ಗಂಗಾವತಿ: ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ತಾಲೂಕಿನ ಬಂಡಿಬಸಪ್ಪ ಕ್ಯಾಂಪಿನ ವಯೋವೃದ್ದೆಯ ಕುಟುಂಬವೊಂದು ನಿತ್ಯದ ಜೀವನಕ್ಕಾಗಿ ಆರೋಗ್ಯ ಚಿಕಿತ್ಸೆಗಾಗಿ ವಿಪರೀತ ತೊಂದರೆ ಅನುಭವಿಸುವಂತಾಗಿದೆ.
ಬಂಡೆ ಬಸಪ್ಪ ಕ್ಯಾಂಪಿನಲ್ಲಿರುವ ವಯೋವೃದ್ದೆ ಸರಸಮ್ಮ (72) ಇವರು ಕಲ್ಲು ಒಡದು ಕಳೆದ 50 ವರ್ಷಗಳಿಂದ ಜೀವನ ನಡೆಸುತ್ತಿದ್ದು ಪತಿ ಹಾಗೂ ಅಳಿಯನನ್ನು ಕಳೆದುಕೊಂಡು ಮಗಳು ಮತ್ತು ಮೊಮ್ಮಗನೊಂದಿಗೆ ಇದ್ದಾಳೆ.
ಮಗಳು ಪೂವನಿ ಸ್ಥಳೀಯವಾಗಿ ಕೆಲಸವಿಲ್ಲದೆ ಬಳ್ಳಾರಿಯ ಹೊಟೇಲ್ ನಲ್ಲಿ ಕೆಲಸ ಮಾಡಿ ಸ್ವಲ್ಪ ದುಡ್ಡನ್ನು ತಾಯಿಗೆ ಕಳಿಸುತ್ತಿದ್ದಳು. ಲಾಕ್ ಡೌನ್ ಹಿನ್ನೆಲೆಯಲ್ಲಿ ಹೊಟೇಲ್ ಬಂದ್ ಆಗಿರುವುದರಿಂದ ಕೆಲಸವಿಲ್ಲದೆ ಕ್ಯಾಂಪ್ ಬಂದಿದ್ದಾಳೆ. ನ್ಯಾಯ ಬೆಲೆ ಅಂಗಡಿಯಲ್ಲಿ ಕೊಡುವ ಅಕ್ಕಿ ಗೋಧಿ ಬೇಳೆಕುಟುಂಬಕ್ಕೆ ಆಧಾರವಾಗಿದೆ.
ಸರಸಮ್ಮ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಔಷಧಿ ಗುಳಿಗೆಗಾಗಿ ಪ್ರತಿ ತಿಂಗಳು 2-3ಸಾವಿರ ಹಣ ಬೇಕಾಗುತ್ತದೆ. ಕಲ್ಲು ಒಡೆಯುವ ಕೆಲಸ ಮತ್ತು ಮಗಳು ಕಳಿಸುತ್ತಿದ್ದ ಹಣದಲ್ಲಿ ಆರೋಗ್ಯ ಚಿಕಿತ್ಸೆ ಮಾಡಿಸುತ್ತಿದ್ದಳು ಲಾಕ್ ಡೌನ್ ಆವಾಗಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಗುತ್ತಿಲ್ಲ. ಪಡಿತರ ಅಕ್ಕಿ ಯಿಂದ ಅನ್ನ ಮಾಡಿಕೊಂಡು ಮೆಣಸಿನಕಾಯಿ ಚಟ್ನಿ ಇವರ ಆಹಾರವಾಗಿದೆ. ಕಳೆದ ಮೂರು ತಿಂಗಳಿಂದ ಸರಸಮ್ಮಗೆ ವೃದ್ಧಾಪ್ಯ ವೇತನವೂ ಬಂದಿಲ್ಲ. ಪ್ರಧಾನಮಂತ್ರಿಗಳ ಜನಧನ್ ಖಾತೆಗೆ ಹಣ ಜಮಾ ಆಗಿದೆ ಎಂದು ತಿಳಿದು ಪಕ್ಕದ ಸಂಗಾಪೂರದ ಬ್ಯಾಂಕ್ ಗೆ ಅಲೆದು ವೃದ್ದೆ ಸರಸಮ್ಮ ನಿರಾಸೆಗೊಂಡಿದ್ದಾಳೆ.
ಹಳೆಯದಾದ ತಗಡಿನ ಮನೆ ಮಳೆ ಬಂದರೆ ಸೋರುತ್ತದೆ. ಮಳೆ ಬಂದ ದಿನ ಗ್ರಾಮದ ದೇಗುಲದಲ್ಲಿ ಇವರ ಕುಟುಂಬ ಮಲಗಬೇಕಾದ ಸ್ಥಿತಿ ಬಂದಿದೆ. ಈ ಕುಟುಂಬಕ್ಕೆ ಸರಕಾರ ಸ್ಥಳೀಯ ಗ್ರಾ.ಪಂ.ಅಥವಾ ಸಮುದಾಯ ನೆರವಿಗೆ ಬರಬೇಕಿದೆ.