Advertisement

ಮೋಟಾರು ರಂಗದಲ್ಲಿನ ಕುಸಿತಕ್ಕೆ ನಿರ್ಮಲಾ ಸೀತಾರಾಮನ್ ಕೊಟ್ಟ ಕಾರಣಗಳೇನು?

09:28 AM Sep 11, 2019 | Hari Prasad |

ಚೆನ್ನೈ: ಬಿ.ಎಸ್.VI ಮಾಲಿನ್ಯ ನಿಯಂತ್ರಣ ನಿಯಮಗಳು, ಯುವಜನತೆ ಹೊಸ ವಾಹನ ಖರೀದಿಗೆ ಆಸಕ್ತಿ ತೋರದಿರುವುದು ಮತ್ತು ಓಲಾ, ಉಬರ್ ಗಳಂತಹ ಸುಲಭ ಸಂಚಾರ ಮಾಧ್ಯಮಗಳು ಮತ್ತು ಮಹಾನಗರಗಳಲ್ಲಿ ಕಾರ್ಯಾಚರಿಸುತ್ತಿರುವ ಮೆಟ್ರೋ ಸೇವೆಗಳು ಒಟ್ಟಾರೆಯಾಗಿ ಮೋಟಾರು ರಂಗದಲ್ಲಿನ ಕುಸಿತಕ್ಕೆ ಪ್ರಮುಖ ಕಾರಣಗಳು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

ಸಿತಾರಾಮನ್ ಅವರು ಚೆನ್ನೈನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನರೇಂದ್ರ ಮೋದಿ ಸರಕಾರದ ನೂರು ದಿನಗಳ ಸಾಧನೆಯ ಕುರಿತಾಗಿ ಮಾತನಾಡುತ್ತಾ ಜೊತೆಯಲ್ಲಿ ದೇಶದಲ್ಲಿ ಮೋಟಾರು ಮಾರುಕಟ್ಟೆ ಅನುಭವಿಸುತ್ತಿರುವ ಸಂಕಷ್ಟಗಳಿಗೆ ಕಾರಣಗಳನ್ನು ನೀಡುತ್ತಾ ಹೋದರು.

ಭಾರತೀಯ ವಾಹನ ತಯಾರಕರ ಸಂಘ ಬಿಡುಗಡೆಗೊಳಿಸಿರುವ ವರದಿಯಂತೆ ದೇಸೀ ಮಾರುಕಟ್ಟೆಯಲ್ಲಿ ವಾಹನ ಮಾರಾಟದಲ್ಲಿ 2019ರ ಆಗಸ್ಟ್ ತಿಂಗಳಲ್ಲಿ ಒಟ್ಟಾರೆಯಾಗಿ 23.55 ಪ್ರತಿಶತ ಕುಸಿತ ಉಂಟಾಗಿದೆ. ಹಾಗೆಯೇ ಪ್ರಯಾಣಿಕರ ವಾಹನ ಮಾರಾಟದಲ್ಲಿ 2019ರ ಆಗಸ್ಟ್ ತಿಂಗಳಲ್ಲಿ 31.57 ಪ್ರತಿಶತ ಕುಸಿತ ಉಂಟಾಗಿದೆ.

ದೇಶದ ವಾಹನ ಮಾರುಕಟ್ಟೆ ರಂಗ ಅನುಭವಿಸುತ್ತಿರುವ ಸಂಕಷ್ಟವನ್ನು ದೂರಗೊಳಿಸಲು ಕೇಂದ್ರ ಸರಕಾರವು ಇತ್ತೀಚೆಗಷ್ಟೇ ಕೆಲವೊಂದು ಉಪಕ್ರಮಗಳನ್ನು ಪ್ರಕಟಿಸಿತ್ತು. ಅದರನ್ವಯ, ಬಿ.ಎಸ್.IV ವಾಹನ ಮಾದರಿಗಳನ್ನು 2020ರ ಮಾರ್ಚ್ 31ರವರೆಗೆ ಮಾರಾಟ ಮಾಡುವುದು, ಸರಕಾರದ ವಿವಿಧ ಇಲಾಖೆಗಳಿಗೆ ಹೊಸ ವಾಹನಗಳ ಖರೀದಿಯ ಮೇಲಿದ್ದ ನಿರ್ಬಂಧವನ್ನು ತೆರವುಗೊಳಿಸಿರುವುದು, ಮತ್ತು ಹಳೇ ವಾಹನಗಳ ಮೇಲಿನ ನಿಷೇಧ ನಿಯಮಗಳನ್ನು ಪರಿಶೀಲಿಸುವುದು ಸೇರಿದಂತೆ ಇನ್ನಷ್ಟು ಉಪಕ್ರಮಗಳನ್ನು ಸರಕಾರ ಪ್ರಕಟಿಸಿದೆ.

ಇಂದಿನ ಪತ್ರಿಕಾಗೋಷ್ಠಿಯಲ್ಲಿ ಸಚಿವೆ ಸೀತಾರಾಮನ್ ಅವರು ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ, ಜಿ.ಎಸ್.ಟಿ. ಮತ್ತು ಅದಾಯ ತೆರಿಗೆ ಸುಧಾರಣೆಗಳ ವಿಚಾರದ ಕುರಿತಾಗಿಯೂ ಮಾತನಾಡಿದರು.

Advertisement

ಕೆಲವೊಂದು ಜಿ.ಎಸ್.ಟಿ. ದರಗಳನ್ನು ಕಡಿಮೆಗೊಳಿಸುವಂತೆ ಬೇಡಿಕೆ ಕೇಳಿಬರುತ್ತಿದೆ, ಇವುಗಳಲ್ಲಿ ಯಾವುದನ್ನೆಲ್ಲಾ ಪರಿಗಣಿಸಲಾಗಿದೆ ಎಂಬ ವಿಚಾರ ನನಗೆ ತಿಳಿದಿಲ್ಲ ಯಾಕೆಂದರೆ ಇದನ್ನೆಲ್ಲಾ ಜಿ.ಎಸ್.ಟಿ. ಕೌನ್ಸಿಲ್ ನಿರ್ಧರಿಸುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ.

ಇನ್ನು ಸಾರ್ವಜನಿಕ ರಂಗದ ಬ್ಯಾಂಕುಗಳ ವಿಲೀನದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವೆ ಸೀತಾರಾಮನ್ ಅವರು, ಸಾರ್ವಜನಿಕ ರಂಗದ 10 ಬ್ಯಾಂಕುಗಳನ್ನು ವಿಲೀನಗೊಳಿಸಿ ನಾಲ್ಕು ಬಲಿಷ್ಠ ಬ್ಯಾಂಕುಗಳನ್ನಾಗಿ ದೇಸೀ ಹಣಕಾಸು ರಂಗದಲ್ಲಿ ಅವುಗಳನ್ನು ರೂಪಿಸುವ ಉದ್ದೇಶವನ್ನು ಸರಕಾರ ಹೊಂದಿದೆ. ಮತ್ತು ಈ ಮೂಲಕ ದೇಶೀಯವಾಗಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಣಕಾಸು ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಉದ್ದೇಶವನ್ನು ಸರಕಾರ ಹೊಂದಿದೆ’ ಎಂದು ಅವರು ಬ್ಯಾಂಕುಗಳ ವಿಲೀನ ಪ್ರಕ್ರಿಯೆ ನಿರ್ಧಾರವನ್ನು ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next