Advertisement

Financial fraud; ಆರ್ಥಿಕ ವಂಚನೆ ತಡೆಗೆ ಬೇಲಿ ಅಗತ್ಯ

11:42 PM Dec 04, 2023 | Team Udayavani |

ಇಂದು ದೇಶದ ಆರ್ಥಿಕತೆಯಲ್ಲಿ ಡಿಜಿಟಲ್‌ ವ್ಯವಹಾರ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ನಾವು ಈಗಾಗಲೇ ಡಿಜಿಟಲ್‌ ವ್ಯವಹಾರದಲ್ಲಿ ಸಾಕಷ್ಟು ಮುಂದೆ ಸಾಗಿಯಾಗಿದೆ. ಭೌತಿಕ ಕರೆನ್ಸಿಯ ಚಲಾವಣೆ ಸಾಕಷ್ಟು ಇಳಿಕೆಯಾಗಿದೆ. ಸರಕಾರ ಕೂಡ ಡಿಜಿಟಲ್‌ ವ್ಯವಹಾರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಇದಕ್ಕೆ ಕಾರಣ. ಇಂದು ದಿಲ್ಲಿಯಿಂದ ಹಳ್ಳಿ ಹಳ್ಳಿಯ ವರೆಗೂ ಡಿಜಿಟಲ್‌ ವ್ಯವಹಾರ ವ್ಯಾಪಿಸಿದೆ. ಇದಕ್ಕೆ ಮೂಲ ಕಾರಣ ಮೊಬೈಲ್‌ ಅಂದರೆ ಖಂಡಿತ ತಪ್ಪಾಗದು. ಆದರೆ ಇಷ್ಟೆಲ್ಲ ಕಾರ್ಯಗಳನ್ನು ನಿರ್ವ ಹಿಸುವ, ಒಬ್ಬ ವ್ಯಕ್ತಿಯ ಪೂರ್ತಿ ಹಣಕಾಸು ವ್ಯವಹಾರ ನಡೆಯುವ ಈ ಮೊಬೈಲ್‌ನ ವ್ಯವಹಾರಗಳಿಗೆ ಸಂಬಂ ಧಿಸಿ ಇಂದು ಸರಿಯಾದ ಭದ್ರತೆ ಇಲ್ಲವಾಗಿದೆ. ಜನಸಾ ಮಾನ್ಯರ ಕೋಟ್ಯಂತರ ರೂಪಾಯಿ ಯಾರ್ಯಾರೋ ಹ್ಯಾಕರ್‌ಗಳ ಪಾಲಾಗುತ್ತಿದೆ. ಇದನ್ನು ತಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ.

Advertisement

ಒಂದು ಬ್ಯಾಂಕ್‌ ಮಾಡುವ ಬಹುತೇಕ ಎಲ್ಲ ಕೆಲಸಗ ಳನ್ನು ಇಂದು ಅಂಗೈಯಲ್ಲಿರುವ ಮೊಬೈಲ್‌ ಕ್ಷಣ ಮಾತ್ರದಲ್ಲಿ ಮಾಡುತ್ತಿದೆ. ಇಂದು ಇದೆಲ್ಲ ಎಷ್ಟು ಸುಲಭವಾಗಿ ನಡೆಯುತ್ತಿದೆಯೋ ಅಷ್ಟೇ ಸುಲಭವಾಗಿ ಹ್ಯಾಕರ್‌ಗಳು ಹಣ ಕದಿಯುವ ಕೆಲಸವನ್ನು ಆಗಾಗ್ಗೆ ಮಾಡುತ್ತಿದ್ದಾರೆ. ಕಠಿನ ಪಾಸ್‌ವರ್ಡ್‌, ಒಟಿಪಿಗಳ ಅನುಷ್ಠಾನವೂ ಕೆಲವೊಮ್ಮೆ ವಿಫ‌ಲವಾಗಿ ಬೆವರು ಸುರಿಸಿದ ಹಣ ಎಲ್ಲೋ ಕಂಪ್ಯೂಟರ್‌ ಅಥವಾ ಮೊಬೈಲ್‌ ಎದುರು ಕುಳಿತವನ ಖಾತೆ ಸೇರಿ ಎಲ್ಲೆಲ್ಲೋ ಹೋಗಿ ಪತ್ತೆ ಹಚ್ಚಲೇ ಸಾಧ್ಯವಾಗದಲ್ಲಿಗೆ ತಲುಪುತ್ತದೆ ಎಂದರೆ ಬ್ಯಾಂಕಿಂಗ್‌ ಸಂಸ್ಥೆಗಳ ತಂತ್ರಜ್ಞಾನಕ್ಕಿಂತಲೂ ಮುಂದುವರಿದ ತಂತ್ರಜ್ಞಾನವನ್ನು ಕಳ್ಳರು ಕರಗತ ಮಾಡಿಕೊಂಡಿದ್ದಾರೆ ಎಂದರೆ ಅದು ಅತಿಶಯೋ ಕ್ತಿಯಾಗಲಾರದು.

