಗೂ ಮತ ಚಲಾಯಿಸುವಾಗ ಮತಯಂತ್ರ ಬೇರೆಯವರಿಗೆ ಕಾಣದಂತೆ ವ್ಯವಸ್ಥೆ ಮಾಡಬೇಕ ಎಂದು ಸೂಚಿಸಿದರು.

Advertisement

ಪೊಲಿಂಗ್‌ ಪಾರ್ಟಿಯಲ್ಲಿ ಕನಿಷ್ಠ ಇಬ್ಬರು ಮಹಿಳಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಕಲಬುರಗಿ ಉತ್ತರ ಸೇರಿದಂತೆ ಜಿಲ್ಲಾದ್ಯಂತ ಹಲವಾರು ಮತಕ್ಷೇತ್ರಗಳಲ್ಲಿ ಬುರ್ಖಾ ಪದ್ಧತಿ ಜಾರಿಯಲ್ಲಿದ್ದು, ಮಹಿಳಾ ಸಿಬ್ಬಂದಿಗಳು ಮತದಾನಕ್ಕೆ ಆಗಮಿಸುವ ಬುರ್ಖಾ ಧರಿಸಿದ ಮಹಿಳೆಯರನ್ನು ಅವರ ಗುರುತಿನ ಚೀಟಿಯೊಂದಿಗೆ ಗುರುತಿಸಿ ಮತದಾನಕ್ಕೆ ಅನುಕೂಲ ಮಾಡಿಕೊಡಬೇಕು. ಪೊಲಿಂಗ್‌ ಪಾರ್ಟಿ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಮತ ಚಲಾಯಿಸಲು ಅನುಕೂಲವಾಗುವ ಹಾಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಮುಂಚಿತವಾಗಿಯೇ ಅಂಚೆ ಮತದಾನ ಚಲಾಯಿಸಬೇಕು ಎಂದರು.

ತರಬೇತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಉಪಸ್ಥಿತರಿದ್ದರು. ಮಾಸ್ಟರ್‌ ಟ್ರೇನರ್‌ ಡಾ. ಶಶಿಶೇಖರ ರೆಡ್ಡಿ ತರಬೇತಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next