ಮಂಗಳೂರು: ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದ ನೇರ ಪರಿಣಾಮ ಈಗ ಕರಾವಳಿಗರ ಮೇಲಾಗುತ್ತಿದೆ. ಒಂದೊಮ್ಮೆ ಉದ್ಯೋಗಕ್ಕೆ ನೆಚ್ಚಿನ ತಾಣವಾಗಿದ್ದ ಈ ದೇಶದಲ್ಲಿ ಹಲವಾರು ಮಂದಿ ಉದ್ಯೋಗ ನಷ್ಟದ ಭೀತಿಗೆ ಸಿಲುಕಿದ್ದು, ತಾಯ್ನಾಡಿಗೆ ವಾಪಸ್ ಆಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಆರ್ಥಿಕ ಬಿಕ್ಕಟ್ಟು, ರಾಜಮನೆತನದ ಒಡಕು ಹಾಗೂ ಹೊಸ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ನೂತನ ನಿಯಮಗಳಿಂದಾಗಿ ಸೌದಿಯಲ್ಲಿ ಕೆಲಸ ಮಾಡುತ್ತಿರುವ ಬೇರೆ ದೇಶದ ಅನೇಕರು ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿ ಕರಾವಳಿ ಮೂಲದ ಲಕ್ಷಾಂತರ ಜನರು ಕೆಲಸ ನಿರ್ವಹಿಸುತ್ತಿದ್ದು, ನೂತನ ನಿಯಮಗಳು ಹೊರೆಯಾಗಿದೆ. ಈ ಹಿನ್ನೆಲೆಯಲ್ಲಿ ತಾಯ್ನಾಡಿಗೆ ಅನೇಕ ಮಂದಿ ವಾಪಸ್ ಆಗುತ್ತಿದ್ದಾರೆ. ಸೌದಿಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನೂತನ ರಾಜ ತರುತ್ತಿರುವ ಕಾನೂನುಗಳು ಆ ದೇಶವನ್ನು ಸದೃಢಗೊಳಿಸುವುದರೊಂದಿಗೆ ಬೇರೆ ದೇಶದ ಜನರಿಗೆ ಸಂಕಷ್ಟ ತಂದಿದೆ. ಕರಾವಳಿಯಿಂದ ತೆರಳುತ್ತಿದ್ದ ಬಹು ಮಂದಿ ಮೊಬೈಲ್ ಶಾಪ್, ಹೋಟೆಲ್ ಕೆಲಸ ಇತ್ಯಾದಿಗಳನ್ನು ಮಾಡುತ್ತಿದ್ದರು. ಈಗ ಪ್ರತಿ ಅಂಗಡಿಗಳಲ್ಲೂ ಅಲ್ಲಿನ ಪ್ರಜೆಗಳನ್ನೇ ನೇಮಿಸಿ ಉತ್ತಮ ವೇತನ ನೀಡಬೇಕೆಂಬ ನಿಯಮ ಇಲ್ಲಿನವರಿಗೆ ನುಂಗಲಾರದ ತುತ್ತಾಗಿದೆ.
ಮಹಿಳೆಯರೂ ಮುಖ್ಯವಾಹಿನಿಗೆ: ಸೌದಿಯಲ್ಲಿ ಮಹಿಳೆಯರಿಗೆ ಯಾವುದೇ ಪ್ರಾತಿನಿಧ್ಯವಿರಲಿಲ್ಲ. ಆದರೆ ಅಲ್ಲೀಗ ನೂತನ ನಿಯಮದಂತೆ ಮಹಿಳೆಯರಿಗೆ ಅಲ್ಲಿನ ಸಂಸ್ಥೆಗಳು, ಮಳಿಗೆಗಳಲ್ಲಿ ಉದ್ಯೋಗ ನೀಡಬೇಕಾಗಿದೆ. ವಾಹನ ಚಲಾವಣೆಗೂ ಅವಕಾಶ ನೀಡಲಾಗಿದೆ. ಸೌದಿಯಲ್ಲಿ ಈ ವರೆಗೆ ಇಲ್ಲದ ತೆರಿಗೆ ನಿಯಮವೂ ಇತ್ತೀಚೆಗೆ ಜಾರಿಗೆ ಬಂದಿದೆ. ಅಲ್ಲಿನ ಕಂಪೆನಿಗಳು ಸೌದಿ ಸರಕಾರಕ್ಕೆ ಪಾವತಿಸಬೇಕಾದ ತೆರಿಗೆಗೆ ಉದ್ಯೋಗಿಯ ಸಂಬಳದಿಂದ ಕಡಿತಗೊಳಿಸುತ್ತಿದೆ. ತೆರಿಗೆಯೂ ಅಧಿಕ ಮೊತ್ತದಲ್ಲಿದ್ದು, ಕಂಪೆನಿಗಳು ಅದನ್ನು ಭರಿಸಲು ಅಶಕ್ತರಾಗುವಂತಿದೆ. ಈ ಒತ್ತಡಗಳಿಂದಾಗಿ ಕಂಪೆನಿಗಳು ಸಿಬ್ಬಂದಿ ಸಂಬಳವನ್ನು ಈಗಾಗಲೇ ಕಡಿತಗೊಳಿಸಿವೆ. ಅಲ್ಲದೆ ಸೌದಿಯಲ್ಲಿ ಕೆಲಸ ಮಾಡುತ್ತಿರುವ ಪತಿ ತನ್ನ ಪತ್ನಿ ಹಾಗೂ ಮಗುವನ್ನು ಕರೆಸಿಕೊಂಡರೆ ಅವನೊಂದಿಗೆ ಪತ್ನಿ ಹಾಗೂ ಮಗುವಿಗೆ ತಿಂಗಳ ಲೆಕ್ಕದಲ್ಲಿ ತೆರಿಗೆ ಪಾವತಿಸಬೇಕಾಗಿದೆ.
