ಕಾಪು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ, ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಆರ್ಟ್ ಆಫ್ ಲೀವಿಂಗ್ ನ ಸಂಸ್ಥಾಪಕ, ಪದ್ಮವಿಭೂಷಣ ಗುರುದೇವ್ ಶ್ರೀ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ಫೆ. 20 ರಂದು ಸಂಜೆ 4 ಗಂಟೆಯಿಂದ 8 ಗಂಟೆಯವರೆಗೆ ಜ್ಞಾನ, ಧ್ಯಾನ ಹಾಗೂ ಗಾಯನಗಳನ್ನೊಳಗೊಂಡಿರುವ ಆನಂದ ಲಹರಿ – ಸುಮಧುರ ಸಂಜೆ ಕಾರ್ಯಕ್ರಮ ನಡೆಯಲಿದೆ.
ಉಡುಪಿ ಜಿಲ್ಲೆಯ ಕಾಪು ಮಂಥನ್ ಬೀಚ್ ರೆಸಾರ್ಟ್ ಬಳಿಯ ಸಮುದ್ರ ಕಿನಾರೆಯಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ಮನುಷ್ಯನ ಸಂಪೂರ್ಣ ವ್ಯಕ್ತಿತ್ವವನ್ನು ವಿಕಸನಗೊಳಿಸುವಲ್ಲಿ ಸಫಲವಾಗಿರುವ ಜೀವನ ಕಲೆ ಹಾಗೂ ಸುದರ್ಶನ ಕ್ರಿಯಾಯೋಗದ ಆನಂದ ಲಹರಿ ಮಹಾಸತ್ಸಂಗ ಕಾರ್ಯಕ್ರಮಕ್ಕೆ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ.
ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಮಂಥನ್ ಬೀಚ್ ರೆಸಾರ್ಟ್ ಬಳಿ ಆಗಮಿಸುವ ಜನರ ಅನುಕೂಲಕ್ಕಾಗಿ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಸತ್ಸಂಗದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಆಯೋಜಕರ ವತಿಯಿಂದ ಬೆಲ್ಲ ಬಳಸಿಕೊಂಡು ಶೀರಾ, ಅವಲಕ್ಕಿ ಮತ್ತು ಕಡಲೆ ಬಳಸಿಕೊಂಡು ವಿಶೇಷ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.
ಆನಂದ ಲಹರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲಕ್ಕಾಗಿ ಮೂಳೂರು ಸಾಯಿರಾಧಾ ಹೆರಿಟೇಜ್ ಬಳಿ, ಕಾಪು ಓಶಿಯನ್ ಬೀಚ್ ರೆಸಾರ್ಟ್ ಬಳಿ, ಕಾಪು ಪಡು ಸರಕಾರಿ ಶಾಲೆ ಬಳಿ, ಮಂಥನ್ ಬೀಚ್ ರೆಸಾರ್ಟ್ ಬಳಿಯ ನಾಲ್ಕು ಕಡೆಗಳಲ್ಲಿ ಸೂಕ್ತ ರೀತಿಯ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆಗಮಿಸುವ ಪ್ರತೀಯೊಬ್ಬರಿಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು ಪ್ಲಾಸ್ಟಿಕ್ ರಹಿತವಾಗಿ ಸ್ಟೀಲ್ ಲೋಟ ಮತ್ತು ಪೇಪರ್ ಲೋಟಗಳಲ್ಲಿ ನೀರು ವಿತರಿಸಲಾಗುವುದು.
ಕಾರ್ಯಕ್ರಮ ಸಂಯೋಜಕರಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಸಹೋದರರಾದ ಹರೀಶ್ ಪಿ. ಶೆಟ್ಟಿ ಗುರ್ಮೆ, ಸತೀಶ್ ಪಿ. ಶೆಟ್ಟಿ ಗುರ್ಮೆ ನೇತೃತ್ವದಲ್ಲಿ ಎಲ್ಲಾ ಸಮಾಜ ಬಾಂಧವರು ಮತ್ತು ಆರ್ಟ್ ಆಫ್ ಲೀವಿಂಗ್ ಬಳಗದವರ ನೇತೃತ್ವದಲ್ಲಿ ಕಾರ್ಯಕ್ರಮದ ಪೂರ್ವ ತಯಾರಿಗಳು ಪೂರ್ಣಗೊಂಡಿವೆ.