Advertisement

Politics: ಕೊನೆಗೂ ಡಿಕೆಶಿ ಭೇಟಿಯಾದ ಬೆಳಗಾವಿ ಇಬ್ಬರು ಶಾಸಕರು

11:54 PM Oct 19, 2023 | Team Udayavani |

ಬೆಳಗಾವಿ: ಎರಡು ದಿನ ಬೆಳಗಾವಿ ಪ್ರವಾಸದಲ್ಲಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಮೊದಲ ದಿನ ಸ್ವಾಗತಿಸಲು ಆಗಮಿಸದೆ ದೂರ ಉಳಿದಿದ್ದ ಕಾಂಗ್ರೆಸ್‌ ಸಚಿವರು ಹಾಗೂ ಶಾಸಕರ ಪೈಕಿ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ್‌ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಆಸೀಫ್(ರಾಜು) ಸೇಠ ಗುರುವಾರ ಭೇಟಿ ಮಾಡಿ ಚರ್ಚಿಸಿದರು.

Advertisement

ಆಸೀಫ್ ಸೇಠ ಜನ್ಮದಿನ ಹಿನ್ನೆಲೆಯಲ್ಲಿ ಗುರುವಾರ ಡಿ.ಕೆ.ಶಿವಕುಮಾರ್‌ ಕೇಕ್‌ ತಿನ್ನಿಸಿ ಶುಭ ಕೋರಿದರು. ಪ್ರವಾಸಿ ಮಂದಿರದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಶಾಸಕ ಬಾಬಾಸಾಹೇಬ ಪಾಟೀಲ್‌ ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು.

ಅನಂತರ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ್‌, ಡಿ.ಕೆ.ಶಿವಕುಮಾರ್‌ ಅವರ ಬೆಳಗಾವಿ ಭೇಟಿ ಪೂರ್ವ ನಿಯೋಜಿತವಲ್ಲ. ನಾನು ಕ್ಷೇತ್ರದ ಕೆಲಸದ ಮೇಲೆ ಬೆಂಗಳೂರಿಗೆ ತೆರಳಿದ್ದೆ. ಹೀಗಾಗಿ ಡಿ.ಕೆ.ಶಿವಕುಮಾರ್‌ ಅವರನ್ನು ಮೊದಲ ದಿನ ಭೇಟಿ ಆಗಲಿಲ್ಲ. ಎಲ್ಲ ಶಾಸಕರು ಬೇರೆ ಬೇರೆ ಕೆಲಸದಲ್ಲಿ ನಿರತರಾಗಿದ್ದರು. ಕೆಲವರು ಮೈಸೂರು ದಸರಾದಲ್ಲಿದ್ದರು. ಡಿಕೆಶಿ ಹಾಗೂ ಸತೀಶ ಜಾರಕಿಹೊಳಿ ಮಧ್ಯೆ ಯಾವುದೇ ವೈಮನಸ್ಸಿಲ್ಲ ಎಂದರು.

ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್‌ ಸಮ್ಮತಿಸಿದ್ದು, ಕಾನೂನು ತನ್ನ ಕೆಲಸ ಮಾಡಲಿದೆ. ನಾವು ಶಿವಕುಮಾರ್‌ ಜತೆಗೆ ಇರಲಿದ್ದೇವೆ . ಮೂರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕೆಂದು ಕೋರ್ಟ್‌ ಹೇಳಿದ್ದು, ಕಾನೂನು ತನ್ನ ಕೆಲಸ ಮಾಡಲಿದೆ. ತನಿಖೆ ಪೂರ್ಣವಾದ ಬಳಿಕ ಈ ಕುರಿತು ಸತ್ಯಾಸತ್ಯತೆ ಹೊರ ಬರಲಿದೆ. -ಎಂ.ಬಿ.ಪಾಟೀಲ್‌ , ಕೈಗಾರಿಕೆ ಸಚಿವ

ಹೈಕೋರ್ಟ್‌ ಆದೇಶ ನೀಡಿದ್ದರೂ ಮೇಲ್ಮನವಿ ಸಲ್ಲಿಕೆಗೆ ಅವಕಾಶವಿದೆ. ಹೀಗಾಗಿ ಶಿವಕುಮಾರ್‌ ಹಾಗೂ ಅವರ ಕಾನೂನು ತಂಡ ಮೇಲ್ಮನವಿ ಸಲ್ಲಿಸುವ ಕೆಲಸ ಮಾಡುತ್ತದೆ ಎಂದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜಕೀಯ ದ್ವೇಷ ಸಾಧಿ ಸುತ್ತಿದೆ. ಶಿವಕುಮಾರ್‌ ತಪ್ಪಿತಸ್ಥರೆಂದು ಸಾಬೀತಾಗಿಲ್ಲ. ತನಿಖೆಯ ವರದಿ ಸಲ್ಲಿಕೆ ಆಗದೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾ? ವಿಚಾರಣೆ ಹಂತದಲ್ಲಿ ಇರುವಾಗ ಯಾರಾದರೂ ರಾಜೀನಾಮೆ ಕೊಡುತ್ತಾರಾ? ಪ್ರಕರಣ ಕುರಿತಾದ ಆರೋಪ ಪಟ್ಟಿ ಕೇಂದ್ರ ಸರಕಾರದ ಅ ಧೀನದ ಸಿಬಿಐನಲ್ಲಿದೆ. ಮುಂದೆ ಏನು ಎಂಬುದನ್ನು ಕಾದು ನೋಡೋಣ ಎಂದರು.

