Advertisement

ಬಡ ವಿದ್ಯಾರ್ಥಿಗೆ ಆರ್ಥಿಕ ನೆರವು

08:49 PM Mar 29, 2021 | Girisha |

ಮುದ್ದೇಬಿಹಾಳ : ದ್ವಿತೀಯ ವರ್ಷದ ಎಂಬಿಬಿಎಸ್‌ ಕೋರ್ಸ್‌ಗೆ ಶುಲ್ಕ ಕಟ್ಟಲು ಪರದಾಡುತ್ತಿದ್ದ ಮುದ್ದೇಬಿಹಾಳ ತಾಲೂಕು ಅಡವಿ ಹುಲಗಬಾಳದ ಬಡ ಕುಟುಂಬದ ವಿದ್ಯಾರ್ಥಿ ದ್ಯಾಮಣ್ಣ ಗುಂಡಕನಾಳಗೆ ಹಾಲುಮತ ಸಮಾಜದ ನೌಕರರು ಶುಲ್ಕಕ್ಕೆ ಅಗತ್ಯವಾದ ಆರ್ಥಿಕ ನೆರವು ನೀಡಿದ್ದಾರೆ.

Advertisement

ಇದೇ ಸಂದರ್ಭ ವಿದ್ಯಾಚೇತನ ಶಿಕ್ಷಣ ಸಂಸ್ಥೆಯ ಪಿ.ಸಿ. ಹೆಡಗಿನಾಳ ಅವರೂ ಸಹ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದರು. ಪಟ್ಟಣದ ಸಂತ ಕನಕದಾಸ ಶಾಲೆ ಆವರಣದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿದ್ದ ನೌಕರರ ಪರವಾಗಿ ವಿದ್ಯಾರ್ಥಿಗೆ ಚೆಕ್‌ ಹಸ್ತಾಂತರಿಸಿ ಮಾತನಾಡಿದ ಹಾಲುಮತ ನೌಕರರ ಸಂಘದ ಅಧ್ಯಕ್ಷ, ಸಮಾಜಕಲ್ಯಾಣ ಇಲಾಖೆಯ ವಾರ್ಡನ್‌ ಎಸ್‌.ಎಚ್‌. ಜೈನಾಪುರ ಅವರು, ಚಾಮರಾಜನಗರದ ಮೆಡಿಕಲ್‌ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್‌ ಸೀಟು ಪಡೆದುಕೊಂಡಿದ್ದ ದ್ಯಾಮಣ್ಣಗೆ ಈ ವರ್ಷ ಶುಲ್ಕ ಕಟ್ಟಲು ಆರ್ಥಿಕ ಸಮಸ್ಯೆ ಉಂಟಾಗಿತ್ತು.

ಈತನ ಪಾಲಕರು ಹೊಟ್ಟೆಪಾಡಿಗಾಗಿ ದುಡಿಯಲು ಗೋವಾಕ್ಕೆ ಗುಳೇ ಹೋಗಿದ್ದಾರೆ. ಈತನ ಪರಿಸ್ಥಿತಿ ನಮ್ಮ ಗಮನಕ್ಕೆ ತಂದಾಗ ಕಾಳಿದಾಸ ಬ್ಯಾಂಕ್‌ ಹಾಗೂ ಹಾಲುಮತ ಸಮಾಜದ ನೌಕರರು ಆತನ ಶುಲ್ಕಕ್ಕೆ ಅಗತ್ಯವಾಗಿರುವ ಹಣವನ್ನು ಸಂಗ್ರಹಿಸಿ ನೆರವು ನೀಡಲು ತೀರ್ಮಾನಿಸಿ ಆತನಿಗೆ ನೆರವಾಗಿದ್ದೇವೆ ಎಂದರು.

ನೆರವು ಪಡೆದುಕೊಂಡು ಮಾತನಾಡಿದ ದ್ಯಾಮಣ್ಣ, ತಾನು ನಾಗರಬೆಟ್ಟದ ಆಕ್ಸ್‌ಫರ್ಡ್‌ ಪಾಟೀಲ್ಸ್‌ ಸೈನ್ಸ್‌ ಪಿಯು ಕಾಲೇಜಿನಲ್ಲಿ ಕಲಿತು ಸರ್ಕಾರಿ ಕೋಟಾದಲ್ಲಿ ಮೆಡಿಕಲ್‌ ಸೀಟು ಪಡೆದುಕೊಂಡದ್ದನ್ನು ವಿವರಿಸಿ ತನ್ನ ಎರಡನೇ ವರ್ಷದ ಕಲಿಕೆಗೆ ಆರ್ಥಿಕ ನೆರವು ಒದಗಿಸಿರುವ ಸಮಾಜ ಬಾಂಧವರನ್ನು ಸದಾ ಸ್ಮರಿಸುವುದಾಗಿ ಮತ್ತು ವೈದ್ಯನಾದ ಮೇಲೆ ಬಡ ಜನರಿಗೆ, ಸಮಾಜದವರಿಗೆ ನೆರವಾಗುವುದಾಗಿ ತಿಳಿಸಿದರು.

ಕಾಳಿದಾಸ ಬ್ಯಾಂಕ್‌ ಅಧ್ಯಕ್ಷ ಎಚ್‌.ಎನ್‌. ಇಟಗಿ, ಪ್ರಮುಖರಾದ ಎಸ್‌.ಎಸ್‌. ಬಾಣಿ, ಎಂ.ಬಿ. ಹುಲಬೆಂಚಿ, ಜಿ.ಎನ್‌. ಗೌರೋಜಿ, ಎಂ.ಎ. ತಳ್ಳಿಕೇರಿ, ಐ.ಎಂ. ಉಂಡಿ, ರವಿ ಜಗಲಿ, ಬಸವರಾಜ ಗೊರಗುಂಡಗಿ, ಎಸ್‌. ವೈ. ವಗ್ಗರ, ಎಚ್‌.ಬಿ. ದಳವಾಯಿ, ಬಿ.ಕೆ. ಮುರಾಳ ಸೇರಿದಂತೆ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next