ಬೆಂಗಳೂರು: ಕೋವಿಡ್ ದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅದರಿಂದ ಹೊರ ಬರಲು ಪರ್ಯಾಯ ಮಾರ್ಗಗಳ ಹುಡುಕಾಟವನ್ನು ರಾಜ್ಯ ಸರ್ಕಾರ ನಡೆಸಿದೆ. ಹೆಸರಿಗೆ ಮಾತ್ರ ಇರುವ ಇಲಾಖೆಗಳನ್ನು ವಿಲೀನ ಮಾಡಿ ಹಾಗೂ ಅಧಿಕಾರಿಗಳ ಅನುಕೂಲಕ್ಕೆ ಸೃಷ್ಠಿಯಾಗಿರುವ ಅನಗತ್ಯ ಹುದ್ದೆ ಗಳನ್ನು ಕಡಿತಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇಲಾಖೆಗಳ ವಿಲೀನ ಹಾಗೂ ಹುದ್ದೆಗಳ ಕಡಿತದಿಂದ ಸರ್ಕಾರಕ್ಕೆ ವಾರ್ಷಿಕವಾಗಿ ನಾಲ್ಕರಿಂದ ಐದು ಸಾವಿರ ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಸಂಪುಟ ಉಪ ಸಮಿತಿಯೊಂದನ್ನು ರಚಿಸಲಾಗಿದೆ. ಮೊದಲ ಸಭೆಯಲ್ಲಿ ಅನಗತ್ಯವಾಗಿ ಸೃಷ್ಟಿಯಾಗಿರುವ ಇಲಾಖೆಗಳು, ಆ ಇಲಾಖೆಗಳಲ್ಲಿ ರಾಜ್ಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮಾಹಿತಿ ಹಾಗೂ ಅಧಿಕಾರಿಗಳ ಅನುಕೂಲಕ್ಕಾಗಿ ಸೃಷ್ಟಿಯಾಗಿರುವ ಹುದ್ದೆಗಳು ಯಾವ ಯಾವ ಇಲಾಖೆಯಲ್ಲಿ, ಹೆಚ್ಚುವರಿ ಹುದ್ದೆಗಳ ಸಂಖ್ಯೆ ಎಷ್ಟಿದೆ ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಲು ನಿರ್ಧರಿಸಲಾಗಿದೆ.
ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯ ಈ ಉಪಸಮಿತಿಯಲ್ಲಿ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಸುರೇಶ್ ಕುಮಾರ್ ಸದಸ್ಯರಾಗಿದ್ದಾರೆ. ಮಾಹಿತಿ ಸಂಗ್ರಹದ ಹೊಣೆಯನ್ನು ಹಿರಿಯ ಐಎಎಸ್ ಅಧಿಕಾರಿಗಳಾದ ಮೌನೀಶ್ ಮುದ್ಗಿಲ್, ಏಕ್ ರೂಪ್ ಕೌರ್ ಹಾಗೂ ಪಿ.ಸಿ. ಜಾಫರ್‌ಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ. ಜತೆಗೆ ಅನಗತ್ಯ ನಿಗಮ ಮಂಡಳಿಗಳು, ಪ್ರಾಧಿಕಾರಗಳು, ಅಕಾಡೆಮಿಗಳು, ಆಯೋಗಗಳು, ನ್ಯಾಯ ಮಂಡಳಿಗಳಿಗೂ ಕತ್ತರಿ ಹಾಕಲು ಸರಕಾರಕ್ಕೆ ಶಿಫಾರಸ್ಸು ಮಾಡಲು ಸಮಿತಿ ಆಲೋಚನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅನಗತ್ಯ ಹುದ್ದೆಗಳಿಗೆ ಕತ್ತರಿ ಸರ್ಕಾರಿ ಅಧಿಕಾರಿಗಳಿಗೆ ಬಡ್ತಿ ನೀಡಲು, ರಾಜ ಕಾರಣಿಗಳು ತಮಗೆ ಬೇಕಾದವರಿಗೆ ಆಯಕಟ್ಟಿನ ಸ್ಥಾನ ಕಲ್ಪಿಸಲು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಜಂಟಿ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಆಯುಕ್ತರು, ಮುಖ್ಯ ಎಂಜನೀಯರ್ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಒಂದೇ ಇಲಾಖೆಯಲ್ಲಿ ಇಬ್ಬರು ಕಾರ್ಯದರ್ಶಿಗಳು, ಇಬ್ಬರು ಆಯುಕ್ತರು ಕಾರ್ಯ ನಿರ್ವಹಿಸುತ್ತಿದ್ದು ಅಂತಹ ಅನಗತ್ಯ ಹುದ್ದೆಗಳಿಗೂ ಕತ್ತರಿ ಹಾಕಲು ಶಿಫಾರಸ್ಸು ಮಾಡಲು ಸಂಪುಟ ಉಪ ಸಮಿತಿ ಆಲೋಚನೆ ನಡೆಸಿದೆ. ಅಲ್ಲದೇ ತಾಂತ್ರಿಕವಾಗಿ ಅರ್ಹತೆ ಇಲ್ಲದವರು ಪ್ರಭಾವ ಬಳಸಿ ಆಯಕಟ್ಟಿನ ಹುದ್ದೆಗಳಿಗೆ ನೇಮಕಗೊಳ್ಳುವುದು, ಐಎಫ್‌ಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಆಡಳಿತಾತ್ಮಕ ಹುದ್ದೆಗಳಲ್ಲಿ ಕೆಲಸ ಮಾಡುವ ಗೊಂದಲಗಳಿಗೂ ಆಡಳಿತ ಸುಧಾರಣಾ ಸಂಪುಟ ಉಪ ಸಮಿತಿ ತೆರೆ ಎಳೆಯುವ ಬಗ್ಗೆ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಯಾವ್ಯಾವ ಇಲಾಖೆ ವಿಲೀನ?
● ಜಲ ಸಂಪನ್ಮೂಲ ಜೊತೆಗೆ ಸಣ್ಣ ನೀರಾವರಿ ಇಲಾಖೆ
● ಬೃಹತ್ ಕೈಗಾರಿಕಾ ಇಲಾಖೆ ಜೊತೆಗೆ ಸಣ್ಣ ಕೈಗಾರಿಕೆ
ಹಾಗೂ ಸಾರ್ವಜನಿಕ ಉದ್ಯಮಗಳ ಇಲಾಖೆ
● ಕೃಷಿ ಇಲಾಖೆ ಜೊತೆಗೆ ತೋಟಗಾರಿಕೆ,ರೇಷ್ಮೆ ಇಲಾಖೆ
● ನಗರಾಭಿವೃದ್ಧಿ ಇಲಾಖೆ ಜೊತೆಗೆ ಪೌರಾಡಳಿತ
● ಕಾರ್ಮಿಕ ಇಲಾಖೆ ಜೊತೆಗೆ ಐಟಿ ಬಿಟಿ,
● ಆರೋಗ್ಯ ಇಲಾಖೆ ಜೊತೆಗೆ ವೈದ್ಯಕೀಯ ಶಿಕ್ಷಣ ಇಲಾಖೆ
● ಸಮಾಜ ಕಲ್ಯಾಣ ಜೊತೆಗೆ ಹಿಂದುಳಿದ ವರ್ಗಗಳ ಇಲಾಖೆ
● ಗ್ರಾಮೀಣಾಭಿವೃದ್ದಿ ಇಲಾಖೆಯೊಂದಿಗೆ ಗ್ರಾಮೀಣ
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಸರ್ಕಾರಕ್ಕೆ ಆರ್ಥಿಕ ಹೊರೆ ತಪ್ಪಿಸಲು ಆಡಳಿತ ಸುಧಾರಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಅದಕ್ಕಾಗಿ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚನೆಯಾಗಿದೆ. ಈ ಸಮಿತಿಯಿಂದ ಸರ್ಕಾರದ ಆರ್ಥಿಕ ಹೊರೆ ಕಡಿಮೆ ಮಾಡಲು ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂದು ಅಧ್ಯಯನ ಮಾಡಿ ವರದಿ ಕೊಡುತ್ತೇವೆ.
● ಜೆ.ಸಿ. ಮಾಧುಸ್ವಾಮಿ, ಸಚಿವ