ಹೊಸದಿಲ್ಲಿ : ಹಾಲಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯವನ್ನು ಕಾಂಗ್ರೆಸ್ ಕ್ರಿಯಾ ಸಮಿತಿ ಇಂದು ಸೋಮವಾರ ಪಾಸು ಮಾಡಿದೆ.
ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಅಧಿಸೂಚನೆಯನ್ನು ಡಿ.1ರಂದು ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವನ್ನು ಡಿ.4ಕ್ಕೆ ನಿಗದಿಸಲಾಗಿದೆ.
ಡಿ.16ರಂದು ಮತದಾನ ನಡೆಯಲಿದೆ; ಡಿ.19ರಂದು ಫಲಿತಾಂಶ ಪ್ರಕಟವಾಗಲಿದೆ.
ಇಂದು ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್ ಭಾಗವಹಿಸಿದ್ದರು. ಸಭೆಯಲ್ಲಿ ಸೋನಿಯಾ ಗಾಂಧಿಯವರ 10 ಜನಪಥ್ ನಿವಾಸದಲ್ಲಿ ನಡೆಸಲಾಗಿತ್ತು.
ಕಾಂಗ್ರೆಸ್ ಮೂಲದ ಪ್ರಕಾರ ಅಧ್ಯಕ್ಷ ಪದಕ್ಕೆ ರಾಹುಲ್ ಗಾಂಧಿ ಅವರೊಬ್ಬರೇ ಕಣದಲ್ಲಿರುವ ನಿರೀಕ್ಷೆ ಇದೆ.
ಕಾಂಗ್ರೆಸ್ ಪಕ್ಷವು ಡಿ.31ರೊಳಗೆ ಅಧ್ಯಕ್ಷ ಚುನಾವಣೆಯ ಇಡಿಯ ಪ್ರಕ್ರಿಯೆಯನ್ನು ಮುಗಿಸಿ ಚುನಾವಣಾ ಆಯೋಗಕ್ಕೆ ಆ ಬಗ್ಗೆ ವರದಿ ಸಲ್ಲಿಸಬೇಕಿದೆ. ಈ ಹಿಂದೆ ಈ ಪ್ರಕ್ರಿಯೆಯನ್ನು ಅಕ್ಟೋಬರ್ ಅಂತ್ಯದೊಳಗೆ ಮುಗಿಸಿ ವರದಿ ಕೊಡುವಂತೆ ಚುನಾವಣಾ ಆಯೋಗ ಗಡುವು ವಿಧಿಸಿತ್ತು.