ಆನ್‌ಲೈನ್‌ ಮೂಲಕ ನಡೆಯುತ್ತಿರುವ ವಂಚನೆಗಳನ್ನು ತಡೆಯಲು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ಮತ್ತು ಸರಕಾರ ನಿರಂತರ ನೀತಿ ನಿರೂಪಣೆ ಎಚ್ಚರಿಕೆ ಕ್ರಮಗಳನ್ನು ವಹಿಸುತ್ತಲೇ ಬಂದಿದ್ದರೂ ಸಮಸ್ಯೆಗೆ ಪೂರ್ಣವಾಗಿ ತಡೆಯೊಡ್ಡಲು ಇನ್ನೂ ಸಾಧ್ಯವಾಗಿಲ್ಲ. ಈ ರೀತಿಯ ವಂಚನೆಯ ಜಾಲದಲ್ಲಿದ್ದ ಸುಮಾರು 70 ಲಕ್ಷ ಮೊಬೈಲ್‌ ನಂಬರ್‌ಗಳನ್ನು ಇತ್ತೀಚೆಗೆ ಅಮಾನತು ಮಾಡಿ ಅದರ ಮೂಲಕ ನಡೆಯುತ್ತಿದ್ದ ಎಲ್ಲ ವ್ಯವಹಾರಗಳಿಗೆ ತಡೆ ನೀಡ ಲಾಗಿದೆ. ಈ ಮೊಬೈಲ್‌ ಸಂಖ್ಯೆಗಳ ಡಿಜಿಟಲ್‌ ಪಾವತಿ ವ್ಯವಸ್ಥೆ ಮೂಲಕ ಲಕ್ಷಗಟ್ಟಲೆಯಿಂದ ಕೋಟಿಗಟ್ಟಲೆ ಮೊತ್ತದವರೆಗೆ ಸಂಶಯಾಸ್ಪದ ವ್ಯವಹಾರಗಳು ನಡೆಯುತ್ತಿರುವುದನ್ನು ಬ್ಯಾಂಕ್‌ಗಳು ಗಮನಿಸಿ ಸರಕಾರ ಮತ್ತು ಬ್ಯಾಂಕಿಂಗ್‌ ನಿಗಾ ವ್ಯವಸ್ಥೆಗೆ ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆದರೆ ಇದು ಪರ್ಯಾಪ್ತವೇ ಎಂಬುದು ಪ್ರಶ್ನೆ.

