Advertisement

ಯಂಬ್ರಹಳ್ಳಿಯಲ್ಲಿ ಬಲ್ಲಾಳನ ಕಾಲದ ಶಿಲಾಶಾಸನಗಳು ಪತ್ತೆ

09:50 PM Sep 09, 2019 | Lakshmi GovindaRaju |

ದೇವನಹಳ್ಳಿ: ಕರ್ನಾಟಕ ಇತಿಹಾಸ ಪುಟಗಳಲ್ಲಿ ದೇವನಹಳ್ಳಿ ತನ್ನದೇ ಆದ ವೈಶಿಷ್ಟ ಹೊಂದಿದೆ. ಇದಕ್ಕೆ ಇತ್ತೀಚೆಗೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಪತ್ತೆಯಾಗುತ್ತಿರುವ ಶಿಲಾ ಶಾಸನಗಳು, ವೀರಗಲ್ಲುಗಳೇ ಸಾಕ್ಷಿ. ತಾಲೂಕಿನ ಕಾರಹಳ್ಳಿ ಗ್ರಾಪಂ ವ್ಯಾಪ್ತಿಯ ಯಂಬ್ರಹಳ್ಳಿ ಗ್ರಾಮದಲ್ಲಿ ಪ್ರಾಚೀನ ಕಾಲದ ಅಪ್ರಕಟಿತ ಕನ್ನಡ ಲಿಪಿಯುಳ್ಳ ಶಿಲಾ ಶಾಸನ ಹಾಗೂ ತುರುಗೊಳ್‌ ವೀರಗಲ್ಲುಗಳು ಕಂಡುಬಂದಿವೆ. ಅಲ್ಲದೆ‌, ಕುಂದಾಣ ಹೋಬಳಿಯ ಹಲವಾರು ಗ್ರಾಮದಲ್ಲಿ ವಿವಿಧ ರೀತಿಯ ಶಿಲಾ ಶಾಸನಗಳು, ವೀರಗಲ್ಲುಗಳು ದೊರೆತಿವೆ.

Advertisement

ಮಹನೀಯರು ಹುಟ್ಟಿದ ನಾಡು: ದೇವನಹಳ್ಳಿ ತಾಲೂಕಿನಲ್ಲಿ ಟಿಪ್ಪುಸುಲ್ತಾನ್‌ ಜನ್ಮಸ್ಥಳ, ಕೆಂಪೇಗೌಡರ ಪೂರ್ವಜರ ಆವತಿ ಗ್ರಾಮ, ನಾಡಪ್ರಭು ರಣಬೈರೇಗೌಡ ಆಳಿದ ಸ್ಥಳ, ಡಿ.ವಿ ಗುಂಡಪ್ಪ, ನಿಸಾರ್‌ ಅಹಮದ್‌, ವಿ.ಸೀತಾರಾಮಯ್ಯ, ಸಿ.ಅಶ್ವಥ್‌, ಸ್ವಾತಂತ್ರ್ಯ ಹೋರಾಟಗಾರು ಸೇರಿದಂತೆ ಹಲವು ಮಹನೀಯರು ಹುಟ್ಟಿ ಬೆಳೆದಿದ್ದಾರೆ. ಇಂತಹ ಐತಿಹಾಸಿಕ ತಾಲೂಕನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಸಬೇಕು ಎಂದು ಇತಿಹಾಸಕಾರರು ಒತ್ತಾಯಿಸುತ್ತಿದ್ದಾರೆ.

