Advertisement

ಕೊನೆಗೂ ಪೂರ್ಣಗೊಳ್ಳುತ್ತಿದೆ ಕೋರ್ಟ್‌ರಸ್ತೆ ಕಾಮಗಾರಿ

10:49 AM May 27, 2018 | |

ಮಹಾನಗರ: ಕಾಮಗಾರಿ ನನೆಗುದಿಗೆ ಬಿದ್ದು ನಿಧಾನಗತಿಯಲ್ಲಿ ಸಾಗಿದ ಒಟ್ಟು 11 ಕೋ.ರೂ. ಅನುದಾನದ ನಗರದ ಕೋರ್ಟ್‌ ರಸ್ತೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿಸಿದ್ದು, ಮುಂದಿನ 20 ದಿನಗಳೊಳಗೆ ರಸ್ತೆಯು ಸಂಚಾರಕ್ಕೆ ಮುಕ್ತ ಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡ ಬಳಿಕ ಬಾಕಿ ಉಳಿದಿರುವ ಒಳ ಚರಂಡಿ ಹಾಗೂ ತಡೆಗೋಡೆ ಕಾಮಗಾರಿ ಮುಂದುವರಿಯಲಿದೆ.

Advertisement

2015ರ ಜೂನ್‌ 6ರಂದು ಕಾಮಗಾರಿಗೆ ಶಿಲಾನ್ಯಾಸ ನಡೆದಿದ್ದರೂ ತಡೆಗೋಡೆ, ಹೊಸ ವಿಧಾನದ ಸಾಯಿಲ್‌ ನೈಲಿಂಗ್‌ ಕಾಮಗಾರಿ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಿದ್ದವು. ಜತೆಗೆ ಸಾಯಿಲ್‌ ನೈಲಿಂಗ್‌ ತಂತ್ರಜ್ಞರಾದ ಐಐಟಿಯ ನಿವೃತ್ತ ವಿಜ್ಞಾನಿ ಪ್ರೊ| ಬಿ.ಆರ್‌. ಶ್ರೀನಿವಾಸ ಮೂರ್ತಿ ಅವರು ಕಾಮಗಾರಿಯ ವಿನ್ಯಾಸ ಬದಲಾಯಿಸಿದ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು ಎಂದು
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಭಿಪ್ರಾಯಿಸುತ್ತಾರೆ.

ಹೊಸ ವಿಧಾನದ ಸಾಯಿಲ್‌ ನೈಲಿಂಗ್‌ ಕಾಮಗಾರಿ ನಡೆಸುವವರು ಸ್ಥಳೀಯವಾಗಿ ಯಾರಿಲ್ಲ. ಹೀಗಾಗಿ ಆಂಧ್ರದ ಗುತ್ತಿಗೆ ಸಂಸ್ಥೆಯೊಂದು ಈ ಕಾಮಗಾರಿ ನಡೆಸಿದೆ. ಟೆಂಡರ್‌ ಅವಧಿಯ ಪ್ರಕಾರ ಕಾಮಗಾರಿ ಕಳೆದ ಫೆಬ್ರವರಿಯಲ್ಲಿ ಮುಗಿಯಬೇಕಿತ್ತು. ಆದರೆ ಇದು ಅತ್ಯಂತ ಕ್ಲಿಷ್ಟವಾದ ಕಾಮಗಾರಿಯಾದ ಹಿನ್ನೆಲೆಯಲ್ಲಿ ಕೊಂಚ ವಿಳಂಬವಾಗಿದೆ.

310 ಮೀ.ಉದ್ದದ ರಸ್ತೆ
ನಗರದ ಕರಂಗಲ್ಪಾಡಿಯಿಂದ ನ್ಯಾಯಾಲಯ ಸಂಕೀರ್ಣದವರೆಗಿನ 310 ಮೀ. ಉದ್ದದ ಕಾಂಕ್ರೀಟ್‌ ರಸ್ತೆಯ ಕಾಮಗಾರಿ ಇದೀಗ ಬಹುತೇಕ ಪೂರ್ಣಗೊಂಡಿದ್ದು, ಕರಂಗಲ್ಪಾಡಿ ಬಳಿ ಮೋರಿ ನಿರ್ಮಿಸಿ ಮುಖ್ಯರಸ್ತೆಗೆ ಜೋಡಿಸುವ ಕಾಮಗಾರಿ ನಡೆಯುತ್ತಿದೆ. ನ್ಯಾಯಾಲಯದ ಬಳಿ ತಿರುವಿನಲ್ಲಿ ಸುಮಾರು 5 ಮೀ.ನಷ್ಟು ರಸ್ತೆಗೆ ಕಾಂಕ್ರೀಟ್‌ ಹಾಕಲು ಬಾಕಿಯಿದ್ದು, ಅಲ್ಲಿ ರಸ್ತೆಯನ್ನು ತಗ್ಗುಗೊಳಿಸುವ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲಿ ಅಲ್ಲಿಗೆ ಕಾಂಕ್ರೀಟ್‌ ಹಾಕಿ ಕ್ಯೂರಿಂಗ್‌ ಕಾರ್ಯ ಪೂರ್ಣಗೊಳ್ಳಲು ಸುಮಾರು 15ರಿಂದ 20 ದಿನಗಳು ಬೇಕಾಗಬಹುದು. ಆದಾದ ಬಳಿಕ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು
ಎಂಜಿನಿಯರ್‌ ವಿವರಿಸುತ್ತಾರೆ.