ಸರಕಾರ ಇನ್ನೊಂದು ಹೆಜ್ಜೆ ಮುಂದುವರಿದು ಏಕಕಾಲ ದಲ್ಲಿ ಬೃಹತ್‌ ಸಂಖ್ಯೆಯಲ್ಲಿ ಮೊಬೈಲ್‌ ಸಿಮ್‌ ಮಾರಾ ಟವನ್ನು ನಿಷೇಧಿಸಿದೆ. ಮಾತ್ರವಲ್ಲದೆ ಮೊಬೈಲ್‌ ಸಿಮ್‌ ಮಾರಾಟ ಮಾಡುವವರನ್ನು ಜವಾಬ್ದಾರರನ್ನಾಗಿ ಮಾಡಿದ್ದು, ಅವರು ಈ ಬಗ್ಗೆ ಪರವಾನಿಗೆ ಪಡೆದಿ ರುವುದು ಕಡ್ಡಾಯ. ಮಾತ್ರವಲ್ಲದೆ, ಗ್ರಾಹಕರ ಕೆವೈಸಿ ಯನ್ನು ಸಮರ್ಪಕವಾಗಿ ಮತ್ತು ಕಡ್ಡಾಯವಾಗಿ ಸಂಗ್ರಹಿಸಬೇಕೆಂದು ಕಟ್ಟಾಜ್ಞೆ ವಿಧಿಸಿದೆ. ಇದರಿಂದ ಹ್ಯಾಕರ್‌ಗಳಿಗೆ ಬೇಕಾಬಿಟ್ಟಿ ಸಿಮ್‌ ಸಿಗುವುದು ಕಷ್ಟವಾಗಬಹುದು. ಇವಿಷ್ಟು ಅಲ್ಲದೆ, ಆನ್‌ಲೈನ್‌ ವ್ಯವಹಾರದಲ್ಲಿನ ವಂಚನೆ ತಡೆಯಲು ಶೀಘ್ರವೇ ಸರಕಾರ ಇನ್ನೊಂದು ನಿಯಮ ತರಲು ಮುಂದಾಗಿದೆ. ಅಪರಿಚಿತ ವ್ಯಕ್ತಿಗೆ 2,000 ರೂ.ಗಳಿಗಿಂತ ಹೆಚ್ಚಿನ ಮೊತ್ತ ಪಾವತಿಸುವ ವೇಳೆ ನಾಲ್ಕು ಗಂಟೆ ವಿಳಂಬವಾಗಿ ಹಣ ಖಾತೆಗೆ ಸೇರುವಂತೆ ಮಾಡುವುದು ಈ ನಿಯಮ. ಯುಪಿಐಗೆ ಮಾತ್ರವಲ್ಲದೆ ತತ್‌ಕ್ಷಣ ಪಾವತಿ ಸೇವೆ (ಐಎಂಪಿಎಸ್‌) ಮತ್ತು ಆರ್‌ಟಿಜಿಎಸ್‌ಗೆ ಕೂಡ ಅನ್ವಯಿಸುವ ಚಿಂತನೆ ಇದೆ. ಆದರೆ ಡಿಜಿಟಲ್‌ ಪಾವತಿಗೆ ಪ್ರೋತ್ಸಾಹಿಸುವ ಹಂತದಲ್ಲಿ ಇದೊಂದು ಅಡ್ಡಿಯಾಗುವ ಸಾಧ್ಯತೆ ಇದೆ ಎಂಬ ಆತಂಕವೂ ಇದೆ. ಈ ನಿಟ್ಟಿನಲ್ಲಿ ಇದನ್ನು ವ್ಯವಸ್ಥಿತಗೊಳಿಸುವ ಕಾರ್ಯ ಯೋಜನೆಯನ್ನು ಸರಕಾರ ಪರಿಶೀಲಿಸುತ್ತಿದೆ. ನಮ್ಮ ಖಾತೆಯಿಂದ ಅಪರಿಚಿತನ ಖಾತೆಗೆ ಹಣ ಹೋದರೆ ಅಥವಾ ಕದ್ದರೆ ನಮಗೆ ಬರುವ ಸಂದೇಶವನ್ನು ತಿಳಿದ ಕೂಡಲೇ ಹಣ ವರ್ಗಾವಣೆ ಆಗುವುದನ್ನು ತಡೆಯು ವುದು ಇದರ ಉದ್ದೇಶ. ಆದರೆ ಸ್ಥಳೀಯವಾಗಿ ಗೊತ್ತಿದ್ದರೂ ಆತನೊಂದಿಗೆ ಮೊದಲ ವ್ಯವಹಾರ ಈ ರೀತಿ ವಿಳಂಬವಾದರೆ ಕಷ್ಟ ಎಂಬ ಅಭಿಪ್ರಾಯವೂ ಇದೆ. ಇದಕ್ಕೆ ಸರಕಾರವು ವಿಶ್ವಾಸಾರ್ಹ ಸಂಖ್ಯೆ, ಸಂಸ್ಥೆಗಳಿಗೆ ಪ್ರತ್ಯೇಕ ಮಾನ್ಯತೆ (ವೆರಿಫಿಕೇಶನ್‌ ಚಿಹ್ನೆ) ನೀಡಬೇಕೆಂಬ ಆಗ್ರಹವೂ ಇದೆ. ಈ ನಿಯಮ ಇನ್ನೂ ರೂಪುರೇಷೆಯಲ್ಲಿರುವುದರಿಂದ ಅದರ ಪೂರ್ಣ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. ಆದರೆ ನಾಲ್ಕು ತಾಸುಗಳ ವಿಳಂಬ ಎಂಬುದು ಈಗಿನ ಕಾಲಕ್ಕೆ ತಕ್ಕುದಾದುದಲ್ಲ. ರಾಜ್ಯದಲ್ಲಿಯೇ ಅತೀ ಹೆಚ್ಚು ವಂಚನೆ ಉದ್ಯೋಗ ಆಮಿಷ, ಹಣ ದ್ವಿಗುಣ, ಉಡುಗೊರೆ ಆಮಿಷ, ಕೆವೈಸಿ ಮಾಹಿತಿ, ಲಾಟರಿ ಹೀಗೆಂದು ಬಹುವೇಷಗಳಲ್ಲಿ ವಕ್ಕರಿಸುವ ಸೈಬರ್‌ ಕಳ್ಳರು ಜನಸಾಮಾನ್ಯರನ್ನು ಯಾಮಾರಿಸುವುದರಲ್ಲಿ ಸದಾ ನಿಸ್ಸೀಮರು. ವಿದ್ಯಾವಂತರ, ಟೆಕ್ಕಿಗಳ ತವರೂರು ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರಿನಲ್ಲಿ ದೇಶದಲ್ಲಿಯೇ ಗರಿಷ್ಠ ಮೊತ್ತದ ಆರ್ಥಿಕ ವಂಚನೆ ನಡೆಯುತ್ತಿರುವುದು ಆಶ್ಚರ್ಯವೇ ಸರಿ. ಸ್ವತಃ ಆರ್‌ಬಿಐ ನೀಡಿರುವ ಮಾಹಿತಿಯಂತೆ ಈ ವರ್ಷದ ಒಂಬತ್ತು ತಿಂಗಳ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 12,615 ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿದ್ದು, 470 ಕೋಟಿ ರೂ. ಖದೀಮರ ಖಾತೆಗೆ ಹೋಗಿದೆ. ಅಂದರೆ ದಿನವೊಂದಕ್ಕೆ 1.71 ಕೋಟಿ ರೂ. ವಂಚಕರ ಕೈ ಸೇರುತ್ತಿದೆ. ಇನ್ನು ದೇಶದಲ್ಲಿ ಒಂದು ವರ್ಷದ ಅವಧಿಯಲ್ಲಿ ಒಟ್ಟಾರೆಯಾಗಿ 30 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಅಪರಿಚಿತ ವಂಚಕರ ಕೈಸೇರಿದೆ ಎಂದರೆ ಈ ಜಾಲ ಎಷ್ಟೊಂದು ವ್ಯವಸ್ಥಿತವಾಗಿದೆ ಎಂಬುದು ಗೊತ್ತಾಗುತ್ತದೆ.