Advertisement

ಎಂ.ಬಿ. ಪಾಟೀಲ್‌ ನೀರಾವರಿ, ಗೃಹ ಹಾಗೂ ಕೈಗಾರಿಕೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಇನ್ನೊಂದು ಬಾಕಿ ಇದೆ, ಅದು ಕೂಡ ಆಗಲಿ ಎಂದು ಬಿಜೆಪಿಯ ಮಾಜಿ ಸಚಿವ ಸೋಮಶೇಖರ ಅವರು ಹೇಳಿದ್ದರು. ಇದೆಲ್ಲ ಪ್ರೀತಿ-ವಿಶ್ವಾಸದಿಂದ ಹೇಳಿದ್ದಷ್ಟೇ. ಸಚಿವ ಸತೀಶ ಜಾರಕಿಹೊಳಿ ಬಂಡುಕೋರ ನಾಯಕರಲ್ಲ ಎಂದು ಪಾಟೀಲ್‌ ಹೇಳಿದರು.

ನಾನು ಸಿಎಂ ಆಗಬೇಕೆಂಬುದು ಜನರ ಬಯಕೆ: ಡಿಕೆಶಿ
ಬೆಳಗಾವಿ: ನಾನು ಮುಖ್ಯಮಂತ್ರಿ ಆಗಬೇಕೆಂಬ ಬಯಕೆ ಜನರಲ್ಲಿದೆ. ರಾಜ್ಯದ ಜನರಿಗೆ ಒಳ್ಳೆಯ ಆಡಳಿತ ನೀಡಬೇಕು ಎಂಬುದು ನಮ್ಮ ಮೊದಲ ಆದ್ಯತೆ. ಪಕ್ಷದ ವರಿಷ್ಠರು ಯಾವಾಗ, ಏನು ತೀರ್ಮಾನ ಮಾಡುತ್ತಾರೋ ಮಾಡಲಿ. ಆ ಬಗ್ಗೆ ನಾವು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಡಿಕೆಶಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ನೊಣವಿಕೆರೆ ಸ್ವಾಮೀಜಿ ಆಶೀರ್ವಾದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯದ ಜನತೆ ಐದು ವರ್ಷ ಅ ಧಿಕಾರ ಕೊಟ್ಟಿದ್ದಾರೆ. ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡುವ ನಿಟ್ಟಿನಲ್ಲಿ ನಾವು ಆದ್ಯತೆ ನೀಡುತ್ತಿದ್ದೇವೆ. ಅದೆಲ್ಲವೂ ವರಿಷ್ಠರಿಗೆ ಬಿಟ್ಟಿದ್ದು. ನನಗೆ ಯಾರೊಂದಿಗೂ ಭಿನ್ನಾಭಿಪ್ರಾಯ ಇಲ್ಲ. ಆಂತರಿಕವಾಗಿಯೂ ಇಲ್ಲ, ಬಹಿರಂಗವಾಗಿಯೂ ಇಲ್ಲ ಎಂದರು.

ಈ ಸಲ ಮಳೆಯ ಕೊರತೆ ಆಗಿದೆ. 60ರಿಂದ 70 ದಿನ ಮಾತ್ರ ಮಳೆಯಾಗುತ್ತಿದೆ. ಒಂದು ದಿನ ಮಳೆ ಆಗದಿದ್ದರೆ ಸರಕಾರಕ್ಕೆ ಒಂದು ಸಾವಿರ ಕೋಟಿ ರೂ. ನಷ್ಟವಾಗುತ್ತದೆ. ವಿದ್ಯುತ್‌ ಉತ್ಪಾದನೆ ಹೆಚ್ಚಳಕ್ಕೆ ನಮ್ಮ ಸರಕಾರ ಹೆಚ್ಚಿನ ಮುತುವರ್ಜಿ ವಹಿಸಿದೆ. ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರೊಂದಿಗೆ ಪಾವಗಡಕ್ಕೆ ಹೋಗಿ ವಿವರಿಸಿದ್ದೇವೆ. ಮೊದಲು ರೈತರಿಗೆ 6 ಗಂಟೆ ವಿದ್ಯುತ್‌ ವಿತರಣೆ ಮಾಡಲಾಗುತ್ತಿತ್ತು. ಸಿದ್ದರಾಮಯ್ಯ ಜತೆ ಮಾತನಾಡಿ ನಮ್ಮ ಸರಕಾರವೇ 7 ಗಂಟೆ ವಿದ್ಯುತ್‌ ನೀಡುತ್ತಿದೆ. ಈಗ ರೈತರಿಗೆ ಸ್ವಲ್ಪ ಕಷ್ಟವಾಗುತ್ತಿದೆ. ರೈತರು ನೀರು ಬಳಕೆ ಬಗ್ಗೆ ಜಾಗೃತಿ ವಹಿಸಬೇಕು. ನೀರು ಕಳ್ಳತನ ಆಗುತ್ತಿರುವುದು ಸರಕಾರಕ್ಕೆ ದೊಡ್ಡ ಭಾರ ಆಗುತ್ತಿದೆ. ನೀರು ಬಳಕೆದಾರರ ಸಂಘಗಳನ್ನು ಕ್ರಿಯಾಶೀಲ ಮಾಡುವ ಪ್ರಯತ್ನ ನಡೆದಿದೆ. ನೀರು ಸಂರಕ್ಷಣೆಗೆ ಕಾನೂನು ತರಲು ನಮ್ಮ ಸರಕಾರ ನಿರ್ಧಾರ ತೆಗೆದುಕೊಂಡಿದೆ ಎಂದರು.

ತಮಿಳುನಾಡು ಸರಕಾರದಿಂದ ಬೊಮ್ಮಸಂದ್ರ, ಹೊಸೂರು ಮೆಟ್ರೋ ಯೋಜನೆ ಜಾರಿ ಕುರಿತು ಯಾವ ಟೆಂಡರ್‌ ಕರೆದಿಲ್ಲ. ಕಾರ್ಯ ಸಾಧ್ಯತೆ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಗಡಿಯವರೆಗೂ ನಗರ ಪ್ರದೇಶ ವಿಪರೀತ ಬೆಳೆದು ಬಿಟ್ಟಿದೆ. ಅಲ್ಲಿಯ ಜನ ಇಲ್ಲಿಗೆ ಬರುತ್ತಾರೆ, ಇಲ್ಲಿಯ ಜನ ಅಲ್ಲಿ ಹೋಗುತ್ತಾರೆ ಎಂಬುದಾಗಿ ಈ ಹಿಂದೆ ಅವರು ಒಂದು ಮನವಿ ಮಾಡಿಕೊಂಡಿದ್ದರು. ಸಾಧ್ಯತೆ ನೋಡುತ್ತೇವೆ. ಮೆಟ್ರೋಗೆ ಕೇಂದ್ರ ಸರಕಾರದ ಶೇ.50ರಷ್ಟು ಪಾಲು ಇದೆ ಎಂದರು.

ಬೆಳಗಾವಿ 2ನೇ ರಾಜಧಾನಿ ಅಬಾಧಿತ
ಕರ್ನಾಟಕದ ಗಡಿಭಾಗಗಳಲ್ಲಿ ಮಹಾರಾಷ್ಟ್ರ ಸರಕಾರ ಆರೋಗ್ಯ ವಿಮೆ ಜಾರಿಗೆ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಮಹಾರಾಷ್ಟ್ರದ ವಿವಾದಾತ್ಮಕ ನಿರ್ಣಯದ ಮಾಹಿತಿಯನ್ನು ಸಿಎಂ ಗಮನಕ್ಕೆ ತರುತ್ತೇನೆ. ಈ ಬಗ್ಗೆ ಮಾಹಿತಿ ಇಲ್ಲದೆ ವಿವಾದಾತ್ಮಕ ಹೇಳಿಕೆ ನೀಡಬಾರದು ಎಂಬ ಕಾರಣಕ್ಕೆ ಸರಿಯಾಗಿ ಚರ್ಚಿಸಿ ಸರಕಾರದ ಒಟ್ಟಾರೆ ನಿಲುವು ತಿಳಿಸುತ್ತೇವೆ. ಈ ಭಾಗದಲ್ಲಿ ಸುವರ್ಣ ವಿಧಾನಸೌಧವನ್ನು ಬೆಳಗಾವಿ ಸುರಕ್ಷಿತವಾಗಿ ಇರಲಿ ಎಂಬ ಕಾರಣಕ್ಕೆ ನಿರ್ಮಾಣ ಮಾಡಲಾಗಿದೆ. ರಾಜ್ಯದ ಎರಡನೇ ರಾಜಧಾನಿಯಾಗಿ ಬೆಳಗಾವಿಯನ್ನು ಉಳಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next