Advertisement

ಸಿಬ್ಬಂದಿ ಕರೆಸಿಕೊಳ್ಳಲೂ ಆರ್ಥಿಕ ಸಂಕಷ್ಟ!

05:26 PM Apr 22, 2020 | mahesh |

ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್  ನಿಯಂತ್ರಣದ ನಡುವೆಯೇ ಸರ್ಕಾರಿ ಸೇವೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಎಲ್ಲ ಇಲಾಖೆ ಸಿಬ್ಬಂದಿ ಕಚೇರಿಗೆ ಆಗಮಿಸುವಂತೆ ಸೂಚಿಸಿದ್ದು, ಸ್ವಂತ ವಾಹನ ಸೌಲಭ್ಯವಿಲ್ಲದ ಸಿಬ್ಬಂದಿಯನ್ನು ಕರೆಸಿಕೊಳ್ಳಲಿಕ್ಕೂ ಆಗದಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ!

Advertisement

ಏ. 20ರ ನಂತರ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಲು ಯೋಚಿಸಿದ್ದ ಸರ್ಕಾರ, ಪಾದರಾಯನಪುರ ಗಲಾಟೆ ಪ್ರಕರಣದ ನಂತರ ಮೇ 3ರವರೆಗೂ ಯಾವುದೇ ಸಡಿಲಿಕೆ ಮಾಡದೆ ಲಾಕ್‌ಡೌನ್‌ ಮುಂದುವರಿಸಿದೆ. ಆದರೆ, ಸರ್ಕಾರಿ ಇಲಾಖೆಗಳಿಗೆ ಮಾತ್ರ “ಎ’ ಮತ್ತು “ಬಿ’ ದರ್ಜೆಯ ಎಲ್ಲ ಅಧಿಕಾರಿಗಳು ಹಾಜರಾಗಬೇಕು ಹಾಗೂ “ಸಿ’ ಮತ್ತು “ಡಿ’ ದರ್ಜೆ ಸಿಬ್ಬಂದಿ ಶೇ. 33ರಷ್ಟು ಹಾಜರಾಗುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಆದರೆ, ಸಚಿವಾಲಯದ “ಎ’ ಮತ್ತು “ಬಿ’ ದರ್ಜೆಯ ಬಹುತೇಕ ಅಧಿಕಾರಿಗಳಿಗೆ ಸರ್ಕಾರ ಬಳಕೆಗೆ ವಾಹನ ಸೌಲಭ್ಯ ನೀಡಲಾಗಿದೆ. ಅಥವಾ ಬಹುತೇಕ ಅಧಿಕಾರಿಗಳು ಸ್ವಂತ ವಾಹನ
ಹೊಂದಿರುತ್ತಾರೆ. ಆದರೆ, “ಸಿ’ ಮತ್ತು “ಡಿ’ ದರ್ಜೆ ಸಿಬ್ಬಂದಿ, ಮಹಿಳಾ ಅಧಿಕಾರಿಗಳು ಹಾಗೂ 50 ವರ್ಷ ಮೇಲ್ಪಟ್ಟ ಸಚಿವಾಲಯದ ಶೇ. 70ರಷ್ಟು ಸಿಬ್ಬಂದಿ ಬಹುತೇಕ ಬಸ್‌ ಹಾಗೂ ಮೆಟ್ರೋದಂತಹ ಸಮೂಹ ಸಾರಿಗೆ ಅವಲಂಬಿಸಿದ್ದಾರೆ. ಅಲ್ಲದೆ, ಅನೇಕ ಸಿಬ್ಬಂದಿ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹೊರವಲಯದಿಂದ ನಿತ್ಯ ಪ್ರಯಾಣ ಮಾಡುವವರಾಗಿದ್ದಾರೆ. ಮದ್ದೂರು, ಮಂಡ್ಯದಿಂದಲೂ ಬರುವವರಿದ್ದಾರೆ.