ಕರಾವಳಿಯಲ್ಲಿ ಉದ್ಯೋಗ ಸೃಷ್ಟಿ: ಸೌದಿ ಅರೇಬಿಯಾದಲ್ಲಿ ಕರಾವಳಿ ಮೂಲದ ಸುಮಾರು ಒಂದೂವರೆ ಲಕ್ಷ ಜನರು ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿನ ಸಮಸ್ಯೆಗಳಿಂದಾಗಿ ಕೆಲಸ ನಿರ್ವಹಿಸಲು ಕಷ್ಟವಾಗಿ ವಾಪಸ್ ಬರುವ ಜನರಿಗೆ ಕರಾವಳಿಯಲ್ಲಿ ಉದ್ಯೋಗದ ಅವಕಾಶವಿದೆಯೇ ಎಂಬುದು ಸದ್ಯದ ಪ್ರಶ್ನೆ. ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರಕಾರಿ ಕಂಪೆನಿಗಳು ಹೆಚ್ಚಿನ ಉದ್ಯೋಗವಕಾಶ ಕಲ್ಪಿಸಬೇಕು ಅಥವಾ ಸರಕಾರ ಸ್ವಂತ ಉದ್ಯೋಗಕ್ಕೆ ಅವಕಾಶ ಮಾಡಿಕೊಡಬೇಕಾಗುತ್ತದೆ.
ಕರಾವಳಿಯಲ್ಲಿ ವಿಫುಲ ಉದ್ಯೋಗಾವಕಾಶ ಆರ್ಥಿಕ ಏರಿಳಿತಗಳು ಸಾಮಾನ್ಯ. ಜಿಲ್ಲೆಯಿಂದ ಹೋದ ಜನರಿಗೆ ತೊಂದರೆಯಾದರೆ ಅದಕ್ಕೆ ಸ್ಪಂದಿಸಲು ಕೆನರಾ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಸಿದ್ಧ. ಜಿಲ್ಲೆಯಿಂದ ಕರ್ತವ್ಯ ನಿಮಿತ್ತ ತೆರಳಿದ ಬಹುತೇಕ ಮಂದಿ ವಿದ್ಯಾವಂತರು ಇಲ್ಲಿ ಬಂದರೂ ಅವರಿಗೆ ಸೂಕ್ತ ಉದ್ಯೋಗ ಲಭಿಸಲಿದೆ.
ಕೆನರಾ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷೆ ವತಿಕಾ ಪೈ.
ನೂತನ ನಿಯಮಗಳಿಂದ ತುಸು ಕಷ್ಟವಾಗಿದೆ. ನಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಪಾಕಿಸ್ತಾನ, ಬಾಂಗ್ಲಾ ದೇಶದ ಹಲವರು ತಮ್ಮ ದೇಶಗಳಿಗೆ ವಾಪಸ್ ಆಗಿದ್ದಾರೆ. ಕೆಲವು ಕರಾವಳಿಗರು ಹೋಗಿದ್ದಾರೆ. ಕಂಪೆನಿಯು ಸಂಬಳವನ್ನೂ ಇಳಿಕೆ ಮಾಡಿದೆ.
●ಅಶ್ರಫ್, ಸೌದಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಿನ್ನಿಗೋಳಿ ನಿವಾಸಿ
ಪ್ರಜ್ಞಾ ಶೆಟ್ಟಿ