ಆಲಂಕಾರು: ಮುಖ್ಯಮಂತ್ರಿ ಶಾಲಾ ಸಂಪರ್ಕ ಸೇತು ಯೋಜನೆಯಡಿ ತಾವು ಶಾಲೆಗೆ ಹೋಗುವ ದಾರಿಯಲ್ಲಿ ಸಿಗುವ ತೊರೆಗೆ ಸೇತುವೆ ನಿರ್ಮಿಸಿ ಕೊಟ್ಟದ್ದಕ್ಕಾಗಿ ಪುತ್ತೂರಿನ ಕುಂತೂರು ಉನ್ನತೀಕರಿಸಿದ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಸಿಎಂ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ವತಿಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಶಾಲಾ ಸಂಪರ್ಕ ಸೇತು ನಿರ್ಮಾಣವಾಗಿದ್ದು, ಇದರ ಅನುಷ್ಠಾನದ ಕುರಿತು ಸ್ಥಳೀಯರ ಅಭಿಪ್ರಾಯ ತಿಳಿಯುವ ನಿಟ್ಟಿನಲ್ಲಿ ಮಂಗಳವಾರ ಸಿಎಂ ಅವರು ವಿದ್ಯಾರ್ಥಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಆಯೋಜಿಸಿದ್ದರು.
ಪುತ್ತೂರು ತಾಲೂಕಿನ (ಪ್ರಸ್ತುತ ಕಡಬ) ಪೆರಾಬೆ ಗ್ರಾ.ಪಂ. ವ್ಯಾಪ್ತಿಯ ಕುಂತೂರು ಉನ್ನತೀಕರಿಸಿದ ಹಿ.ಪ್ರಾ. ಶಾಲೆಗೆ ಸಂಬಂಧಿಸಿ ಕುಂತೂರು ಮಜಲು ಅರ್ಬಿಯಲ್ಲಿ 10.10 ಲಕ್ಷ ರೂ. ಅನುದಾನದಲ್ಲಿ ಕಾಲು ಸಂಕ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಆ ಶಾಲೆಯ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು. ಅರ್ಬಿ ಪ್ರದೇಶದಲ್ಲೇ ವಿಡಿಯೋ ಕಾನ್ಫರೆನ್ಸ್ ನಡೆಯಿತು. ವಿದ್ಯಾರ್ಥಿಗಳ ಪರವಾಗಿ ಶಿಕ್ಷಕ ಜಿ.ಪಿ. ಜಯಪ್ರಕಾಶ್ ರೈ ಅರ್ಬಿ ಸಿಎಂ ಜತೆ ಮಾತನಾಡಿದರು. ವಿದ್ಯಾರ್ಥಿನಿ ಪ್ರತೀಕ್ಷಾ, ಶಿಕ್ಷಕಿ ವಿದ್ಯಾ ಮಂಜುಳಾ ಅವರೂ ಅಭಿಪ್ರಾಯ ವ್ಯಕ್ತಪಡಿಸಿದರು.
ಅರ್ಬಿಯ ತೋಡು ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಮಕ್ಕಳಿಗೆ ಶಾಲೆಗೆ ಹೋಗಲು ಕಷ್ಟವಾಗು ತ್ತಿತ್ತು. ಈಗ ಕಾಲುಸಂಕ ನಿರ್ಮಾಣ ವಾಗಿರುವುದರಿಂದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯರಿಗೆ ಅನುಕೂಲವಾಗಿದೆ. ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಾಲಯ, ಚರ್ಚ್, ಬೇಳ್ಪಾಡಿ ಮಸೀದಿ, ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ.
ತಮ್ಮ ವ್ಯಾಪ್ತಿಯಲ್ಲಿ ಬೇರೆ ಯಾವ ಸಮಸ್ಯೆ ಇದೆ ಎಂದು ಪ್ರಶ್ನಿಸಿ ಅದನ್ನು ನೋಟ್ ಮಾಡಿಟ್ಟುಕೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದು, ಅದರಂತೆ ರಸ್ತೆ ಸಮಸ್ಯೆ ವಿವರಿಸುವ ವೇಳೆ ಸಂಪರ್ಕ ಕಡಿತಗೊಂಡಿತು ಎಂದು ಶಿಕ್ಷಕ ಜಯಪ್ರಕಾಶ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಈ ಸಂದರ್ಭ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್ ಕಾನಿಷ್ಕ, ಕಿರಿಯ ಎಂಜಿನಿಯರ್ ರವಿಚಂದ್ರ ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳ ಜತೆ ಉಪಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಇದ್ದರು.
ಸಿಎಂ ಜತೆ ಕಾನ್ಫರೆನ್ಸ್‌ಗೆ ವ್ಯವಸ್ಥೆ
ಶಾಲಾ ಸಂಪರ್ಕ ಸೇತು ಯೋಜನೆಯ ಕುರಿತು ನಮ್ಮ ಮೇಲಧಿಕಾರಿಗಳ ನಿರ್ದೇಶನದಂತೆ ಸಿಎಂ ಜತೆಗಿನ
ಕಾನ್ಫರೆನ್ಸ್‌ಗೆ ವ್ಯವಸ್ಥೆ ಮಾಡಿದ್ದೆವು. ಪೂರ್ವಾಹ್ನ 11.45ರ ವೇಳೆಗೆ ಸಿಎಂ ಮಾತುಕತೆ ನಡೆಸಿದ್ದಾರೆ. ಈ ಕಾಲುಸಂಕವು ಪುತ್ತೂರು ಉಪವಿಭಾಗದಿಂದ ಅನುಷ್ಠಾನಗೊಂಡಿತ್ತು. – ಕಾನಿಷ್ಕ, ಸಹಾಯಕ ಎಂಜಿನಿಯರ್, ಪಿಡಬ್ಲ್ಯುಡಿ, ಪುತ್ತೂರು