ಪರಿಹಾರವೇನು?
ಗ್ರಾಹಕರು ಎಷ್ಟೇ ಎಚ್ಚರಿಕೆ ವಹಿಸಿದರೂ ಸರಕಾರಿ ಮಟ್ಟದಲ್ಲಿ ಹೆಚ್ಚಿನ ಭದ್ರತೆ ಒದಗಿಸುವ ಕಾರ್ಯ ಆಗಬೇಕಿದೆ. ಏಕೆಂದರೆ ಇತ್ತೀಚೆಗೆ ಕೆಲವು ಪ್ರಕರಣಗಳಲ್ಲಿ ಗ್ರಾಹಕರಿಗೆ ಕನಿಷ್ಠ ಸಂದೇಶವೂ (ಎಸ್‌ಎಂಎಸ್‌) ಬಾರದೆ ಹಣ ಲಪಟಾ ಯಿಸಲಾಗಿದೆ. ಅದರಲ್ಲೂ ಆಧಾರ್‌ ಸಂಖ್ಯೆ ಆಧಾರಿತ ಡಾಟಾ ಕದ್ದು ಹಣ ವರ್ಗಾಯಿಸಿದ್ದು ಹೆಚ್ಚಿನವರಿಗೆ ಗೊತ್ತೇ ಆಗಲಿಲ್ಲ. ಎಷ್ಟೋ ಮಂದಿ ವಿದ್ಯಾವಂತ ಜಾಗೃತ ಗ್ರಾಹಕರು ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಇಂತಹ ವಂಚನೆಯನ್ನು ತಡೆಯಲು ಸರಕಾರವೇ ಸೂಕ್ತ ಕ್ರಮ ಕೈಗೊಳ್ಳಬೇಕಷ್ಟೇ. ಉಳಿದಂತೆ ಗ್ರಾಹಕರು ಮತ್ತು ಬ್ಯಾಂಕ್‌ ಸಹಿತ ಹಣಕಾಸು ಸಂಸ್ಥೆಗಳು ಎಚ್ಚರಿಕೆ ವಹಿಸುವುದು ಅಗತ್ಯ. ಯಾವುದೇ ಗ್ರಾಹಕ ತನ್ನ ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿ ಯಾವುದೇ ಮಾಹಿತಿಯನ್ನು ವಿವಿಧ ರೂಪಗಳಲ್ಲಿ ಕರೆ ಮೂಲಕ ಸಂಪರ್ಕಿಸುವ ಅಪರಿಚಿತರೊಂದಿಗೆ ಹಂಚಿಕೊಳ್ಳ ಲೇಬಾರದು. ಒಟಿಪಿ ಬಂದರೆ ಅದನ್ನು ಯಾರಿಗೂ ತಿಳಿಸಲೇಬಾರದು (ಈ ರೀತಿ ಫೋನ್‌ ಮೂಲಕ ಯಾವುದೇ ಬ್ಯಾಂಕ್‌ಗಳು ಮಾಹಿತಿ ಕೇಳುವುದೇ ಇಲ್ಲ). ಇದರ ಜತೆಗೆ ಬ್ಯಾಂಕ್‌ಗಳು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಹಣ ವರ್ಗಾವಣೆಯಾಗುತ್ತಿದ್ದರೆ ಅಥವಾ ಬೇರೆ ರಾಜ್ಯ, ದೇಶಗಳಿಗೆ ಹಣ ಹೋಗುತ್ತಿರುವುದು ಗೊತ್ತಾದರೆ ಕೂಡಲೇ ಗ್ರಾಹಕರನ್ನು ಎಚ್ಚರಿಸುವ ಪ್ರಯತ್ನ ಮಾಡಬೇಕು. ಕನಿಷ್ಠ ಸಂದೇಶ ಕಳುಹಿಸಿಯಾದರೂ ಅವರಿಂದ ಸಮ್ಮತಿಯನ್ನು ಪಡೆಯುವ ವ್ಯವಸ್ಥೆ ಜಾರಿಗೊಳಿಸಿದರೆ ಎಷ್ಟೋ ವಂಚನೆಗಳನ್ನು ತಡೆಯಲು ಸಾಧ್ಯವಿದೆ. ಮುಖ್ಯವಾಗಿ ಇಂತಹ ವಂಚಕರು ಬೆಳಗ್ಗೆ ಅಥವಾ ಸಂಜೆಯ ಒತ್ತಡದ ಸಮಯದಲ್ಲಿ ಕರೆ ಮಾಡಿ ಬ್ಯಾಂಕ್‌ನಿಂದ ಮಾತನಾಡುವುದಾಗಿ ಹೇಳಿ ಮಾಹಿತಿ ಸಂಗ್ರಹಿಸಿ ಕೈ ಚಳಕ ತೋರುತ್ತಾರೆ. ಇತ್ತೀಚೆಗೆ ಬೆದರಿಕೆ ಕರೆ ಮಾದರಿಯಲ್ಲಿ ಹೊಸ ತೆರನಾದ ವಂಚನೆಯೂ ಆರಂಭವಾಗಿದೆ. ನೀವು ತಪ್ಪು ಮಾಡಿರುವಿರಿ ಎಂದು ಬಿಂಬಿಸಿ ಅದರಿಂದ ಹೊರ ಬರಲು ಕೆವೈಸಿ ಮಾಡಬೇಕೆಂದು ಹೇಳಿ ಆ ಮೂಲಕ ಮಾಹಿತಿ ಸಂಗ್ರಹಿಸಿ ನಿಮಗೇ ಗೊತ್ತೇ ಇಲ್ಲದಂತೆ ನಿಮ್ಮ ಖಾತೆಯನ್ನು ಬರಿದುಗೊಳಿಸುತ್ತಾರೆ. ಇಂತಹ ಕರೆಗಳಿಗೆ ಸ್ಪಂದಿಸದೆ ಸಹಾಯವಾಣಿ 155260 ಸಂಖ್ಯೆಗೆ ದೂರು ನೀಡಬೇಕು.

