Advertisement

ಕೊನೆಗೂ ಸಿನಿಮಾ ಆಗಲಿದೆ ಜುಗಾರಿ ಕ್ರಾಸ್‌

04:24 PM Jun 16, 2018 | |

ಅಭಿಷೇಕ್‌ ಅಭಿನಯದ “ಅಮರ್‌’ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ನಟ-ನಿರ್ಮಾಪಕ “ಕಡ್ಡಿಪುಡಿ’ ಚಂದ್ರು ಸದ್ಯದಲ್ಲೇ ಒಂದು ಚಿತ್ರ ನಿರ್ಮಿಸುವುದಾಗಿ ಹೇಳಿದ್ದರು. ಒಬ್ಬ ದೊಡ್ಡ ಬರಹಗಾರರ ಕಾದಂಬರಿಯ ರೈಟ್ಸ್‌ ಪಡೆಯುವುದಕ್ಕೆ ಓಡಾಡುತ್ತಿದ್ದು, ಸಿಕ್ಕ ನಂತರ ತಿಳಿಸುವುದಾಗಿ ಹೇಳಿದ್ದರು. ಅದರಂತೆ ಈಗ ಚಂದ್ರುಗೆ ಕಾದಂಬರಿಯ ಹಕ್ಕುಗಳು ಸಿಕ್ಕಿರುವುದಷ್ಟೇ ಅಲ್ಲ, ಮೂರ್‍ನಾಲ್ಕು ತಿಂಗಳ ಅಂತರದಲ್ಲಿ ಅವರು ಹೊಸದೊಂದು ಚಿತ್ರವನ್ನು ಶುರು ಮಾಡುವ ಯೋಚನೆಯಲ್ಲಿದ್ದಾರೆ.

Advertisement

ಆ ಕಾದಂಬರಿ ಮತ್ತು ಚಿತ್ರ ಯಾವುದು ಗೊತ್ತಾ? “ಜುಗಾರಿ ಕ್ರಾಸ್‌’. ಈ ಚಿತ್ರವನ್ನು ನಾಗಾಭರಣ ನಿರ್ದೇಶಿಸುತ್ತಿರುವುದು ಮತ್ತೂಂದು ವಿಶೇಷ. “ಜುಗಾರಿ ಕ್ರಾಸ್‌’ ಕಾದಂಬರಿಯನ್ನು ಚಿತ್ರ ಮಾಡುವುದಕ್ಕೆ ಇದುವರೆಗೂ ಹಲವರು ಪ್ರಯತ್ನಿಸಿದ್ದಾರೆ. ಹಲವು ವರ್ಷಗಳ ಹಿಂದೆ “ಕಾನೂರು ಹೆಗ್ಗಡತಿ’ ಚಿತ್ರವನ್ನು ನಿರ್ಮಿಸಿದ್ದ ನಾರಾಯಣ ಅವರು “ಜುಗಾರಿ ಕ್ರಾಸ್‌’ ಕಾದಂಬರಿಯನ್ನು ಚಿತ್ರವನ್ನಾಗಿ ಮಾಡುವ ತಮ್ಮ ಆಸೆ ವ್ಯಕ್ತಪಡಿಸಿದ್ದರು.

ಆ ನಂತರ ಶಿವರಾಜಕುಮಾರ್‌ ಅಭಿನಯದಲ್ಲಿ ಕೋಡ್ಲು ರಾಮಕೃಷ್ಣ ಅವರು “ಜುಗಾರಿ ಕ್ರಾಸ್‌’ ಚಿತ್ರವನ್ನು ಪ್ರಾರಂಭಿಸಿಯೇಬಿಡುತ್ತಾರೆ ಎಂಬ ಸುದ್ದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರಗಳು ಶುರುವಾಗಲೇ ಇಲ್ಲ.  ಆಗೊಮ್ಮೆ ಈಗೊಮ್ಮೆ “ಜುಗಾರಿ ಕ್ರಾಸ್‌’ ಚಿತ್ರವಾಗುವ, ಅದರ ಹಕ್ಕುಗಳು ಒಬ್ಬರ ಕೈಯಿಂದ ಇನ್ನೊಬ್ಬರಿಗೆ ಹಸ್ತಾಂತರವಾಗಿರುವ ಸುದ್ದಿಗಳು ಬರುತ್ತಲೇ ಇದ್ದವು.

ಈಗ ಕೊನೆಗೂ ಆ ಹಕ್ಕುಗಳನ್ನು “ಕಡ್ಡಿಪುಡಿ’ ಚಂದ್ರು ಪಡೆದು, ನಾಗಾಭರಣ ಅವರ ನಿರ್ದೇಶನದಲ್ಲಿ ಚಿತ್ರ ಮಾಡುತ್ತಿದ್ದಾರೆ. “ಜುಗಾರಿ ಕ್ರಾಸ್‌’ ಕಾದಂಬರಿಯನ್ನು ಚಿತ್ರ ಮಾಡಬೇಕು ಎಂಬ ಆಸೆ ಬಹಳ ದಿನಗಳಿಂದ ಇತ್ತು. ಈಗ ಆ ಕಾದಂಬರಿಯ ಹಕ್ಕುಗಳನ್ನು ಪಡೆದು ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನನ್ನ ಹಿಂದಿನ ಚಿತ್ರಗಳಂತೆ ಈ ಚಿತ್ರವನ್ನು ಸಂದೇಶ್‌ ನಾಗರಾಜ್‌ ಅವರು ಅರ್ಪಿಸಿದರೆ, ಜಯಣ್ಣ ಫಿಲಂಸ್‌ನವರು ವಿತರಿಸುತ್ತಿದ್ದಾರೆ’ ಎನ್ನುತ್ತಾರೆ ಚಂದ್ರು.

ಈ ಚಿತ್ರದಲ್ಲಿ ಒಬ್ಬ ಹೊಸ ಹೀರೋನನ್ನು ಪರಿಚಯಿಸುತ್ತಿರುವುದಾಗಿ ಚಂದ್ರು ಹೇಳುತ್ತಾರೆ. ಜೊತೆಗೆ ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ತಾರಾ ಮುಂತಾದವರು ಅಭಿನಯಿಸುತ್ತಿದ್ದಾರೆ. ಎಚ್‌.ಸಿ. ವೇಣು ಅವರ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆಯಂತೆ. ಮಿಕ್ಕ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದ್ದು, ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ ಎನ್ನುತ್ತಾರೆ ಚಂದ್ರು.

Advertisement
Advertisement

Udayavani is now on Telegram. Click here to join our channel and stay updated with the latest news.

Next