Advertisement

ಕೊಣಾಜೆ ಕ್ಯಾಂಪಸ್‌ನ ಪ್ರ.ದ. ಕಾಲೇಜು ಬಂದ್‌

01:16 AM Jun 22, 2020 | Sriram |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಕೊಣಾಜೆಯ ಕ್ಯಾಂಪಸ್‌ನಲ್ಲಿ 2017ರಲ್ಲಿ ಆರಂಭಿಸಿದ್ದ ಪ್ರಥಮ ದರ್ಜೆ ಕಾಲೇಜಿಗೆ ಸರಕಾರದ ಅನುಮೋದನೆ ಲಭಿಸದಿರುವುದು ಹಾಗೂ ಆರ್ಥಿಕ ಹೊರೆ ಕಡಿಮೆಗೊಳಿಸುವ ಉದ್ದೇಶದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಆ ಕಾಲೇಜನ್ನೇ ಬಂದ್‌ ಮಾಡಲು ವಿ.ವಿ. ತೀರ್ಮಾನಿಸಿದೆ.

Advertisement

2021-22ನೇ ಅವಧಿಗೆ ಪ್ರವೇಶಾತಿ ಸ್ಥಗಿತ ಗೊಳಿಸಿರುವುದಲ್ಲದೆ, ಮೊದಲ ಹಾಗೂ ದ್ವಿತೀಯ ವರ್ಷವನ್ನು ಈಗಾಗಲೇ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳನ್ನು ಅವರು ಅಪೇಕ್ಷಿಸುವ ಹತ್ತಿರದ ಕಾಲೇಜುಗಳಿಗೆ ವರ್ಗಾವಣೆ ಮಾಡುವ ಸಂಬಂಧ ವಿ.ವಿ. ಚಿಂತನೆ ನಡೆಸಿದೆ. ಜತೆಗೆ, ಹಂಪನಕಟ್ಟೆಯಲ್ಲಿರುವ ಮಂಗಳೂರು ವಿ.ವಿ. ಕಾಲೇಜಿನಲ್ಲಿ ಅವಕಾಶ ನೀಡುವ ಬಗ್ಗೆಯೂ ವಿ.ವಿ. ಮಾತುಕತೆ ನಡೆಸುತ್ತಿದೆ.

ಕರ್ನಾಟಕ ರಾಜ್ಯ ವಿ.ವಿ. ಕಾಯ್ದೆ ಪ್ರಕಾರ ಯಾವುದೇ ವಿ.ವಿ.ಗೆ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಅವಕಾಶವಿಲ್ಲ. ಆದರೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಕೈಗೆಟಕುವ ದರದಲ್ಲಿ ನೀಡಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಶಿಕ್ಷಣ ಕಲ್ಪಿಸುವ ಇರಾದೆಯೊಂದಿಗೆ 2017ರಲ್ಲಿ ಕೊಣಾಜೆಯಲ್ಲಿ ಪ್ರ.ದ. ಕಾಲೇಜು ಸ್ಥಾಪಿಸಲಾಗಿತ್ತು. ಬಿ.ಎ., ಬಿ.ಕಾಂ., ಬಿ.ಎಸ್ಸಿ. ಹಾಗೂ ಇತರ ಪದವಿ/ಡಿಪ್ಲೊಮಾ/ಸರ್ಟಿಫಿಕೆಟ್‌ ಕೋರ್ಸ್‌ ಇಲ್ಲಿ ಲಭ್ಯವಿತ್ತು.

ಡಿಗ್ರಿ ಸರ್ಟಿಫಿಕೇಟ್‌ ಹೇಗೆ?
ಕಳೆದೆರಡು ವರ್ಷಗಳಿಂದ ಇಲ್ಲಿ ಬಿಎ, ಬಿಕಾಂ ಮಾಡಿರುವವರಿಗೆ ಇದೀಗ ತೃತೀಯ ಶೈಕ್ಷಣಿಕ ವರ್ಷ ಇರುವುದರಿಂದ ಘಟಿಕೋತ್ಸವದ ವೇಳೆ ಆ ವಿದ್ಯಾರ್ಥಿಗಳಿಗೆ ವಿ.ವಿ. ಡಿಗ್ರಿ ನೀಡಬೇಕಾಗುತ್ತದೆ. ಆದರೆ ಸರಕಾರದ ಅನುಮತಿ ಇಲ್ಲದ ಕಾಲೇಜಿನ ವಿದ್ಯಾರ್ಥಿಗಳಿಗೆ ಯಾವ ಆಧಾರದಲ್ಲಿ ಡಿಗ್ರಿ ನೀಡಬೇಕು ಎಂಬ ಪ್ರಶ್ನೆ ಎದುರಾಗಿದೆ. ಸರಕಾರದಿಂದ ಅನುಮತಿ ಪಡೆಯದ ಕಾಲೇಜು ಎಂಬ ಕಾರಣದಿಂದಾಗಿ ಈ ವಿದ್ಯಾರ್ಥಿಗಳಿಗೆ “ಪೋಸ್ಟ್‌ ಮೆಟ್ರಿಕ್ಸ್‌’ ಸ್ಕಾಲರ್‌ಶಿಪ್‌ಗಾಗಿ ಆನ್‌ಲೈನ್‌ ಅರ್ಜಿ ಹಾಕಲೂ ಸಾಧ್ಯವಾಗುತ್ತಿಲ್ಲ.