Advertisement

ದೇಶವು ಡಿಜಿಟಲ್‌ ವ್ಯವಹಾರದಲ್ಲಿ ಮುನ್ನುಗ್ಗುತ್ತಿರುವ ವೇಳೆ ಅದಕ್ಕೆ ತಕ್ಕಂತೆ ಸರಕಾರವು ಜನರಲ್ಲಿ ಪೂರ್ಣ ವಿಶ್ವಾಸ ಮೂಡುವ ರೀತಿಯಲ್ಲಿ ತಂತ್ರಜ್ಞಾನ, ನೀತಿ ನಿರೂಪಣೆ ಮಾಡುವುದು ಅಗತ್ಯವಾಗಿದೆ. ಇಂತಹ ಪ್ರಕರಣಗಳಿಗೆ ತಡೆಯೊಡ್ಡದಿದ್ದಲ್ಲಿ ಡಿಜಿಟಲ್‌ ಆರ್ಥಿಕ ವ್ಯವಹಾರಗಳ ಮೇಲೆ ಋಣಾತ್ಮಕ ಪರಿಣಾಮ ಬೀಳುವುದನ್ನು ಅಲ್ಲಗಳೆಯಲಾಗದು.

Advertisement

Udayavani is now on Telegram. Click here to join our channel and stay updated with the latest news.

Next