Advertisement

ಬಡವರ ಹೆಸರಲ್ಲಿ ಸಾಲ ಪಡೆದು ವಂಚನೆ

12:08 PM Dec 23, 2021 | Team Udayavani |

ಕೋಲಾರ: ಇಲ್ಲಿನ ಗಾಂಧಿನಗರ ಸೇರಿದಂತೆ ಜಿಲ್ಲೆಯಲ್ಲಿ ಬಡವರ ಹೆಸರಿನಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ನೇರ ಸಾಲ ಪಡೆದು ವಂಚಿಸಿರುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಡೀಸಿ ಕಚೇರಿ ಮುಂದೆ ಬುಧವಾರ ದಲಿತ ಹಕ್ಕುಗಳ ಸಮಿತಿ ಡಿಎಚ್‌ ಎಸ್‌ ವತಿಯಿಂದ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲೆಯಲ್ಲಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯ ಬಡವರ ಆದಾಯ ಹೆಚ್ಚು ಮಾಡಿಕೊಂಡು, ಸ್ವಾವಲಂಬನೆಯಿಂದ ಬದುಕಲು ಹಲವು ಯೋಜನೆ ಹಮ್ಮಿಕೊಂಡಿದೆ. ಕೆಲವು ದಳ್ಳಾಳಿ ಗಳ ಮತ್ತು ಭ್ರಷ್ಟ ಅಧಿಕಾರಿಗಳ ಸಹಕಾರದಿಂದ ಆರ್ಹ ಫಲಾನುಭವಿಗಳ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಇತ್ತೀಚೆಗೆ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿಯಿಂದ ತಂಡವೊಂದು ಗಾಂಧಿನಗರಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಈ ಸಂದರ್ಭದಲ್ಲಿ ಗಾಂಧಿನಗರದ ಬಡವರ ಹೆಸರಿನಲ್ಲಿ ಸಾಲ ಪಡೆದು ವಂಚಿಸಿರುವ ವಿಷಯ ಗೊತ್ತಾಯಿತು ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಧಿಕಾರಿಗಳ ಸಹಕಾರದಿಂದ ಸಾಲ: ಡಿಎಚ್‌ಎಸ್‌ ಮುಖಂಡ ಪಿ.ವಿ.ರಮಣ್‌ ಮಾತನಾಡಿ, ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ 2016-2017ನೇ ಸಾಲಿನಲ್ಲಿ ನೇರ ಸಾಲ ಯೋಜನೆಯಡಿ ಕುರಿ ಖರೀದಿಸಲು 45 ಸಾವಿರ ಸಾಲ ಪಡೆಯಲಾಗಿದೆ.

ನಿಗಮಕ್ಕೆ ಸಾಲ ಕೋರಿ ಅರ್ಜಿ ಸಲ್ಲಿಸಿದ್ದ ಕೆಲವರು ಕಚೇರಿಯ ಸುತ್ತ ಸಾಕಷ್ಟು ಬಾರಿ ಅಲೆದಾಡಿದರೂ ಸಾಲ ಮಂಜೂರು ಆಗದ ಕಾರಣ ಸುಮ್ಮನಾಗಿದ್ದರು. ಬಹುತೇಕ ಮಂದಿ ನಿಗಮಕ್ಕೆ ನೇರವಾಗಿ ಅರ್ಜಿ ಸಲ್ಲಿಸಿಲ್ಲ. ಕೆಲವು ದಳ್ಳಾಳಿಗಳು ಬಡವರಿಗೆ ಆಸೆ ಆಮಿಷಗಳನ್ನು ತೋರಿ, ಅವರಿಂದ ದಾಖಲೆಗಳನ್ನು ಪಡೆದು ಅಧಿಕಾರಿಗಳ ಸಹಕಾರದಿಂದ ಸಾಲ ಪಡೆದಿದ್ದಾರೆ ಎಂದು ಆರೋಪಿಸಿದರು.

Advertisement

ಭ್ರಷ್ಟ ಅಧಿಕಾರಿಗಳ ಕುಮ್ಮಕ್ಕು: ಸಂಘಟನೆಯ ಮುಖಂಡ ಕೆ.ವಿ ಮಂಜುನಾಥ್‌ ಮಾತನಾಡಿ, ನಾವು ವಾಸಿಸುವ ಗಾಂಧಿನಗರ ಪ್ರದೇಶದಲ್ಲಿ ಯಾರಿಗೂ ದಾಖಲೆ ನೀಡದಿದ್ದರೂ, ಅವರ ದಾಖ ಲೆಗಳು ಮತ್ತು ಸಹಿಯನ್ನು ಪೋರ್ಜರಿ ಮಾಡಿ, ಅಧಿಕಾರಿಗಳ ಸಹಕಾರದಿಂದ ಸಾಲ ಪಡೆದಿದ್ದಾರೆ. ಸಾಲ ಮಂಜೂರು ಮಾಡಿದ ನಂತರ ಕುರಿಗಳನ್ನು ಫಲಾನುಭವಿಗಳಿಗೆ ನೀಡಿದಂತೆ ಫೋಟೋಗಳನ್ನು ಕ್ರಿಯೇಟ್‌ ಮಾಡಲಾಗಿದೆ.

ಬಡವರ ಸ್ವಾವಲಂಬಿ ಬದುಕಿಗೆ ಆಸರೆಯಾಗಬೇಕಾಗಿದ್ದ ಈ ಯೋಜನೆಯನ್ನು ನಿಗಮದ ಕೆಲವು ಭ್ರಷ್ಟ ಅಧಿ ಕಾರಿಗಳ ಕುಮ್ಮಕ್ಕಿನಿಂದ ಇಂತಹ ಘಟನೆಗಳು ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ತಿಳಿಸಿದರು. ತನಿಖೆಗೆ ವಿಶೇಷ ತಂಡ ರಚಿಸಿ: ನಿಗಮದಿಂದ 2016ರಿಂದ 19ನೇ ಸಾಲಿನಲ್ಲಿ ನೇರ ಸಾಲ ಯೋಜನೆಯಡಿ ಬಿಡುಗಡೆಯಾಗಿರುವ ಸಾಲವು ಫಲಾನುಭವಿಗಳಿಗೆ ತಲುಪದೇ ದುರುಪಯೋಗವಾಗಿದೆ.

ಈ ಕುರಿತು ಕೂಲಂಕಶವಾಗಿ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಬೇಕು. ಇದರಲ್ಲಿ ಶಾಮೀಲಾಗಿರುವ ದಲ್ಲಾಳಿಗಳು ಮತ್ತು ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. ಸಿಪಿಐಎಂ ತಾಲೂಕು ಕಾರ್ಯದರ್ಶಿ ಟಿ.ಎಂ ವೆಂಕಟೇಶ್‌, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ವಿಜಯಕೃಷ್ಣ, ಭೀಮರಾಜ್‌, ಆಶಾ, ಸುಶೀಲಾ, ಭಗತ್‌ ನಾರಾಯಣಸ್ವಾಮಿ, ಶಿಲ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next