Advertisement

ಗೋಶಾಲೆಗಳಿಗೆ ಆರ್ಥಿಕ ಸಂಕಷ್ಟ; ನಿರ್ವಹಣೆಯೇ ಸವಾಲು!

10:52 PM Jan 10, 2021 | Team Udayavani |

ಮಹಾನಗರ: ಅಕ್ರಮ ಗೋ ಸಾಗಾಟವನ್ನು ತಡೆದು ಪೊಲೀಸರು ವಶಪಡಿಸಿಕೊಂಡ ಗೋವುಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇರವಾಗಿ ಖಾಸಗಿ ಗೋಶಾಲೆಗಳಿಗೆ ಕಳುಹಿಸಲಾಗುತ್ತಿದೆ. ಯಾಕೆಂದರೆ ಇಲ್ಲಿ ಸರಕಾರಿ ಗೋಶಾಲೆಗಳೇ ಇಲ್ಲ. ಆದರೆ ಖಾಸಗಿ ಗೋಶಾಲೆಗಳಿಗೆ ಸೂಕ್ತ ವ್ಯವಸ್ಥೆಗಳು ಇಲ್ಲದ ಕಾರಣದಿಂದ ಅವುಗಳ ನಿರ್ವಹಣೆಯೇ ಇಲ್ಲಿ ಬಹುದೊಡ್ಡ ಸವಾಲಾಗಿದೆ!

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 20 ಖಾಸಗಿ ಗೋಶಾಲೆಗಳಿವೆ. ಪಜೀರು, ಸೌತಡ್ಕ, ಸುಬ್ರಹ್ಮಣ್ಯ ಗೋ ಶಾಲೆ ಸಹಿತ ಜಿಲ್ಲೆಯ ಮೂರು ಗೋ ಶಾಲೆಗಳಲ್ಲಿ 300ಕ್ಕಿಂತ ಅಧಿಕ ಗೋವುಗಳಿದೆ. ಉಳಿದ 17 ಗೋಶಾಲೆಗಳಲ್ಲಿ ಕನಿಷ್ಠ 80ಕ್ಕೂ ಅಧಿಕ ಗೋವುಗಳಿವೆ. ಸ್ಥಳೀಯ ಮಠ ಮಂದಿರ, ಸಂಘ – ಸಂಸ್ಥೆಗಳ ನೇತೃತ್ವದಲ್ಲಿ ಈ ಗೋಶಾಲೆಗಳ ನಿರ್ವಹಣೆ ನಡೆಯುತ್ತಿದೆ.

ಸದ್ಯ ಕಾರ್ಯನಿರ್ವಹಿಸುತ್ತಿರುವ ಗೋಶಾಲೆಗಳ ಪೈಕಿ ಕೆಲವು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಸರಕಾರದ ಪ್ರಕಾರ, ಗೋಶಾಲೆಯಲ್ಲಿ ಜಾನುವಾರು ನಿರ್ವಹಣ ವೆಚ್ಚ ಪ್ರತೀ ದಿನಕ್ಕೆ 70 ರೂ.ಗಳಿವೆ. ಇದರಲ್ಲಿ ಶೇ.25ರಷ್ಟನ್ನು (17.50 ರೂ.)ಮಾತ್ರ ಗೋಶಾಲೆಗಳಿಗೆ ಸರಕಾರ ಸಹಾಯಧನವಾಗಿ ನೀಡುತ್ತಿದೆ. ಉಳಿದ ಹಣವನ್ನು ಗೋಶಾಲೆಯವರೇ ಭರಿಸಬೇಕಾಗಿದೆ. ಗೋಶಾಲೆಯಲ್ಲಿ 300ಕ್ಕಿಂತ ಅಧಿಕ ದನ ಕರು ಇದ್ದರೂ ಸರಕಾರದ ಅನುದಾನ ಸಿಗುವುದು ಕೇವಲ 200ಕ್ಕೆ ಮಾತ್ರ! ಉಳಿದ ಗೋವುಗಳ ಪಾಲನೆಯನ್ನು ಗೋಶಾಲೆಯವರೇ ಮಾಡಬೇಕಿದೆ. ಹೀಗಾಗಿ ಲಾಕ್‌ಡೌನ್‌ ಬಳಿಕ ಹಣ ಹೊಂದಿಸುವುದೇ ಗೋಶಾಲೆಯವರಿಗೆ ಕಷ್ಟವಾಗುತ್ತಿದೆ.