ಬಂದ್‌ ಯಾಕಾಗಿ?
ಈ ಮಧ್ಯೆ ಸರಕಾರವು ವಿ.ವಿ.ಗೆ ಪತ್ರ ಬರೆದು ಕಾಲೇಜಿನ ಹುದ್ದೆಗಳ ಸೃಜನೆಗೆ ಅವಕಾಶ ನೀಡುವುದಿಲ್ಲ; ವಿ.ವಿ. ಆಂತರಿಕ ಸಂಪನ್ಮೂಲಗಳಿಂದಲೇ ಕಾಲೇಜಿನ ಖರ್ಚು ವೆಚ್ಚಗಳನ್ನು ನಡೆಸಬೇಕು ಎಂಬ ಷರತ್ತು ಹಾಕಿತ್ತು. ವಿ.ವಿ.ಯು ಪ್ರತೀ ವರ್ಷ ಸುಮಾರು 1 ಕೋ.ರೂ.ಗಳನ್ನು ಅತಿಥಿ ಉಪನ್ಯಾಸಕರ ವೇತನ ಇತ್ಯಾದಿಗಳಿಗೆ ಮೀಸಲಿಡಬೇಕಾಗುತ್ತದೆ. ಕೋವಿಡ್-19 ಕಾರಣದಿಂದ ಆರ್ಥಿಕ ಮಿತವ್ಯಯಕ್ಕೆ ಮುಂದಾಗಿರುವ ವಿ.ವಿ. ಕಾಲೇಜನ್ನು ಮುಚ್ಚುವುದೇ ಸೂಕ್ತ ಎಂದು ತೀರ್ಮಾನಿಸಿದೆ.

Advertisement

ಸ್ಥಳೀಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿ.ವಿ. ಕ್ಯಾಂಪಸ್‌ನಲ್ಲಿ ಪ್ರ.ದ. ಕಾಲೇಜು ಆರಂಭಿಸಿದ್ದೆವು. ಆದರೆ ಸರಕಾರದ ಅನುಮೋದನೆ ದೊರಕದಿರುವುದು ಹಾಗೂ ವಿ.ವಿ.ಯ ಆಂತರಿಕ ಸಂಪನ್ಮೂಲವನ್ನೇ ಬಳಕೆ ಮಾಡಬೇಕು ಎಂಬ ಸೂಚನೆ ಬಂದಿರುವುದರಿಂದ ಆರ್ಥಿಕ ಹೊರೆ ತಪ್ಪಿಸಲು ಅನಿವಾರ್ಯವಾಗಿ ಮುಂದಿನ ವರ್ಷದಿಂದ ಪ್ರವೇಶಾತಿ ತಡೆಹಿಡಿಯಲು ನಿರ್ಧರಿಸಲಾಗಿದೆ.
– ಪ್ರೊ| ಪಿ.ಎಸ್‌. ಯಡಪಡಿತ್ತಾಯ,
ಕುಲಪತಿಗಳು, ಮಂಗಳೂರು ವಿ.ವಿ.

ವಿ.ವಿ. ಕ್ಯಾಂಪಸ್‌ನ ಪ್ರಥಮ ದರ್ಜೆ ಕಾಲೇಜನ್ನು ಬಂದ್‌ ಮಾಡಲು ತೀರ್ಮಾನಿಸಿರುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಬಹುದೊಡ್ಡ ನಷ್ಟ. ಆ ಚಿಂತನೆಯನ್ನು ಕೈಬಿಟ್ಟು ಸರಕಾರ ಕಾಲೇಜನ್ನು ಮುಂದುವರಿಸಬೇಕು.
– ರಾಜೇಶ್‌ ಶೆಟ್ಟಿ ,
ಪಜೀರುಗುತ್ತು, ಹೋರಾಟಗಾರರು

 

Advertisement

Udayavani is now on Telegram. Click here to join our channel and stay updated with the latest news.

Next