ಹೊಸದಿಲ್ಲಿ: ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಮಧ್ಯರಾತ್ರಿ ಹೊರಬಿದ್ದಿದೆ. ಯಾವ ರಾಜ್ಯದಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಗುರುವಾರ ರಾತ್ರಿ 11.15ರ ಸುಮಾರಿಗೆ ಹರ್ಯಾಣ ವಿಧಾನಸಭೆಯ ಫಲಿತಾಂಶವನ್ನು ಚುನಾವಣಾ ಆಯೋಗ ಅಂತಿಮಗೊಳಿಸಿದೆ. ಒಟ್ಟು ವಿಧಾನಸಭಾ ಚುನಾವಣೆಯ ಒಟ್ಟು 90 ಕ್ಷೇತ್ರಗಳ ಪೈಕಿ ಆಡಳಿತಾರೂಢ ಬಿಜೆಪಿ 40 ಸ್ಥಾನವನ್ನಷ್ಟೇ ಗೆದ್ದುಕೊಳ್ಳಲು ಶಕ್ತವಾಗಿದೆ. ಉಳಿದಂತೆ ಕಾಂಗ್ರೆಸ್ 31, ಜೆಜೆಪಿ 10, ಹರ್ಯಾಣ ಲೋಕಹಿತ ಪಕ್ಷ ಒಂದು, ಇಂಡಿಯನ್ ನ್ಯಾಷನಲ್ ಲೋಕ ದಳ ಒಂದು ಸ್ಥಾನ ಮತ್ತು ಇತರರು ಒಟ್ಟು ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಬಹುಮತಕ್ಕೆ 46 ಸ್ಥಾನಗಳ ಅವಶ್ಯಕತೆಯಿದೆ. ಬಿಜೆಪಿ ದೊಡ್ಡ ಪಕ್ಷವಾಗಿ ಮೂಡಿಬಂದಿದ್ದರೂ ಕೂಡಾ ಬಹಬಹುಮತಕ್ಕೆ ಆರು ಸ್ಥಾನಗಳ ಕೊರತೆಯಿದೆ. ಹೀಗಾಗಿ ಮುಂದಿನ ರಾಜಕೀಯ ಚಟುವಟಿಕೆಗಳು ಕುತೂಹಲ ಹುಟ್ಟಿಸಿವೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಹೊರಬಿದ್ದಿದೆ. ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಒಟ್ಟು 162 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಉಳಿದಂತೆ ಕಾಂಗ್ರೆಸ್ ಎನ್ ಸಿಪಿ ಮೈತ್ರಿ 104 ಸ್ಥಾನಗಳನ್ನು ಗೆದ್ದುಕೊಂಡಿದೆ. ಇತರರು 22 ಸ್ಥಾನಗಳಿಗೆ ತೃಪ್ತಿ ಪಡೆದುಕೊಂಡಿದ್ದಾರೆ.
ಪಕ್ಷವಾರು ಬಲಾಬಲ ನೋಡುವುದಾದರೆ ಬಿಜೆಪಿ 105 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಶಿವಸೇನೆ 56 ಕ್ಷೇತ್ರಗಳಲ್ಲಿ ವಿಜಯಿಯಾಗಿದೆ. ಶರದ್ ಪವಾರ್ ನೇತೃತ್ವದ ಎನ್ ಸಿಪಿ 54 ಕ್ಷೇತ್ರಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ 44 ಸ್ಥಾನಗಳಲ್ಲಿ ವಿಜಯಿಯಾಗಿದೆ. ಉಳಿದಂತೆ ಎಮ್ ಎನ್ ಎಸ್ ಒಂದು ಸ್ಥಾನ ಗೆದ್ದರೆ, ಇತರರು 28 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.