ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆ,ವೈಶುದೀಪ್ ಫೌಂಡೇಶನ್ ಸಹಯೋಗದಲ್ಲಿ ಎಸ್‌ಎಸ್ ಎಲ್‌ಸಿ ಫಲಿತಾಂಶ ಸುಧಾರಣೆಗೆ ಹಮ್ಮಿಕೊಂಡ ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ನಗರದ ಡಾ|ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸೋಮವಾರ ಸಂಜೆ ಚಾಲನೆ ದೊರೆಯಿತು.
ಜಿಲ್ಲಾಧಿಕಾರಿ ದೀಪಾ ಚೋಳನ್ ಚಾಲನೆ ಮಾತನಾಡಿ, ಇಂದಿನಿಂದ 2020ರ ಫೆ.24 ರವರೆಗೆ ಪ್ರತಿ ಸೋಮವಾರ ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಎಸ್ ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ನೇರ ಫೋನ್ ಇನ್ ಕಾರ್ಯಕ್ರಮ ಜರುಗಲಿವೆ. ವಿದ್ಯಾಸ್ನೇಹಿ ಉಚಿತ ಸಹಾಯವಾಣಿ ಸಂಖ್ಯೆ 18004255540 ಸಂಪರ್ಕಿಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪಠ್ಯಾಧಾರಿತ ಹಾಗೂ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆಯಬಹುದು ಎಂದರು.
ವಿದ್ಯಾರ್ಥಿಗಳು ಪಠ್ಯವನ್ನು ಕೇಂದ್ರೀಕರಿಸಿ ಅಧ್ಯಯನ ಮಾಡಬೇಕು. ಗೂಡುಗಳನ್ನು ಅವಲಂಬಿಸ ಬಾರದು. ಸಂದೇಹ ಪರಿಹರಿಸಿಕೊಳ್ಳಬೇಕು. ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಇನ್ನೂ ಸಾಕಷ್ಟು ಕಾಲಾವಕಾಶ ಇದ್ದು, ವಿದ್ಯಾರ್ಥಿಗಳು ಸಮಯದ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದರು. ಸಹಾಯವಾಣಿ ಮೂಲಕ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಜಿಪಂ ಸಿಇಒ ಡಾ|ಬಿ.ಸಿ.ಸತೀಶ ಮಾತನಾಡಿ, ಪಠ್ಯದ ಯಾವುದೇ ಭಾಗ ನಿರ್ಲಕ್ಷ್ಯ ಮಾಡದೇ ಅಭ್ಯಾಸ ಮಾಡಬೇಕು. ಯಾವುದೇ ಪ್ರಶ್ನೆಗಳಿಗೂ ಉತ್ತರಿಸುವ ಸಾಮರ್ಥ್ಯ ಗಳಿಸಿಕೊಳ್ಳಬೇಕು ಎಂದರು.
ಡಿಡಿಪಿಐ ಗಜಾನನ ಮನ್ನಿಕೇರಿ ಮಾತನಾಡಿ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಈ ಬಾರಿ ನೀಲಿನಕ್ಷೆ ಮಾದರಿ ಕೈ ಬಿಟ್ಟಿದೆ. ವಿದ್ಯಾರ್ಥಿಗಳು ಎಲ್ಲಾ ವಿಷಯಗಳಿಗೂ ಸಮಾನ ಆದ್ಯತೆ ನೀಡಿ ಸಿದ್ಧತೆ ಮಾಡಿಕೊಳ್ಳಬೇಕು. ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ವಿಷಯ ತಜ್ಞರು ಸಂದೇಹಪರಿಹರಿಸುತ್ತಾರೆ ಎಂದರು.
ಕ್ಷೇತ್ರ ಶಿಕ್ಷಣಾ ಧಿಕಾರಿಗಳಾದ ಗಿರೀಶ ಪದಕಿ, ಶ್ರೀಶೈಲ ಕರಿಕಟ್ಟಿ, ಎ.ಎ.ಖಾಜಿ, ವಿದ್ಯಾ ನಾಡಿಗೇರ, ಶಿಕ್ಷಣಾಧಿ ಕಾರಿಗಳಾದ ಸುರೇಶ ಹುಗ್ಗಿ, ಬಷೀರ ಅಲಿ ಶೇಖ್, ಡಿವೈಪಿಸಿ ಎನ್.ಕೆ.ಸಾವಾರ್, ಪ್ರಮೋದ ಮಹಾಲೆ, ವಿಷಯ ಪರಿವೀಕ್ಷಕರಾದ ಪೂರ್ಣಿಮಾ ಮುಕ್ಕುಂದಿ, ಸಂಜಯ್ ಮಾಳಿ, ರೇಖಾ ಭಜಂತ್ರಿ, ಶಿವಲೀಲಾ ಕಳಸಣ್ಣವರ, ವೈಶುದೀಪ ಫೌಂಡೇಷನ್‌ನ ಮನೋಜ ಕರ್ಜಗಿ ಸೇರಿದಂತೆ ಧಾರವಾಡ ಗ್ರಾಮೀಣ ವಲಯದ ಎಲ್ಲಾ ಪಠ್ಯ ವಿಷಯಗಳ 20 ಸಂಪನ್ಮೂಲ ಶಿಕ್ಷಕರು ಭಾಗವಹಿಸಿ, ನೂರಾರು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ನೀಡಿದರು.