ನವದೆಹಲಿ: ದೇಶದಲ್ಲಿ ಕಾಣಿಸಿಕೊಂಡಿರುವ ಆರ್ಥಿಕ ಸಂಕಷ್ಟ ಪರಿಸ್ಥಿತಿಯನ್ನು ಸುಧಾರಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ನಷ್ಟು ಆರ್ಥಿಕ ಉಪಕ್ರಮಗಳನ್ನು ಘೋಷಿಸಿದ್ದಾರೆ. ದೇಶೀಯ ಆರ್ಥಿಕ ರಂಗವನ್ನು ಹಳಿಗೆ ಮರಳಿಸುವ ಪ್ರಯತ್ನದಲ್ಲಿರುವ ಕೇಂದ್ರ ಸರಕಾರವು ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ಉತ್ತೇಜಕ ಕ್ರಮಗಳನ್ನು ಪ್ರಕಟಿಸಿದೆ. ಇದರ ಮುಂದುವರಿದ ಭಾಗವಾಗಿ ಗುರುವಾರದಂದು ವಿತ್ತ ಸಚಿವರು ಗ್ರಾಹಕ ಉತ್ತೇಜಕ ಕ್ರಮಗಳನ್ನು ಪ್ರಕಟಿಸಿದ್ದಾರೆ.
ಸಾರ್ವಜನಿಕ ಸಾಲ ನೀಡುವಿಕೆಗೆ ಉತ್ತೇಜನ ನೀಡುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಮೂಲಕ ಆರ್ಥಿಕತೆಯ ಚೇತರಿಕೆಗೆ ಉತ್ತೇಜನ ಸಿಕ್ಕಂತಾಗುತ್ತದೆ ಎಂಬುದು ಸಚಿವರ ಅಭಿಪ್ರಾಯವಾಗಿದೆ.
ಇಷ್ಟು ಮಾತ್ರವಲ್ಲದೇ ಅತೀ ಸಣ್ಣ, ಮಧ್ಯಮ ಮತ್ತು ಸಣ್ಣ ಉದ್ದಿಮೆದಾರರಿಗೆ ನೀಡುತ್ತಿರುವ ಸಾಲ ಸೌಲಭ್ಯವನ್ನು ಹೆಚ್ಚಿಸುವಂತೆಯೂ ಸಹ ಸಚಿವರು ಬ್ಯಾಂಕುಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಉದ್ದಿಮೆಗಳನ್ನು ಭಾರತದ ಆರ್ಥಿಕತೆಯ ಬೆನ್ನೆಲೆಬು ಎಂದೇ ಪರಿಗಣಿಸಲಾಗುತ್ತದೆ.
ಇನ್ನೊಂದು ಪ್ರಮುಖ ಬೆಳವಣಿಗೆಯಲ್ಲಿ
2020ರ ಮಾರ್ಚ್ 31ರವರೆಗೆ ಬಿಕ್ಕಟ್ಟಿನಲ್ಲಿರುವ ಯಾವುದೇ ಅತೀ ಸಣ್ಣ, ಮಧ್ಯಮ ಮತ್ತು ಸಣ್ಣಗಾತ್ರದ ಉದ್ಯಮಗಳನ್ನು ಎನ್.ಪಿ.ಎ. ಎಂದು ಬ್ಯಾಂಕುಗಳು ಘೋಷಿಸಬೇಕಾಗಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ. ಮತ್ತು ಎಂ.ಎಸ್.ಎಂ.ಇ.ಗಳ ಈಗಿರುವ ಸಾಲಗಳನ್ನು ಮರುಹಂಚಿಕೆ ಮಾಡುವಂತೆಯೂ ಸಚಿವರು ಬ್ಯಾಂಕುಗಳಿಗೆ ಸೂಚನೆ ನೀಡಿದ್ದಾರೆ.
ಇನ್ನು ಬ್ಯಾಂಕೇತರ ಹಣಕಾಸು ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕುಗಳು ಸಾರ್ವಜನಿಕ ಸಾಲನೀಡುವಿಕೆ ಪ್ರಮಾಣವನ್ನು ಉತ್ತೇಜಿಸಲು ಮಾರ್ಗಸೂಚಿಯೊಂದನ್ನು ರೂಪಿಸುವಂತೆ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದು ಹಣಕಾಸು ಸಚಿವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬ್ಯಾಂಕ್ ವಿಲೀನದ ಕುರಿತಾದ ವಿವರಗಳನ್ನು ಬ್ಯಾಂಕ್ ಗಳೊಂದಿಗಿನ ಸಭೆಯ ಸಂದರ್ಭದಲ್ಲಿ ಚರ್ಚಿಸಲಾಗುವುದು ಎಂದು ನಿರ್ಮಲಾ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.