ಬೆಂಗಳೂರು: ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳ ಅಂತಿಮ ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ತಿಳಿಸಿದೆ.
ಅವಧಿ ಮುಗಿದ ರಾಜ್ಯದ ಹಲವು ನಗರ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವ ಸಂಬಂಧ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಮಂಗಳವಾರ ರಾಜ್ಯ ಚುನಾವಣಾ ಆಯೋಗ ಈ ಮಾಹಿತಿ ನೀಡಿತು.
ವಿಚಾರಣೆ ವೇಳೆ ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ನ್ಯಾಯವಾದಿ ಕೆ.ಎನ್. ಫಣೀಂದ್ರ ಅವರು ವಾದ ಮಂಡಿಸಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆ, ದೊಡ್ಡಬಳ್ಳಾಪುರ ನಗರಸಭೆ ಮತ್ತು ತರೀಕೆರೆ ಪುರಸಭೆಯ ಅಂತಿಮ ಮತದಾರರ ಪಟ್ಟಿ ಸಿದ್ದಗೊಂಡಿದೆ. ಸ್ಥಳೀಯ ವಸ್ತುಸ್ಥಿತಿ ತಿಳಿಯಲು ಚುನಾವಣಾ ಆಯೋಗ ಮಂಗಳವಾರ (ಜು.20) ಸಭೆ ಆಯೋಜಿಸಿದೆ. ವಸ್ತುಸ್ಥಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ಅಯೋಧ್ಯೆ ಭೂಖರೀದಿ ವ್ಯವಹಾರ ಪಾರದರ್ಶಕ: ಪೇಜಾವರಶ್ರೀ
ಅದೇ ರೀತಿ ಧಾರವಾಡ ಪೀಠದಲ್ಲಿ ವಿಚಾರಣೆ ಹಂತದಲ್ಲಿದ್ದ ಹೊಸಪೇಟೆ, ಗದಗ-ಬೆಟಗೇರಿ, ಅಣ್ಣಿಗೇರಿ ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಅಧಿಸೂಚನೆಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದ್ದು, ಹೊಸದಾಗಿ ಮೀಸಲಾತಿ ನಿಗದಿಪಡಿಸಲು ಮೂರು ತಿಂಗಳು ಕಾಲಾವಕಾಶ ಕೇಳಿದೆ ಎಂದು ಚುನಾವಣಾ ಆಯೋಗದ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಸ್ಥಳೀಯ ವಸ್ತುಸ್ಥಿತಿ ಪರಿಗಣಿಸಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಅದರಂತೆ, ಆಗಸ್ಟ್ 3ರೊಳಗೆ ಹೈಕೋರ್ಟ್‌ಗೆ ತೀರ್ಮಾನ ತಿಳಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಆಗಸ್ಟ್ 4ಕ್ಕೆ ಮುಂದೂಡಿತು.