ಶಾಸನಗಳ ರಕ್ಷಣೆ: ಮಳೆ, ಗಾಳಿ, ಬಿಸಿಲಿಗೆ ಸವೆದಿದ್ದು, ಅನಾಥವಾಗಿ ಬೇಲಿಯೊಂದರಲ್ಲಿ ಬಿದ್ದಿದ ಶಾಸನವನ್ನು ಗ್ರಾಪಂ ಸದಸ್ಯರಾದ ರವಿಕುಮಾರ್‌ ಹಾಗೂ ಗೋಪಾಲ್‌ ಗೌಡ ಅವರು ಗ್ರಾಮದ ಅಶ್ವತ್ಥ್ಕಟ್ಟೆಯ ಹಿಂಬದಯಲ್ಲಿ ತಂದು ನಿಲ್ಲಿಸಿದ್ದಾರೆ. ಒಟ್ಟು ಆರು ವೀರಗಲ್ಲುಗಳು ದೊರೆತಿದ್ದು, ಅದರಲ್ಲಿ ತುಂಡಾಗಿರುವ ಒಂದು ವೀರಗಲ್ಲನ್ನು ಬೇಲಿ ಗಿಡಗಳಲ್ಲಿಯೇ ಬಿಡಲಾಗಿದೆ. ಉಳಿದ ಐದು ವೀರಗಲ್ಲುಗಳು ಹಾಗೂ ಒಂದು ಶಿಲಾ ಶಾಸನವನ್ನು ಒಂದೆಡೆ ಸಂರಕ್ಷಿಸಲಾಗಿದ್ದು, ಸಮೀಪದ ಜಮೀನೊಂದರಲ್ಲಿ ಮೂರು ವೀರಗಲ್ಲುಗಳು ಇದ್ದು, ಅದನ್ನು ಸಹ ಸ್ಥಳಾಂತರಿಸುವ ಕಾರ್ಯವಾಗಬೇಕಿದೆ.

ಶಾಸನಗಳ ಕಾಲ: ಯಂಬ್ರಹಳ್ಳಿಯಲ್ಲಿ ಪತ್ತೆಯಾಗಿರವ ಶಿಲಾ ಶಾಸನದ ಎರಡು ಬದಿಯಲ್ಲಿ ಕನ್ನಡ ಲಿಪಿಯಿದ್ದು, ಇದು 3ನೇ ಬಲ್ಲಾಳನ ಕಾಲದ್ದು, ಅಂದರೆ ಕ್ರಿಶ 1296-97ರದ್ದು ಎಂದು ಸಂಶೋಧಕರು ಹೇಳುತ್ತಾರೆ. 6 ವೀರಗಲ್ಲುಗಳ ಪೈಕಿ 3 ವೀರಗಲ್ಲುಗಳ ಮೇಲೆ ಕನ್ನಡ ಲಿಪಿ ಇದ್ದು, ಸ್ವಸ್ತಿಶ್ರೀ ಶಕ 896 ವರ್ಷ ಎಂದು ಬರೆದಿದ್ದು, ಉಳಿದಭಾಗ ಕಾಣಿಸುತ್ತಿಲ್ಲಂದು ಸಂಶೋಧಕರು ತಿಳಿಸುತ್ತಾರೆ. ಇನ್ನುಳಿದ 2 ವೀರಗಲ್ಲುಗಳ ಮೇಲಿನ ಬರಹವನ್ನು ಇಲಾಖೆ ಅಥವಾ ಸಂಶೋಧಕರು ದಾಖಲು ಪಡಿಸಬೇಕಿದೆ.

ಇತಿಹಾಸ ತಿಳಿಸುವ ಶಾಸನಗಳು: ಯಂಬ್ರಹಳ್ಳಿ ಗ್ರಾಮವು ಇತಿಹಾಸ ಪ್ರಸಿದ್ಧವಾಗಿದ್ದು, ಇದಕ್ಕೆ ಇಲ್ಲಿರುವ ಶಿಲಾ ಶಾಸನಗಳು ಪುಷ್ಟಿ ನೀಡುತ್ತಿವೆ. ಯಂಬ್ರಹಳ್ಳಿ ಬೇಚರಾಕು ಅಪ್ಪಗೊಂಡನಹಳ್ಳಿಯ ತಿಮ್ಮರಾಯ ಸ್ವಾಮಿ ತೋಪಿನಲ್ಲಿರುವ ಶಿಲಾ ಶಾಸನ, ಸಾಧಾರಣ ಸಂವಸ್ತ್ರ ವೈಶಾಖಬಹುಳ 15ರಂದು ತಿಮ್ಮರಾಯಸ್ವಾಮಿಗೆ ಭೂಮಿ ಮಾನ್ಯಕೊಟ್ಟಿರುವ ಬಗ್ಗೆ ತಿಳಿಸುತ್ತದೆ. ಇದೇ ಗ್ರಾಮದ ಉತ್ತರಕ್ಕೆ ಗೌಡನ ತೋಪಿನ ಕಾಲುವೆಯಲ್ಲಿರುವ ತಮಿಳು ಶಾಸನದಲ್ಲಿ ವೀರ ರಾಮನಾಥನ ಹೆಸರು ಪ್ರಸ್ತಾಪವಾಗಿದ್ದು, ಅಂತೆಯೇ ಇಲೆ„ಪಾಡು (ಯಲಹಂಕ) ನಾಡಿನ ಹೆಸರು ಸಹ ಕಾಣಸಿಗುತ್ತದೆ.

Advertisement

ಇದರ ಕಾಲ ಕ್ರಿಶ 1288 ಎಂದು ದೇವನಹಳ್ಳಿ ಶಾಸನಗಳ ಪಟ್ಟಿಯಲ್ಲಿ ನಮೂದಾಗಿದೆ. ಆದರೆ ಈ ಎರಡೂ ಶಾಸನಗಳು ಎಲ್ಲಿವೆ ಎಂಬುವುದು ಪ್ರಶ್ನಾರ್ಥಕವಾಗಿದೆ. ಲಿಂಗೇರಗೊಲ್ಲಹಳ್ಳಿಯಲ್ಲಿ ಆವತಿ ಪಾಳೇಗಾರರ ಕಾಲದ ಕಂಬ ಶಾಸನವೊಂದು ಪತ್ತೆಯಾಗಿದೆ. ಪುರಾತತ್ವ ಇಲಾಖೆ, ಇವುಗಳನ್ನು ಸಂರಕ್ಷಿಸುವುದರ ಜೊತೆಗೆ, ವಸ್ತು ಪ್ರದರ್ಶನಾಲಯ ನಿರ್ಮಿಸಿದರೆ ಇಂದಿನ ಯುವ ಪೀಳಿಗೆಗೆ ಇತಿಹಾಸದ ಮಾಹಿತಿ ತಿಳಿಯಲು ಅನುಕೂಲವಾಗುತ್ತದೆ ಎನ್ನುವುದು ಗ್ರಾಮಸ್ಥರ ಆಶಯ.

ಸಂಶೋಧನಾಕಾರ ಬಿಟ್ಟಸಂದ್ರ ಗುರುಸಿದ್ಧಯ್ಯ ಭೇಟಿ ನೀಡಿದಾಗ ಅನಾಥವಾಗಿ ಬಿದ್ದಿದ್ದ ಶಿಲಾಶಾಸನಗಳು ಪತ್ತೆಯಾಗಿವೆ. ಪೂರ್ವಜರ ಕಾಲದಲ್ಲಿ ಇಲ್ಲಿ ವೀರಗಲ್ಲುಗಳ ಗುಡಿ ಇದ್ದು, ವೇಣುಗೋಪಾಲಸ್ವಾಮಿ ದೇವಾಲಯ ಜೀರ್ಣೋದ್ಧಾರ ವೇಳೆ ಸಂರಕ್ಷಿಸಲಾಗಿದೆ.
-ನರಸಿಂಹ ಮೂರ್ತಿ, ರೈತ ಸಂಘದ ಮುಖಂಡ

ಇದುವರೆಗೂ ದೊರೆತಿರುವ ಅಪ್ರಕಟಿತ ಶಾಸನಗಳು ಯಂಬ್ರಹಳ್ಳಿ ಗ್ರಾಮಕ್ಕೆ ಸೇರಿದ್ದು, 6 ತುರಗೋಳ್‌ ವೀರಗಲ್ಲುಗಳು ಒಂದೇ ರೀತಿಯಲ್ಲಿದ್ದು, ಈ ಗ್ರಾಮ ಪ್ರಾಚೀನ ಕಾಲದಲ್ಲಿ ಅಸ್ಥಿತ್ವದಲ್ಲಿತ್ತು ಎಂದು ತಿಳಿಯುತ್ತದೆ. ಶಾಸನದ ಜಾಡು ಹಿಡಿದಾಗ ಇದು 3ನೇ ಬಲ್ಲಾಳನ ಕಾಲದ್ದಾಗಿರಬಹುದು ಎಂದು ಊಹಿಸಲಾಗಿದ್ದು, ಪುರಾತತ್ವ ಇಲಾಖೆ ಸ್ಥಳಕ್ಕೆ ಬಂದು ಸಂಶೋಧನೆ ನಡೆಸಿ ಈ ಶಾಸನಗಳ ಕಾಲವನ್ನು ಉಲ್ಲೇಖೀಸಬೇಕು.
-ಬಿಟ್ಟಸಂದ್ರ ಗುರುಸಿದ್ದಯ್ಯ.ಬಿ.ಜಿ, ಇತಿಹಾಸ ಸಂಶೋಧಕ, ಸಾಹಿತಿ

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next