ಬಸ್‌ ವ್ಯವಸ್ಥೆಗೆ ಆರ್ಥಿಕ ಸಂಕಷ್ಟ: ರಾಜ್ಯ ಸರ್ಕಾರ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಕಚೇರಿಗೆ ಬರುವಂತೆ ಆದೇಶ ಮಾಡಿದ್ದು, ಇದಕ್ಕಾಗಿ ಅಗತ್ಯ ಸಾರಿಗೆ ಸೇವೆ ಒದಗಿಸಿಕೊಡುವಂತೆ ಸಂಬಂಧಪಟ್ಟ ಇಲಾಖೆಗಳ ನೌಕರರು ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ. ಆದರೆ, ಬಸ್‌ ಸೇವೆಗೆ ಬಿಎಂಟಿಸಿ ದರ ನಿಗದಿ ಮಾಡಿದ್ದು, ಆ ಹಣ ಪಾವತಿಗೆ ಹಣಕಾಸು ಇಲಾಖೆ ನಿರಾಕರಿಸಿದ್ದು, ಸಿಬ್ಬಂದಿಯೇ ಸ್ವಂತ ಖರ್ಚಿನಲ್ಲಿ ಬರಲು ಸೂಚಿಸುವಂತೆ ಹಣಕಾಸು ಇಲಾಖೆ ತಿಳಿಸಿದೆ ಎನ್ನಲಾಗಿದೆ. ಬಿಎಂಟಿಸಿ ಬಸ್‌ ಸೇವೆ ಒದಗಿಸಲು ಪ್ರತಿ ಕಿ.ಮೀ.ಗೆ 45 ರೂ. ದರ ನಿಗದಿಪಡಿಸಿದ್ದು, ಕನಿಷ್ಠ 200 ಕಿ.ಮೀ. ಲೆಕ್ಕದಲ್ಲಿ ಒಂದು ಬಸ್‌ಗೆ 9000 ರೂ. ನೀಡುವಂತೆ ಸರ್ಕಾರಕ್ಕೆ ತಿಳಿಸಿದ್ದು, ಸರ್ಕಾರ ಬಸ್‌ ಸೇವೆಗೆ ಹಣ ನೀಡಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ತನ್ನ ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.

ಸ್ಕ್ಯಾನ್‌, ಸ್ಯಾನಿಟೈಸರ್‌: ಮಂಗಳವಾರ ಕಚೇರಿಗಳಿಗೆ ಆಗಮಿಸಿದ ಎಲ್ಲ ಅಧಿಕಾರಿಗಳಿಗೂ ಕಡ್ಡಾಯವಾಗಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳ ಮುಖ್ಯದ್ವಾರಗಳ ಬಳಿ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿ, ದೇಹದ ಉಷ್ಣಾಂಶ ಪರೀಕ್ಷೆಗೆ ಥರ್ಮಲ್‌ ಸ್ಕ್ಯಾನ್‌ ಹಾಗೂ ಕೈಗಳಿಗೆ ಸ್ಯಾನಿಟೈಸರ್‌ ಬಳಸಿ ಕಚೇರಿಗೆ ಹಾಜರಾಗುವಂತೆ ನೋಡಿಕೊಳ್ಳಲಾಗಿದೆ.

Advertisement

50 ವರ್ಷ ಮೀರಿದವರ ಹಾಜರಿ ಗೊಂದಲ
ಸರ್ಕಾರ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಾಗಬೇಕು ಎಂದು ಆದೇಶ ಹೊರಡಿಸಿದ್ದು, 50 ವರ್ಷ ಮೀರಿದವರು ಹಾಗೂ ಮಧುಮೇಹ, ಅಸ್ತಮ ಸೇರಿದಂತೆ ಮತ್ತಿತರ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವವರ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಇದರಿಂದ ಗೊಂದಲಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. 50 ವರ್ಷ ಮೀರಿದ ಕೆಲವು ಸಿಬ್ಬಂದಿ ಬಹುಮಹಡಿ ಕಟ್ಟದಲ್ಲಿ ಏಳೆಂಟು ಮಹಡಿ ಹತ್ತಬೇಕಿದೆ. ಹಾಗಾಗಿ, ಲಿಫ್ಟ್ ಹೆಚ್ಚಿಗೆ ಬಳಸದಂತೆ ಆದೇಶದಲ್ಲಿ ಸೂಚಿಸಿದ್ದರೂ, ಈ ವರ್ಗಕ್ಕೆ ಬಳಕೆ ಅನಿವಾರ್ಯವಾಗಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಚೇರಿಗೆ ಹಾಜರಾಗಲು ಕೆಲವು ಸಿಬ್ಬಂದಿಗೆ ವಾಹನ ಸೌಲಭ್ಯ  ಇಲ್ಲದಿರುವುದರಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಬ್ಬಂದಿಗೆ ವಾಹನ ಸೌಲಭ್ಯ ಕಲ್ಪಿಸುವಂತೆ ಮುಖ್ಯಕಾರ್ಯದರ್ಶಿಗೆ ಮನವಿ ಮಾಡಿದ್ದೇವೆ. ಮೊದಲ ದಿನ ಸ್ವಲ್ಪ ಗೊಂದಲವಾಗಿದೆ. ಕೆಲವು ಅಧಿಕಾರಿಗಳು ತಮ್ಮ ವಾಹನಗಳಲ್ಲಿಯೇ ಸಿಬ್ಬಂದಿಯನ್ನು
ಕರೆಸಿಕೊಳ್ಳುವ ಕೆಲಸ ಮಾಡಿದ್ದಾರೆ.
●ಸಿ.ಎಸ್‌. ಷಡಕ್ಷರಿ, ಅಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ

●ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next