ಹೊರೆಯ ಮೇಲೊಂದು ಹೊರೆ! :

ಮೊದಲೇ ಸಂಕಷ್ಟದಲ್ಲಿರುವ ಜಿಲ್ಲೆಯ ಗೋಶಾಲೆಗಳಿಗೆ ಪುತ್ತೂರು ತಾಲೂಕಿನ ಕೊçಲದ ಜಾನುವಾರು ಸಂವರ್ಧನ ಕೇಂದ್ರದಲ್ಲಿರುವ ಆಯ್ದ ಕೆಲವು ಜಾನುವಾರುಗಳನ್ನು ತೆಗೆದುಕೊಂಡು ಹೋಗುವ ಹೊಸ ಸವಾಲು ಎದುರಾಗಿದೆ. ಮುರ್ರಾ ಕೋಣ/ಗಂಡು ಕರು, ಸುರ್ತಿ ಕೋಣ, ಮಲೆನಾಡು ಗಿಡ್ಡ ಗಂಡು ರಾಸು, ಮಿಶ್ರತಳಿ ಗಂಡು ರಾಸುಗಳನ್ನು ನಿಯಮಿತವಾಗಿ ಎಲ್ಲ ಗೋಶಾಲೆಯವರು ಪಡೆದುಕೊಂಡು ಹೋಗುವಂತೆ ಕೇಂದ್ರದಿಂದ ಸೂಚನೆ ನೀಡಲಾಗಿದೆ. ಇದರ ನಿರ್ವಹಣೆಯನ್ನು ಗೋಶಾಲೆಯವರೇ ನೋಡಿಕೊಳ್ಳಬೇಕಿದೆ. ಇದು ಗೋಶಾಲೆಯವರಿಗೆ ಹೊರೆಯಾಗುತ್ತಿದೆ ಎಂಬ ದೂರು ಕೇಳಿಬಂದಿದೆ.

Advertisement

ಸಂಕಷ್ಟದ ಸ್ಥಿತಿ :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋವುಗಳನ್ನು ನಿರ್ವ ಹಣೆ ಮಾಡಲು ಗೋಶಾಲೆಗೆ ನೀಡಿದರೆ ಇಲ್ಲ ಅನ್ನುವುದಿಲ್ಲ. ಆದರೆ ಸರಕಾರದಿಂದ ಸೂಕ್ತ ಅನುದಾನವಿಲ್ಲ; ಇನ್ನೊಂದೆಡೆ ಪೊಲೀಸರು ವಶಪಡಿಸಿದ ಗೋವುಗಳನ್ನು ಕೂಡ ಖಾಸಗಿ ಗೋ ಶಾಲೆಯವರೇ ನೋಡಬೇಕಿರುವುದರಿಂದ ಏನು ಮಾಡುವುದು? ಎಂಬ ಸಂಕಷ್ಟದ ಸ್ಥಿತಿಯಿದೆ. ಜಾಗದ ಕೊರತೆ-ಇನ್ನೊಂದೆಡೆ ಆರ್ಥಿಕ ಸಮಸ್ಯೆ ಇದರ ನಡುವೆ ಗೋಶಾಲೆಗಳು ಸದ್ಯ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಸಮಸ್ಯೆ ಇದ್ದರೂ ಸರಕಾರಿ ಗೋಶಾಲೆ ದ.ಕ. ಜಿಲ್ಲೆಯಲ್ಲಿ ಆರಂಭಿಸುವ ಬಗ್ಗೆ ಸರಕಾರ ಇನ್ನೂ ಮನಸ್ಸು ಮಾಡಿಲ್ಲ!

ಗೋಶಾಲೆಗಳಿಗೆ ಈಗ ನೀಡುವ ಜಾನುವಾರು ನಿರ್ವಹಣ ವೆಚ್ಚ ಕೇವಲ 17.50 ರೂ. ನೀಡುತ್ತಿದ್ದು, ನಮಗೆ ಸುಮಾರು 70 ರೂ. ವೆಚ್ಚವಾಗುತ್ತಿದೆ. ಹೀಗಾಗಿ ಸರಕಾರವು ನಿರ್ವಹಣ ವೆಚ್ಚ ನೀಡುವ ಪ್ರಮಾಣ ಏರಿಕೆ ಮಾಡಬೇಕಿದೆ. 200 ಗೋವುಗಳಿಗೆ ಮಾತ್ರ ಎಂದು ಸೀಮಿತಗೊಳಿಸುವುದು ಕೂಡ ಸರಿಯಲ್ಲ. ಜಿಲ್ಲಾಡಳಿತದ ವತಿಯಿಂದ ಗೋ ಸಂರಕ್ಷಣೆಗೆ ಪರ್ಯಾಯ ಗೋಶಾಲೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ.ಡಾ| ಪಿ. ಅನಂತಕೃಷ್ಣ ಭಟ್‌, ಕಾರ್ಯದರ್ಶಿ, ಗೋವನಿತಾಶ್ರಯ ಟ್ರಸ್ಟ್‌

Advertisement

Udayavani is now on Telegram. Click here to join our channel and stay updated with the latest news.

Next