ದಾವಣಗೆರೆ: ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದ ಜಗಳೂರು ಕ್ಷೇತ್ರದ ಹಾಲಿ ಶಾಸಕ ಎಚ್.ಪಿ. ರಾಜೇಶ್ ಕೊನೆಗೂ ಬಿ ಫಾರಂ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೇ. 12ರ ರಾಜ್ಯ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಪ್ರಕಟಿಸಿದ್ದ ಮೊದಲ ಪಟ್ಟಿಯಲ್ಲಿ ಶಾಸಕ ಎಚ್.ಪಿ. ರಾಜೇಶ್ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ರಾಜೇಶ್ ಬದಲಿಗೆ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಎ.ಎಲ್. ಪುಷ್ಪಾ ಲಕ್ಷ್ಮಣಸ್ವಾಮಿ ಟಿಕೆಟ್ ಪಡೆದಿದ್ದರು.
ರಾಜೇಶ್‌ಗೆ ಟಿಕೆಟ್ ದೊರೆಯುವುದಿಲ್ಲ ಎಂಬ ವದಂತಿ ಹರಡುತ್ತಿದ್ದಂತೆಯೇ ಅವರ ಕಟ್ಟಾ ಅಭಿಮಾನಿಗಳು, ಕಾರ್ಯಕರ್ತರು, ಬೆಂಬಲಿಗರು, ಮುಖಂಡರು ಕಳೆದ ಭಾನುವಾರ ದಾವಣಗೆರೆಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದರು. ಮೊದಲ ಪಟ್ಟಿಯಲ್ಲಿ ರಾಜೇಶ್ ಬದಲಿಗೆ ಪುಷ್ಪಾ ಲಕ್ಷ್ಮಣಸ್ವಾಮಿಗೆ ಟಿಕೆಟ್ ಪ್ರಕಟವಾಗುತ್ತಿದ್ದಂತೆ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತು.
ರಸ್ತೆಗಳ ರಾಜ… ಎಂದೇ ಕರೆಯಲ್ಪಡುವ ರಾಜೇಶ್ ಅವರಿಗೇ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿ ಜಗಳೂರು ನಂತರ ದಾವಣಗೆರೆಯಲ್ಲಿ ಮತ್ತೂಂದು ಹೋರಾಟ ನಡೆಸಲಾಯಿತು. ಟಿಕೆಟ್ ಕೈ ತಪ್ಪಿದ ಕ್ಷಣದಿಂದಲೇ ಒತ್ತಡದ ತಂತ್ರಕ್ಕೆ ಮೊರೆ ಹೋದ ರಾಜೇಶ್, ಎಲ್ಲ ಮುಖಂಡರ ಮನವೊಲಿಕೆ ಕಾರ್ಯಕ್ಕೆ ಮುಂದಾದರು. ಪಕ್ಷ ನಡೆಸಿದ್ದ ಆಂತರಿಕ ಸಮೀಕ್ಷೆ, ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಡೆದುಕೊಂಡಿರುವ ವರದಿಯಲ್ಲಿ ರಾಜೇಶ್ ಗೆ ಒಲವು ಇಲ್ಲ ಎಂಬ ಅಂಶ ಇದೆ…ಎಂಬ ಕಾರಣಕ್ಕೆ ಟಿಕೆಟ್ ನೀಡಲಾಗಿಲ್ಲ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ರಾಜೇಶ್ ತಮ್ಮ ವಿರುದ್ಧ ತಪ್ಪಾಗಿ ವರದಿ ನೀಡಲಾಗಿದೆ ಎಂಬುದನ್ನು ಪ್ರತಿಪಾದಿಸುತ್ತಲೇ ಟಿಕೆಟ್ ಪ್ರಯತ್ನ ಮುಂದುವರೆಸಿದರು.
ಜಗಳೂರು ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದ ಗೊಂದಲ ತಾರಕಕ್ಕೇರಿದ ನಂತರ ಹೈಕಮಾಂಡ್ ಗೊಂದಲ ನಿವಾರಣೆ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ಗೆ ವಹಿಸಿತ್ತು. ರಾಜೇಶ್ ಜೊತೆಗೂಡಿ ಮೈಸೂರಿಗೆ ತೆರಳಿದ್ದ ಸಚಿವ ಮಲ್ಲಿಕಾರ್ಜುನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಕ್ಷಮದಲ್ಲಿ ಮಾತುಕತೆ ನಡೆಸಿ, ಬಿ ಫಾರಂ ವಿತರಣೆ ಆಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಟಿಕೆಟ್ ಪಡೆದಿದ್ದ ಪುಷ್ಪಾ ಲಕ್ಷ್ಮಣಸ್ವಾಮಿ ಸಹ ಬಿ ಫಾರಂಗೆ ಇನ್ನಿಲ್ಲದ ಯತ್ನ ನಡೆಸಿದ್ದರು.
ಟಿಕೆಟ್ ಸಿಕ್ಕರೂ ಬಿ ಫಾರಂ ದೊರೆಯಯುವುದು ಕಷ್ಟವಾಗುತ್ತಿದೆ ಮತ್ತು ಕೆಲ ಅಪಪ್ರಚಾರದ ಕಾರಣಕ್ಕೆ ಪುಷ್ಪಾ ಲಕ್ಷ್ಮಣಸ್ವಾಮಿ ಖನ್ನತೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೈಕಮಾಂಡ್‌ನಿಂದ ಬುಲಾವ್ ಬಂದಿದೆ ಎಂದು ದೆಹಲಿಗೆ ತೆರಳಿದ್ದರು. ಅಲ್ಲಿಯೂ ಬಿ ಫಾರಂ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು. ಒಂದು ಕಡೆ ರಾಜೇಶ್ ಮತ್ತೂಂದು ಕಡೆ ಪುಷ್ಪಾ ಲಕ್ಷ್ಮಣಸ್ವಾಮಿ ಬಿ ಫಾರಂಗೆ ನಡೆಸಿದ ಯತ್ನದಲ್ಲಿ ಕೊನೆಗೂ ರಾಜೇಶ್ ಬಿ ಫಾರಂ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಟಿಕೆಟ್ ವಂಚಿತ ಪುಷ್ಪಾ ಲಕ್ಷ್ಮಣಸ್ವಾಮಿ ನಡೆ ಕುತೂಹಲ ಮೂಡಿಸಿದೆ.