Advertisement

ಲೋಕಾಯುಕ್ತ, ಎಸಿಬಿಯಿಂದ ಆರ್ಥಿಕ ಹೊರೆ: ಎಸಿಬಿ, ಲೋಕಾಯುಕ್ತ ಸಿಬಂದಿಗೆ ಕೆಲಸವೇ ಇಲ್ಲ

11:03 PM Jul 15, 2022 | Team Udayavani |

ಬೆಂಗಳೂರು: ಬಿಳಿ ಆನೆಗಳಂತಾಗಿರುವ ಲೋಕಾಯುಕ್ತ ಮತ್ತು ಎಸಿಬಿ ತನಿಖಾ ಸಂಸ್ಥೆಗಳಿಂದ ಸರಕಾರಕ್ಕೆ ವಾರ್ಷಿಕವಾಗಿ 126 ಕೋಟಿ ರೂ. ಆರ್ಥಿಕ ಹೊರೆಯಾಗುತ್ತಿದೆ.

Advertisement

ಲೋಕಾಯುಕ್ತ ಹಾಗೂ ಎಸಿಬಿ ಸಂಸ್ಥೆಯ ಸಿಬಂದಿಯ ವೇತನ, ಕಾರ್ಯ ನಿರ್ವಹಣೆಗಾಗಿ ಸರಕಾರ ಇಷ್ಟು ಮೊತ್ತ ವ್ಯಯಿಸಿದರೂ ಪ್ರತಿಫ‌ಲ ಶೂನ್ಯ. ಭ್ರಷ್ಟರನ್ನು ಮಟ್ಟಹಾಕಲು ಹುಟ್ಟಿಕೊಂಡ ಈ ಎರಡು ತನಿಖಾ ಸಂಸ್ಥೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಬಂದಿಯಿದ್ದು, ಮಾಡಲು ಕೆಲಸ ಇಲ್ಲದಂತಾಗಿದೆ.

ಲೋಕಾಯುಕ್ತದಲ್ಲಿ ರಾಜ್ಯಾದ್ಯಂತ 1,403 ಹುದ್ದೆಗಳಿದ್ದು, ಲೋಕಾಯುಕ್ತರು ಸಹಿತ 982 ನೌಕರರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. 112 ಮಂದಿ ಎ-ದರ್ಜೆಯ ಅಧಿಕಾರಿಗಳು, 88 ಬಿ-ದರ್ಜೆ, 665 ಸಿ-ದರ್ಜೆ ಹಾಗೂ ಡಿ-ದರ್ಜೆಯ 117 ಸಿಬಂದಿಯಿದ್ದಾರೆ. ಇಲ್ಲಿನ ಸಿಬಂದಿ ವೇತನ ಹಾಗೂ ಇನ್ನಿತರ ನಿರ್ವಹಣೆಗಾಗಿ ಸರಕಾರವು ವಾರ್ಷಿಕ ಸರಾಸರಿ 69 ಕೋಟಿ ರೂ. ಮೀಸಲಿಡುತ್ತಿದೆ. ಈ ಸಂಸ್ಥೆಯ ಪೊಲೀಸ್‌ ವಿಭಾಗವು ತನ್ನ ಅಧಿಕಾರ ಕಳೆದುಕೊಂಡ ಬಳಿಕ ಸಿಬಂದಿಗೆ ಮಾಡಲು ಕೆಲಸ ಇಲ್ಲದಂತಾಗಿದೆ.

ಇನ್ನು ಎಸಿಬಿ ಸಂಸ್ಥೆ ದಾಳಿ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ ಸಣ್ಣಪುಟ್ಟ ಟ್ರ್ಯಾಪ್‌ ಕೇಸ್‌ಗಳಲ್ಲಿ ಕೇವಲ ಶೇ.3ರಷ್ಟು ಪ್ರಮಾಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ಉಳಿದಂತೆ ದೊಡ್ಡ ಭ್ರಷ್ಟರ ಮೇಲೆ ನಡೆಸಿದ ಬಹುತೇಕ ದಾಳಿ ಕೇಸ್‌ಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗುತ್ತಿವೆ.