8 ಪ್ಲಸ್‌ 3 ಕೋ.ರೂ.ಅನುದಾನ
ಇಲ್ಲಿನ ಒಟ್ಟು ಕಾಮಗಾರಿಗಳಿಗೆ 11 ಕೋ. ರೂ.ಮಂಜೂರುಗೊಂಡಿದ್ದು, 8 ಕೋ.ರೂ. ಲೋಕೋಪಯೋಗಿ ಇಲಾಖೆ ಹಾಗೂ 3 ಕೋ.ರೂ.ಸ್ಥಳೀಯ ಶಾಸಕರ ನಿಧಿಯಿಂದ ಬಿಡುಗಡೆಗೊಂಡಿತ್ತು. ಇದರಲ್ಲಿ 310 ಮೀ.ಉದ್ದದ ರಸ್ತೆ, 190 ಮೀ.ಉದ್ದದ ತಡೆಗೋಡೆ ಹಾಗೂ ಸಾಯಿಲ್‌ ನೈಲಿಂಗ್‌ ಕಾಮಗಾರಿಗಳು ನಡೆದಿವೆ. ಜತೆಗೆ ಮುಂದೆ ಒಳಚರಂಡಿ, ಫ‌ುಟ್‌ಪಾತ್‌ ಕಾಮಗಾರಿಗಳು ನಡೆಯಬೇಕಿದೆ. ಇದರಲ್ಲಿ ಕಾಂಕ್ರೀಟ್‌ ಕಾಮಗಾರಿ ಕೇವಲ 4 ಕೋ.ರೂ.ಗಳಲ್ಲಿ ನಡೆದಿದೆ. ಹಿಂ ದೆ ಕೋರ್ಟ್‌ ರಸ್ತೆಯು 4.5 ಮೀ. ಅಗಲ ಹೊಂದಿತ್ತು. ಆದರೆ ಈಗ 9 ಮೀ.ಅಗಲದ ರಸ್ತೆ ಹಾಗೂ ಇಕ್ಕೆಲಗಳಲ್ಲಿ 3 ಮೀ.ಅಗಲದ ಫ‌ುಟ್‌ಪಾತ್‌ ಸೇರಿ ರಸ್ತೆಯ ಒಟ್ಟು ಅಗಲ 12 ಮೀ.ನಷ್ಟಾಗಿದೆ. 

Advertisement

ಶಾಸಕರ ತರಾಟೆ!
2015ರ ಜೂನ್‌ 6ರಂದು ಅಂದಿನ ಲೋಕೋಪಯೋಗಿ ಇಲಾಖಾ ಸಚಿವರ ನೇತೃತ್ವದಲ್ಲಿ ಕಾಮಗಾರಿಗೆ ಶಿಲಾನ್ಯಾಸ
ನಡೆದಿದ್ದರೂ ಕಾಮಗಾರಿ ವೇಗ ಪಡೆದುಕೊಂಡಿರಲಿಲ್ಲ. ಜತೆಗೆ ಸಾರ್ವಜನಿಕರಿಂದಲೂ ಅನೇಕ ದೂರುಗಳು ಬಂದಿದ್ದವು. ಹೀಗಾಗಿ ಹಿಂದೊಮ್ಮೆ ನಿಕಟಪೂರ್ವ ಶಾಸಕ ಜೆ.ಆರ್‌.ಲೋಬೊ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿತ್ತು.  

ಶೀಘ್ರ ಸಂಚಾರಕ್ಕೆ ಮುಕ್ತ
ಕೋರ್ಟ್‌ ರಸ್ತೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ನ್ಯಾಯಾಲಯದ ಬಳಿಯ ತಿರುವಿನಲ್ಲಿ 5 ಮೀ.ನಷ್ಟು ಕಾಂಕ್ರೀಟ್‌ ಹಾಕಲು ಬಾಕಿ ಇದೆ. ಮುಂದಿನ 20 ದಿನಗಳಲ್ಲಿ ಈ ಕಾಮಗಾರಿ ಮುಗಿದ ಬಳಿಕ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಬಳಿಕ ಡ್ರೈನೇಜ್‌ ಕಾಮಗಾರಿ ನಡೆಯಲಿದೆ. ಇಲ್ಲಿ ಹೊಸ ವಿಧಾನದ ಸಾಯಿಲ್‌ ನೈಲಿಂಗ್‌ ಕಾಮಗಾರಿಯ ಹಿನ್ನೆಲೆಯಲ್ಲಿ ಕೆಲಸಗಳು ಕೊಂಚ ನಿಧಾನಗತಿಯಲ್ಲಿ ಸಾಗಿದ್ದವು. ಟೆಂಡರ್‌ ಪ್ರಕಾರ ಫೆಬ್ರವರಿ-ಮಾರ್ಚ್‌ಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು.
ರವಿಕುಮಾರ್‌
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌,
ಲೋಕೋಪಯೋಗಿ ಇಲಾಖೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next