ಕಲಬುರಗಿ: ಕಳೆದ ಎಂಟು ತಿಂಗಳಿನಿಂದ ಖಾಲಿ ಬಿದ್ದಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆಗೆ ಕೊನೆಗೂ ದಕ್ಷ ಕೆಎಎಸ್ ಅಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಅವರನ್ನು ನಿಯೋಜಿಸಲಾಗಿದೆ. ಮಂಗಳವಾರ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ನಾಗರಾಜ ಆರ್. ಅವರು ತೆಗ್ಗಳಿ ಅವರನ್ನು ಜಿಲ್ಲಾ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆ ಜತೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆ ಕಾರ್ಯಭಾರ ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.
ವಿಭಾಗೀಯ ಕೇಂದ್ರ ಹೊಂದಿರುವ ಕಲಬುರಗಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಹುದ್ದೆ ಕಳೆದ ಎಂಟು ತಿಂಗಳಿನಿಂದ ಖಾಲಿ ಬಿದ್ದಿತ್ತು. ಕಲಬುರಗಿ ಸಹಾಯಕ ಆಯುಕ್ತರೇ ಹೆಚ್ಚುವರಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಎಂಟು ತಿಂಗಳ ಸುದೀರ್ಘ ಅವಧಿವರೆಗೂ ಪ್ರಮುಖ ಹುದ್ದೆ ಖಾಲಿ ಇದ್ದಿರುವುದು ಹಾಗೂ ಆಡಳಿತ ನಿರ್ವಹಣೆ ಮೇಲೆ ತುಂಬಾ ಪರಿಣಾಮ ಬೀರಿದ್ದು ಇದೇ ಮೊದಲು.
ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಗೋವಿಂದ ರೆಡ್ಡಿ ಅವರು ಕಳೆದ ನವೆಂಬರ್ 4ರಂದು ರಾಯಚೂರಿಗೆ ವರ್ಗಾವಣೆಯಾದ ನಂತರ ಇಂದಿನ ದಿನದವರೆಗೆ ಸರ್ಕಾರ ಅತ್ಯಂತ ಮಹತ್ವದ ಹುದ್ದೆಗೆ ಬೇರೆ ಅಧಿಕಾರಿಯನ್ನು ನಿಯೋಜಿಸದೇ ಖಾಲಿ ಬಿಟ್ಟಿತ್ತು. ಈಗ ಭರ್ತಿಯಾದಂತಾಗಿದೆ. ಈ ನಡುವೆ ಯಾದಗಿರಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ| ಸತೀಶ ಅವರನ್ನು ಕಲಬುರಗಿ ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನಾಗಿ ವರ್ಗ ಮಾಡಲಾಗಿತ್ತು.
ಆದರೆ ವಿಜಯಪುರದಿಂದ ಗಂಗೂಬಾಯಿ ಮಾನಕರ್ ಅವರು ಯಾದಗಿರಿಗೆ ವರ್ಗವಾಗಿದ್ದರೂ ಬಾರದೇ ಇದ್ದುದರಿಂದ ಡಾ| ಸತೀಶ ಅವರು ಕಲಬುರಗಿಗೆ ಬರಲೇ ಇಲ್ಲ. ಆದರೆ ಸರ್ಕಾರ ಮತ್ತೆ ಬೇರೆ ಅಧಿಕಾರಿಯನ್ನು ಕಲಬುರಗಿ ಎಡಿಸಿ ಹುದ್ದೆಗೆ ವರ್ಗಾವಣೆಗೊಳಿಸುವ ಪ್ರಯತ್ನ ಮಾಡದಿರುವ ಹಿನ್ನೆಲೆಯಲ್ಲಿ ಖಾಲಿಬಿದ್ದಿತ್ತು.
ಈ ಕುರಿತು ಕಳೆದ ಏಪ್ರಿಲ್ 2ರಂದು “ಉದಯವಾಣಿ’ಯಲ್ಲಿ ವಿಶೇಷ ವರದಿ ಮಾಡಲಾಗಿತ್ತು. ಇದಕ್ಕೆ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಸ್ಪಂದಿಸಿ ಶೀಘ್ರದಲ್ಲಿಯೇ ಎಡಿಸಿ ಹುದ್ದೆಗೆ ಕೆಎಎಸ್ ಅಧಿಕಾರಿಯನ್ನು ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದ್ದರು. ಅದು ಈಗ ಸಾಕಾರಗೊಂಡಂತಾಗಿದೆ.
ಸಹಾಯಕ ಆಯುಕ್ತರಾಗಿ ಸೇವೆ: ಭೀಮಾಶಂಕರ ತೆಗ್ಗಳಿ ಕಲಬುರಗಿ ಹಾಗೂ ಸೇಡಂ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಘತ್ತರಗಾ ಭಾಗ್ಯವಂತಿ ಹಾಗೂ ರೇವಗ್ಗಿ ರೇವಣಸಿದ್ದೇಶ್ವರ ದೇವಸ್ಥಾನ ಸೇರಿದಂತೆ ಇತರ ಖ್ಯಾತ ದೇವಾಲಯಗಳನ್ನು ವಿಶೇಷ ಆಸಕ್ತಿ ವಹಿಸಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿರುವ ಭೀಮಾಶಂಕರ ಅವರು ದಕ್ಷ ಅಧಿಕಾರಿ ಎಂದೇ ಖ್ಯಾತಿ ಪಡೆದಿದ್ದಾರೆ.
ಕಳೆದ ಮಾರ್ಚ್ 27ರಂದು ಚಿತ್ತಾಪುರ ತಾಲೂಕಿನ ದಂಡೋತಿ ಬಳಿ ಕಾಗಿಣಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಮಧ್ಯರಾತ್ರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪಾಲ್ಗೊಂಡಿದ್ದರು. ದಾಳಿ ನಂತರ ವರ್ಗಾವಣೆಯಾಗುತ್ತದೆ ಎಂಬುದನ್ನು ಸಹ “ಉದಯವಾಣಿ’ಯಲ್ಲಿ ವರದಿ ಮಾಡಲಾಗಿತ್ತು.
ತದನಂತರ ಕಳೆದ ಏ.12ರಂದು ಐಟಿಬಿಟಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ವರ್ಗಾವಣೆಯಾಗಿದ್ದರು. ಈಗ ಕಲಬುರಗಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ.