Advertisement

ನಿಡಿಗಲ್‌ ನೂತನ ಸೇತುವೆಗೆ ಅಂತಿಮ ಸ್ಪರ್ಶ

09:37 PM Dec 30, 2019 | mahesh |

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಮಂಗಳೂರು- ಚಿಕ್ಕಮಗಳೂರು 73ರ ನಿಡಿಗಲ್‌ನಲ್ಲಿ ನೇತ್ರಾವತಿ ನದಿಗೆ 15 ಕೋ. ರೂ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಹಳೆಯ ಸೇತುವೆಗೆ ಮುಕ್ತಿ ದೊರೆಯಲಿದೆ.

Advertisement

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಬಳಿ ಇರುವ ನಿಡಿಗಲ್‌ ಬಳಿ 1938ರ ಜೂ. 9ರಂದು ಬ್ರಿಟಿಷರ ಕಾಲದಲ್ಲಿ ಸೇತುವೆ ನಿರ್ಮಾಣವಾಗಿತ್ತು. ಈ ಸೇತುವೆ 81 ವರ್ಷಗಳವರೆಗೂ ಲಕ್ಷಾಂತರ ವಾಹನಗಳ ಸಂಚಾರ ಸೇತುವಾಗಿತ್ತು. 10 ವರ್ಷಗಳಿಂದಲೂ ನೂತನ ಸೇತುವೆಗೆ ಮನವಿ ಸಲ್ಲಿಸುತ್ತ ಬಂದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ.

ಬಿ.ಸಿ. ರೋಡ್‌-ಕಡೂರು ರಸ್ತೆಯ ರಾ.ಹೆ.-234 ಆಗಿ ಮೇಲ್ದರ್ಜೆಗೇರಿದ ಬಳಿಕ ಮೊದಲ ಅನುದಾನದಲ್ಲಿ ಬಿ.ಸಿ. ರೋಡ್‌ -ಚಾರ್ಮಾಡಿ ಮಧ್ಯೆ ಬೆಳ್ತಂಗಡಿ ತಾ| ನಿಡಿಗಲ್‌, ಚಾರ್ಮಾಡಿ ಹಳ್ಳ, ಬಂಟ್ವಾಳ ತಾ| ಮಣಿಹಳ್ಳದಲ್ಲಿ ಹಳೆ ಸೇತುವೆಗಳಲ್ಲಿ ಎರಡು ಬದಿ ಘನ ವಾಹನ ಓಡಾಟಕ್ಕೆ ಸಾಧ್ಯವಾಗದ ಹಿನ್ನೆಲೆ 3 ನೂತನ ಸೇತುವೆಗಳಿಗೆ ಒಟ್ಟು 28 ಕೋ. ರೂ. ಅನುದಾನ ಮಂಜೂರಾಗಿತ್ತು.

ಕಳೆದ ವರ್ಷ ಚಾರ್ಮಾಡಿ ಮಣಿ ಹಳ್ಳದಲ್ಲಿ ಸೇತುವೆ ಸಂಪರ್ಕ ರಸ್ತೆ ನಿರ್ಮಾಣವಾಗಿ ವಾಹನ ಸಂಚಾರಕ್ಕೆ ಮುಕ್ತ ಗೊಳಿಸಲಾಗಿದೆ. ನಿಡಿಗಲ್‌ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣಗೊಂಡು ಹೊಸ ಸೇತುವೆ ಕಾಮಗಾರಿಯೂ ಸಂಪೂರ್ಣಗೊಂಡಿದೆ. ಇನ್ನೇನು ಉದ್ಘಾಟನೆಯಷ್ಟೇ ಬಾಕಿ ಉಳಿದಿದೆ.

140 ಮೀ. ಉದ್ದ, -16 ಮೀ. ಅಗಲ
ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ಕೇಂದ್ರ ಸರಕಾರ 15 ಕೋ. ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿತ್ತು. ನೇತ್ರಾವತಿ ನದಿಗೆ ಅಡ್ಡಲಾಗಿ ಸುಮಾರು 140 ಮೀ. ಉದ್ದಕ್ಕೆ ನಿರ್ಮಾಣಗೊಂಡಿದೆ. 16 ಮೀ. ಅಗಲವನ್ನು ಹೊಂದಿದ್ದು, ಪಾದಚಾರಿಗಳಿಗೆ ವಾಹನ ಢಿಕ್ಕಿ ಸಂಭವಿಸುವುದನ್ನು ತಪ್ಪಿಸಲು ವೈಜ್ಞಾನಿಕ ರೀತಿ ತಡೆಗೋಡೆ ಹೊಂದಿರುವ ಫುಟ್‌ಪಾತ್‌ ನಿರ್ಮಿಸಲಾಗಿದೆ.

Advertisement

ಬೇಡಿಕೆಗೆ ಕೊನೆಗೂ ಫಲ
ಬೆಂಗಳೂರು- ಚಿಕ್ಕಮಗಳೂರು ಮಾರ್ಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ, ಶ್ರೀಕ್ಷೇತ್ರ ಕಟೀಲು, ಸುಬ್ರಹ್ಮಣ್ಯ ಮುಂತಾದ ಪವಿತ್ರ ಕ್ಷೇತ್ರಗಳಿಗೆ ಬರುವ ಭಕ್ತರ ಪ್ರಯಾಣಕ್ಕೆ ಇದೇ ಸೇತುವೆ ಸಂಪರ್ಕ ಕೊಂಡಿಯಾಗಿತ್ತು. ಘನ ವಾಹನ ಸಾಗಾಟ ಸಂದರ್ಭ ಸೇತುವೆ ಸಾಮರ್ಥಯದ ಅಪಾಯ ಎದುರಾಗಿತ್ತು. ಕಿರಿದಾದ ಸೇತುವೆಯಿಂದಾಗಿ ಪ್ರಯಾಣಕ್ಕೆ ಹರಸಾಹಸ ಪಡುವಂತಿತ್ತು. ಸೇತುವೆ ಮೇಲೆ ಗುಂಡಿ ಬಿದ್ದಿರುವುದರಿಂದ ಅನೇಕ ವರ್ಷಗಳಿಂದ ಮಳೆಗಾಲದಲ್ಲಿ ವಾಹನಗಳು ತಾಸುಗಟ್ಟಲೆ ಸರತಿ ಸಾಲು ನಿಲ್ಲುವಂತಹ ಸ್ಥಿತಿ ಇತ್ತು. ಈ ಬಾರಿ ಆ. 9ರಂದು ಬಂದ ಪ್ರವಾಹಕ್ಕೆ ಸೇತುವೆ ಕೊಚ್ಚಿಹೋಗುವ ಮಟ್ಟಕ್ಕೆ ನೀರು ಏರಿತ್ತು. ಸೇತುವೆ ನಿರ್ಮಾಣದ ಬೇಡಿಕೆಯಿಟ್ಟು ಉದಯವಾಣಿ 2011ರಿಂದಲೇ ಹಲವು ಬಾರಿ ವರದಿ ಪ್ರಕಟಿಸಿತ್ತು. ಕಡೆಗೂ ಸೇತುವೆ ನಿರ್ಮಾಣ ಪೂರ್ಣಗೊಂಡಿರುವುದು ಸಾರ್ವಜನಿಕರಿಗೆ ಸಂತಸ ತಂದಿದೆ.

 ಶೀಘ್ರವೇ ಸಂಚಾರಕ್ಕೆ ಮುಕ್ತ
ನಿಡಿಗಲ್‌ ಸೇತುವೆ ಕಾಮಗಾರಿ ಬಹುತೇಕ ಅಂತಿಮಗೊಂಡಿದೆ. ಚಾರ್ಮಾಡಿ ಹಳ್ಳ ಸೇತುವೆಯಲ್ಲಿ ಈಗಾಗಲೇ ವಾಹನ ಸಂಚಾರ ಆರಂಭಗೊಂಡಿದೆ. ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆಯು ವಿಸ್ತರಣೆಗಾಗಿ ಸರ್ವೇ ಮಾಡುತ್ತಿದ್ದು, ವರದಿಯನ್ನು ಸರಕಾರಕ್ಕೆ ನೀಡಲಾಗುವುದು. ಶೀಘ್ರದಲ್ಲೇ ನಿಡಿಗಲ್‌ ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು.  - ಸುಬ್ಬರಾಮ ಹೊಳ್ಳ, ಕಾರ್ಯಪಾಲಕ ಅಭಿಯಂತರು, ರಾ.ಹೆ. ಪ್ರಾಧಿಕಾರ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next