ಬೆಂಗಳೂರು: ಬಡ ಮತ್ತು ಮಧ್ಯಮ ವರ್ಗಕ್ಕೆ ಆರ್ಥಿಕ ನೆರವು ನೀಡುವುದು ಬ್ಯಾಂಕುಗಳಿಗೆ ಆದ್ಯತಾ ವಿಷಯವಾಗಬೇಕು ಎಂದು ಅಭಿಪ್ರಾಯಪಟ್ಟಿರುವ ಕೇಂದ್ರ ಯೋಜನಾ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ, ಕೇಂದ್ರ ಸರ್ಕಾರದ “ಮುದ್ರಾ’ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಒದಗಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ನಗರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ಬ್ಯಾಂಕುಗಳು ಬಡವರು, ಸಣ್ಣ ವ್ಯಾಪಾರಿಗಳು, ರೈತರ ಸ್ನೇಹಿ ಆಗಿರಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಕಾಳಜಿ ವಹಿಸಬೇಕು,’ ಎಂದರು.
“ನಗರದಲ್ಲಿ 1.10 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಇದರಲ್ಲಿ ಒಂದು ಅಂದಾಜಿನಂತೆ ಶೇ.40ರಷ್ಟು ಜನ ಬಡತನ ರೇಖೆಗಿಂತ ಕೆಳಗೆ ಇದ್ದಾರೆ. ಇವರಲ್ಲಿ ಬಹುಪಾಲು ಜನ ಬೀದಿ ಬದಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕೇಂದ್ರದ ಮುದ್ರಾ ಯೋಜನೆಯಡಿ ಸಾಲ ನೀಡಿದರೆ, ಅವರ ಜೀವನಮಟ್ಟ ಸುಧಾರಿಸಬಹುದು. ಇದಕ್ಕಾಗಿ ಎಲ್ಲ ಬ್ಯಾಂಕುಗಳು ತಮ್ಮ ವ್ಯಾಪ್ತಿಯಲ್ಲಿ ಕನಿಷ್ಟ 200 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಬೇಕು,’ ಎಂದು ಸದಾನಂದಗೌಡ ಸಲಹೆ ನೀಡಿದರು.
ಅಧಿಕಾರಿಗಳ ಗೈರಿಗೆ ಸಚಿವರು ಗರಂ: ಪ್ರಗತಿ ಪರಿಶೀಲನಾ ಸಭೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ಸಚಿವ ಸದಾನಂದಗೌಡ ಗರಂ ಆದರು. ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಮುಂದಿನ ಸಭೆಗೆ ಕಡ್ಡಾಯವಾಗಿ ಹಾಜರಾಗಲು ಸೂಚಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗುರಿ ಮೀರಿ ಸಾಲ: 2016-17ರಲ್ಲಿ ಆದ್ಯತಾ ವಲಯಕ್ಕೆ ನಗರ ಜಿಲ್ಲೆಯಲ್ಲಿ ನಿಗದಿತ ಗುರಿ ಮೀರಿ ಸಾಲ ವಿತರಿಸಲಾಗಿದೆ ಎಂದು ಲೀಡ್ (ಕೆನರಾ) ಬ್ಯಾಂಕ್ ವ್ಯವಸ್ಥಾಪಕ ಗುರುದತ್ ಸಭೆಯಲ್ಲಿ ಮಾಹಿತಿ ನೀಡಿದರು. ನಗರಕ್ಕೆ 26,920 ಕೋಟಿ ರೂ. ಸಾಲ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಬ್ಯಾಂಕುಗಳು 34,333 ಕೋಟಿ ರೂ. ಸಾಲ ನೀಡಿವೆ. ಕೇಂದ್ರದ ಪ್ರಧಾನಮಂತ್ರಿ ಜನ್‌ಧನ್ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ 17,46,607 ಮಂದಿ ಖಾತೆ ತೆರೆದಿದ್ದಾರೆ.
ಇವರಲ್ಲಿ 12,39,642 ಮಂದಿಗೆ ರುಪೇಕಾರ್ಡ್ ವಿತರಿಸಲಾಗಿದೆ. ಮುದ್ರಾ ಯೋಜನೆಯಲ್ಲಿ 52327 ಮಂದಿಗೆ ಸಾಲ ವಿತರಿಸಲಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮಂಜುಶ್ರೀ, ಭಾರತೀಯ ರಿಸರ್ವ್ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಸಿಂಗ್, ನಬಾರ್ಡ್‌ನ ಸಹಾಯಕ ವ್ಯವಸ್ಥಾಪಕಿ ಪ್ರಭಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮೆಟ್ರೋದಲ್ಲಿ ಸಭೆಗೆ ಬಂದ ಡಿವಿಎಸ್
ಪ್ರಗತಿ ಪರಿಶೀಲನಾ ಸಭೆಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮೆಟ್ರೊ ರೈಲಿನಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಬೆಳಗ್ಗೆ 10 ಗಂಟೆಗೆ ನಗರದ ಮೈಸೂರು ಸ್ಯಾಂಡಲ್ ಫ್ಯಾಕ್ಟರಿ ನಿಲ್ದಾಣಕ್ಕೆ ಆಗಮಿಸಿದ ಸಚಿವರು ಎರಡು ನಿಮಿಷ ಮೆಟ್ರೊ ನಿಲ್ದಾಣದಲ್ಲಿ ರೈಲಿಗಾಗಿ ಕಾದರು. ನಂತರ ಹಸಿರು ಮೆಟ್ರೊ ರೈಲು ಮೂಲಕ ಬನಶಂಕರಿಗೆ ತೆರಳಿದರು. ಈ ವೇಳೆ ಮೆಟ್ರೊ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿ, ಪ್ರಯಾಣದ ಅನುಭವ, ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು.