Advertisement

ಕೊನೆಗೂ ಮಂಡನೆಯಾದ ಕೆಪಿಎಂಇ ವಿಧೇಯಕ

08:31 AM Nov 22, 2017 | Team Udayavani |

ಸುವರ್ಣಸೌಧ: ಬಹು ನಿರೀಕ್ಷಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮೇಲೆ ಸರ್ಕಾರದ ನಿಯಂತ್ರಣ ಹೊಂದುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದು ಪಡಿ) ವಿಧೇಯಕ-2017ನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದ್ದು, ಬಹುತೇಕ ಹಲ್ಲು
ಕಿತ್ತ ಹಾವಿನ ಸ್ವರೂಪದಲ್ಲಿದೆ.

Advertisement

ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ರೋಗಿಗಳಿಗೆ ತೊಂದರೆ ಉಂಟು ಮಾಡುವ ಹಾಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ದುಬಾರಿ ಶುಲ್ಕಕ್ಕೆ ಪೀಡಿಸಿ ಶಿಕ್ಷೆಗೆ ಅರ್ಹವಾದ ಪ್ರಕರಣಗಳಲ್ಲಿ ಆಸ್ಪತ್ರೆಯ ಉಸ್ತುವಾರಿಗಳಿಗೆ ಜೈಲು ಶಿಕ್ಷೆ ವಿಧಿಸಬಹುದು ಎಂಬ ಪ್ರಸ್ತಾಪ ಕೈ ಬಿಡಲಾಗಿದೆ. ಆದರೆ, ನೋಂದಣಿಯಿಲ್ಲದೆ ಕ್ಲಿನಿಕ್‌ ನಡೆಸಿದರೆ ಅಂತಹ ಆಸ್ಪತ್ರೆ ಮಾಲೀಕರಿಗೆ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಪಡಿಸುವ ಪ್ರಸ್ತಾಪ ಮಾಡಲಾಗಿದೆ.

ತುರ್ತು ಚಿಕಿತ್ಸೆ ವೇಳೆ ಮುಂಗಡ ಶುಲ್ಕ ಪಾವತಿಗೆ ಒತ್ತಡ ತರದೆ ಚಿಕಿತ್ಸೆ ಪ್ರಾರಂಭಿಸಬೇಕು. ರೋಗಿ ಮೃತಪಟ್ಟ ಪ್ರಕರಣದಲ್ಲಿ ಶುಲ್ಕ ಪಾವತಿ ಬಾಕಿ ಇದ್ದರೂ ಮೃತದೇಹವನ್ನು ಕುಟುಂಬ ವರ್ಗಕ್ಕೆ ಹಸ್ತಾಂತರಿಸಲು ಆದ್ಯತೆ ಕೊಡುವುದು. ಮೃತನ ಕುಟುಂಬ ವರ್ಗ ಶುಲ್ಕ ಪಾವತಿಸಲು ಅಶಕ್ತವಾಗಿದ್ದರೆ ಸರ್ಕಾರವೇ ಯಾವುದಾದರೂ ಯೋಜನೆಯಡಿ ಭರಿಸಬಹುದು ಎಂಬುದನ್ನೂ ಸೇರಿಸಲಾಗಿದೆ.

ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ಮಟ್ಟ ಹಾಕಲು ಅತ್ಯಂತ ಕಠಿಣ ಕಾಯ್ದೆ ತರಬಹುದು ಎಂಬ ನಿರೀಕ್ಷೆ ಇತ್ತಾದರೂ ಖಾಸಗಿ ವೈದ್ಯರು ರಾಜ್ಯಾದ್ಯಂತ ಮುಷ್ಕರ ಹೂಡಿದ್ದರಿಂದ ಉಂಟಾದ ಪರಿಣಾಮಗಳ ಹಿನ್ನೆಲೆಯಲ್ಲಿ ವಿಧೇಯಕ ವಿಚಾರದಲ್ಲಿ ಸರ್ಕಾರ
ಮೃಧು ಧೋರಣೆ ತಾಳಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ವೈದ್ಯರ ಜತೆ ನಡೆಸಿದ ಸಂಧಾನ ಮಾತುಕತೆ ಪ್ರಕಾರವೇ ಸಿದ್ಧಗೊಂಡಿರುವ ವಿಧೇಯಕವನ್ನು ಆರೋಗ್ಯ ಸಚಿವ ರಮೇಶ್‌ಕುಮಾರ್‌ ಮಂಡಿಸಿದರು. ನಿರ್ಲಕ್ಷ ಹಾಗೂ ದುಬಾರಿ ಶುಲ್ಕ ವಿಚಾರ
ದಲ್ಲಿ ಜೈಲು ಶಿಕ್ಷೆ ಪ್ರಸ್ತಾಪ ಕೈ ಬಿಟ್ಟಿರುವ ಬಗ್ಗೆ ವಿಧೇಯಕದಲ್ಲಿಯೂ ಉಲ್ಲೇಖೀಸಲಾಗಿದೆ. ಸಕ್ರಮವಾಗಿ ನಡೆಯುವ ಆಸ್ಪತ್ರೆಗಳಲ್ಲಿ ನಿಯಮ ಉಲ್ಲಂಘನೆಯಾದರೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಪ್ರಸ್ತಾಪವಿಲ್ಲ.