57 ಕೋಟಿ ರೂ. ವ್ಯರ್ಥ
ಎಸಿಬಿಯಲ್ಲಿ ಸುಮಾರು 350ಕ್ಕೂ ಹೆಚ್ಚಿನ ಸಿಬಂದಿ ಇದ್ದಾರೆ. ಇಲ್ಲಿನ ನೌಕರರ ವೇತನ ಹಾಗೂ ನಿರ್ವಹಣೆಗಾಗಿ ವಾರ್ಷಿಕವಾಗಿ ಅಂದಾಜು 57 ಕೋಟಿ ರೂ.ಗಳನ್ನು ಸರಕಾರ ವ್ಯಯಿಸುತ್ತದೆ. ಬೆಂಗಳೂರಿನಲ್ಲಿರುವ ಖನಿಜ ಭವನದ ಕಟ್ಟಡಕ್ಕೆ ತಿಂಗಳಿಗೆ 18 ಲಕ್ಷ ರೂ. ಬಾಡಿಗೆ ಪಾವತಿಯಾಗುತ್ತಿದೆ. ಎಸಿಬಿಯು ಡಿ.ಪಿ.ಎ.ಆರ್‌. ವಿಭಾಗದ ಆಡಳಿತಾತ್ಮಕ ನಿಯಂತ್ರಣದಲ್ಲಿದ್ದು, ಎಡಿಜಿಪಿ ದರ್ಜೆಯ ಹಿರಿಯ ಐಪಿಎಸ್‌ ಅಧಿಕಾರಿ ಎಸಿಬಿ ನಿರ್ದೇಶಕರಾಗಿರುತ್ತಾರೆ. ಎಡಿಜಿಪಿಗೆ ಆಡಳಿತಾತ್ಮಕ ವಿಷಯಗಳಲ್ಲಿ ಸಹಕರಿಸಲು ಓರ್ವ ಐಜಿಪಿ ಅಧಿಕಾರಿ ಇರುತ್ತಾರೆ. ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಮೂವರು ಐಪಿಎಸ್‌ ಅಧಿಕಾರಿಗಳಿದ್ದರೆ, ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ 1 ಎಸ್‌ಪಿ, 1 ಡಿವೈಎಸ್‌ಪಿ ಹಾಗೂ 2 ಇನ್‌ಸ್ಪೆಕ್ಟರ್‌ಗಳಿದ್ದಾರೆ. ಇದಲ್ಲದೆ, ಸಬ್‌ ಇನ್‌ಸ್ಪೆಕ್ಟರ್‌, ಕಾನ್‌ಸ್ಟೆಬಲ್‌, ಎಂಜಿನಿಯರ್‌, ತಹಶೀಲ್ದಾರರು ಹಾಗೂ ಆರ್ಥಿಕ ಅಧಿಕಾರಿಗಳಿದ್ದಾರೆ. ಕೆಲವು ದಾಳಿ ಪ್ರಕರಣದ ತನಿಖೆ ನಡೆಸುವುದು ಬಿಟ್ಟರೆ ಇವರಿಗೆ ಉಳಿದ ಸಮಯದಲ್ಲಿ ಕೆಲಸವೇ ಇಲ್ಲದಂತಾಗಿದೆ.

Advertisement

ಲೋಕಾಯುಕ್ತ ಪೊಲೀಸ್‌ ವಿಭಾಗದಲ್ಲಿ ನಡೆಯುತ್ತಿರುವ ತನಿಖೆಯ ವಿವರ ಹಾಗೂ ಇನ್ನಿತರ ಮಾಹಿತಿಗಳನ್ನು ಲೋಕಾಯುಕ್ತರಿಗೆ ನೀಡುತ್ತಿದ್ದೇವೆ. ಲೋಕಾಯುಕ್ತ ಪೊಲೀಸರು ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ.
– ಪ್ರಶಾಂತ್‌ ಕುಮಾರ್‌ ಠಾಕೂರ್‌,
ಎಡಿಜಿಪಿ, ಲೋಕಾಯುಕ್ತ ಪೊಲೀಸ್‌ ವಿಭಾಗ.

– ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next