ಬೆಂಗಳೂರು/ತಮಿಳುನಾಡು: ಭಾರೀ ಪ್ರಮಾಣದಲ್ಲಿ ಹಳೇ ನೋಟುಗಳನ್ನು ಸಂಗ್ರಹಿಸಿಟ್ಟುಕೊಂಡ ಪ್ರಕರಣದಲ್ಲಿ ಕಳೆದ 27 ದಿನಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ನಾಗನನ್ನು ತಮಿಳುನಾಡಿನ ಆರ್ಕಾಟ್ ನಲ್ಲಿ ಬಂಧಿಸಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ.
ವೆಲ್ಲೂರು ಜಿಲ್ಲೆಯ ಆರ್ಕಾಟ್ ನಲ್ಲಿ ನಾಗ ಹಾಗೂ ಇಬ್ಬರು ಮಕ್ಕಳಾದ ಗಾಂಧಿ, ಶಾಸ್ತ್ರಿಯನ್ನು ಎಸಿಪಿ ರವಿ ಕುಮಾರ್ ನೇತೃತ್ವದ ವಿಶೇಷ ಪೊಲೀಸ್ ತಂಡ ಬಂಧಿಸಿದೆ.
ಶ್ರೀರಾಂಪುರದ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದ ವೇಳೆ ನಾಗ ಪರಾರಿಯಾಗಿದ್ದ. ಈ ಸಂದರ್ಭದಲ್ಲಿ ಪೊಲೀಸರು ಕೋಟ್ಯಂತರ ರೂಪಾಯಿ 500, 1000 ರೂ. ಮುಖಬೆಲೆಯ ಹಳೇ ನೋಟುಗಳನ್ನು ವಶಪಡಿಸಿಕೊಂಡಿದ್ದರು. ನಾಗನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರೂ ಕೂಡಾ ಸುಮಾರು 27 ದಿನಗಳ ಕಾಲ ತಲೆ ಮರೆಸಿಕೊಂಡಿದ್ದ.
ಏತನ್ಮಧ್ಯೆ ರಹಸ್ಯ ಸ್ಥಳದಿಂದ ನಾಗ ತನ್ನ ವಕೀಲರ ಮೂಲಕ ಮಾಧ್ಯಮಗಳಿಗೆ ವಿಡಿಯೋ ರವಾನಿಸಿ, ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕಾರಣಿಗಳು, ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದ. ಅಲ್ಲದೇ ತಾನು ಶರಣಾಗಲು ಷರತ್ತು ವಿಧಿಸಿದ್ದ. ಹೈಕೋರ್ಟ್ ಕೂಡಾ ನಾಗನಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.
ನಂತರ 2ನೇ ವಿಡಿಯೋ ಬಿಡುಗಡೆ ಮಾಡಿ, ಗೃಹ ಸಚಿವರಾದ ಪರಮೇಶ್ವರ್ ಅವರು ಒಪ್ಪಿದರೆ ತಾನು ಹತ್ತು ನಿಮಿಷದಲ್ಲೇ ಶರಣಾಗುವೆ ಎಂದು ಹೇಳಿದ್ದ. ಪೊಲೀಸರಿಗೂ ಷರತ್ತು ವಿಧಿಸಿದ್ದ.