ರೋಗಿಗಳು ಹಾಗೂ ವೈದ್ಯರು ಅಹವಾಲು ಸಲ್ಲಿಸಲು ದೂರು ನಿರ್ವಹಣಾ ಪ್ರಾಧಿಕಾರ ರಚಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಸದಸ್ಯ ಕಾರ್ಯದರ್ಶಿ.
ಜಿಲ್ಲಾ ಆಯುಷ್‌ ಅಧಿಕಾರಿ, ಆಯುಷ್‌ ಅಧಿಕಾರಿ, ಭಾರತೀಯ ವೈದ್ಯ ಸಂಘಟನೆ ಹಾಗೂ ಇನ್ನೊಂದು ಸಂಘಟನೆಯ ಒಬ್ಬರು ಹಾಗೂ ಮಹಿಳಾ ಪ್ರತಿನಿಧಿ ಸದಸ್ಯರಾಗಿರುತ್ತಾರೆ.

Advertisement

ನೋಂದಣಿಯಿಲ್ಲದಿದ್ದರೆ ಶಿಕ್ಷೆ: ನೋಂದಣಿ ಇಲ್ಲದೆ ಕ್ಲಿನಿಕ್‌ ನಡೆಸಿದರೆ ಅದರ ಮಾಲೀಕರನ್ನು 3 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸುವುದು ಅಥವಾ 10 ಸಾವಿರ ರೂ.ವರೆಗೆ ದಂಡ ವಿಧಿಸಬಹುದು ಎನ್ನುವ ಅಂಶ ಹಳೆಯ ಕಾಯ್ದೆಯಲ್ಲಿದ್ದು, ಅದನ್ನು ಹಾಗೆಯೇ ಉಳಿಸಿಕೊಂಡು ದಂಡದ ಪ್ರಮಾಣ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿದೆ. ವಿಮಾ ಯೋಜನೆಯಡಿ ಬರುವ ಆರೋಗ್ಯ ಕಾರ್ಯಕ್ರಮಗಳಿಗೆ ಏಕರೂಪ
ದರವನ್ನು ಸರ್ಕಾರ ನಿಗದಿಪಡಿಸಲಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ. ದೂರು ನಿರ್ವಹಣಾ ಪ್ರಾಧಿಕಾರ ರಚನೆ ಮಾಡುವುದು, ಖಾಸಗಿ ಆಸ್ಪತ್ರೆಗಳಲ್ಲಿ ಪಾದರ್ಶಕತೆ ಅಳವಡಿಸಿಕೊಳ್ಳುವುದು ಹಾಗೂ ಆಸ್ಪತ್ರೆ ಪರವಾನಗಿಯನ್ನು ರೋಗಿಗಳಿಗೆ ಕಾಣುವಂತೆ ಪ್ರದರ್ಶಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ಇಂಗ್ಲಿಷ್‌ ಪ್ರತಿಗೆ ಆಕ್ಷೇಪ
ಈ ಮಧ್ಯೆ, ವಿಧೇಯಕದ ಪ್ರತಿಯನ್ನು ಕನ್ನಡದಲ್ಲಿ ಒದಗಿಸದೆ ಆಂಗ್ಲ ಪ್ರತಿ ಕೊಟ್ಟ ಬಗ್ಗೆ ಕೆಲವು ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಈ ಕುರಿತು ಶಾಸಕಾಂಗ ಅಧಿಕಾರಿಗಳನ್ನು ವಿಚಾರಿಸಿದಾಗ, ಕನ್ನಡದ ಪ್ರತಿ ಇನ್ನೂ ಮುದ್ರಣವಾಗುತ್ತಿದೆ ಎಂಬ ಸಮಜಾಯಿಷಿ ಬಂತು. ಆದರೆ, ಈ ಬಗ್ಗೆ ಬಹುತೇಕ ಸದಸ್ಯರು ಮೌನ ವಹಿಸಿದ್ದರು. 

ಪ್ರಮುಖಾಂಶಗಳು
ವೈದ್ಯರ ನಿರ್ಲಕ್ಷ್ಯಕ್ಕೆ ಜೈಲು ಶಿಕ್ಷೆ ರದ್ದು, ನೋಂದಣಿ ಇಲ್ಲದಿದ್ದರೆ ಮಾತ್ರ ಜೈಲು
ಸರ್ಕಾರದ ಯೋಜನೆಗಳಡಿ ಚಿಕಿತ್ಸೆಗೆ ಮಾತ್ರ ಸರ್ಕಾರದಿಂದ ದರ ನಿಗದಿ
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ದೂರು ನಿರ್ವಹಣಾ ಪ್ರಾಧಿಕಾರ
ಆಸ್ಪತ್ರೆ ಪರವಾನಗಿ ರೋಗಿಗಳಿಗೆ ಕಾಣುವಂತೆ ಪ್ರದರ್ಶಿಸುವುದು ಕಡ್ಡಾಯ
ಶುಲ್ಕ ಬಾಕಿ ಇದ್ದರೂ ರೋಗಿಯ ಮೃತದೇಹ ನೀಡಬೇಕು
ಮೃತ ರೋಗಿಯ ಕುಟುಂಬ ಶುಲ್ಕ ಪಾವತಿಗೆ ಅಶಕ್ತವಾಗಿದ್ದರೆ ಸರ್ಕಾರದಿಂದ ಪಾವತಿ

Advertisement

Udayavani is now on Telegram. Click here to join our channel and stay updated with the latest news.

Next