ಹುಬ್ಬಳ್ಳಿ: ರಾಜ್ಯದ ಏಕೈಕ ರಾಜ್ಯ ಸಮಾಚಾರ ಕೇಂದ್ರ ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೊಳಗಾಗಿದ್ದು, ಕಳೆದ ಆರೂವರೆ ವರ್ಷದಿಂದ ಹಿರಿಯ ಸಹಾಯಕ ನಿರ್ದೇಶಕ ಹುದ್ದೆ ಖಾಲಿಯಿದೆ. ವರ್ಷದಿಂದ ವರ್ಷಕ್ಕೆ ಸಿಬ್ಬಂದಿ ಸಂಖ್ಯೆ ಕಡಿತಗೊಳ್ಳುತ್ತಿದೆ. ಉತ್ತರ ಕರ್ನಾಟಕ ಭಾಗದ ಕಚೇರಿ ಎನ್ನುವ ಕಾರಣಕ್ಕೆ ಅಧಿಕಾರಿಗಳು ಕೇಂದ್ರ ಕಚೇರಿಗೆ ಸೀಮಿತವಾಗುತ್ತಿದ್ದಾರೆ.
ಮುಖ್ಯಸ್ಥರ ಹುದ್ದೆ ಖಾಲಿ: ಬೆಂಗಳೂರು ಹೊರತುಪಡಿಸಿದರೆ ಈ ಕಚೇರಿ ವ್ಯಾಪ್ತಿ ದೊಡ್ಡದು ಎನ್ನುವ ಕಾರಣಕ್ಕೆ 2002ರಲ್ಲಿ ಇಲ್ಲಿಗೆ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಯನ್ನು ಸರ್ಕಾರ ಮಂಜೂರು ಮಾಡಿತ್ತು. ವಿಪರ್ಯಾಸ ಅಂದರೆ 2013ರಿಂದ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆ ಪ್ರಭಾರಿಯಲ್ಲೇ ನಡೆಯುತ್ತಿದೆ. ಒಂದೊಂದೇ ಹುದ್ದೆ ಕಡಿತಗೊಳ್ಳುತ್ತಿದೆ. ನಿವೃತ್ತಿ ನಂತರ ಯಾವುದೇ ಹುದ್ದೆಗಳು ಭರ್ತಿಯಾಗುತ್ತಿಲ್ಲ. ಜಿಲ್ಲಾ ಕೇಂದ್ರಗಳಲ್ಲಿರುವ ವಾರ್ತಾ ಸಹಾಯಕ ಹುದ್ದೆ ಕೂಡ ಇಲ್ಲಿಲ್ಲ. ಹೀಗಾಗಿ ಸ್ವಾಗತಕಾರ ವಾರ್ತಾ ಅಧಿಕಾರಿಯ ಕೆಲಸ ನಿರ್ವಹಿಸುವಂತಾಗಿದೆ!
ಹೆಚ್ಚುತ್ತಿದೆ ಕಾರ್ಯಾಭಾರ: ನಗರಕ್ಕೆ ವಿಮಾನ ಸೇವೆಯಲ್ಲಿ ಹೆಚ್ಚಳವಾಗುತ್ತಿದ್ದಂತೆ ನಿತ್ಯವೂ ಸಚಿವರು, ವಿವಿಧ ಇಲಾಖೆ ಮುಖ್ಯಸ್ಥರು ಅಗಮಿಸುತ್ತಿದ್ದಾರೆ. ಇದರಿಂದ ಸರ್ಕಾರಿ ಕಾರ್ಯಕ್ರಮಗಳು ಹೆಚ್ಚುತ್ತಿವೆ. ಅಲ್ಲದೇ ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವರು, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಇದೇ ನಗರದವರಾಗಿದ್ದಾರೆ. ರಾಜ್ಯ ಗೃಹ ಮಂತ್ರಿಗಳ ನಿವಾಸವೂ ನಗರದಲ್ಲೇ ಇರುವುದರಿಂದ ಸರ್ಕಾರಿ ಕಾರ್ಯಕ್ರಮಗಳು ಹೆಚ್ಚಾಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಧಾರವಾಡದ ಹಿರಿಯ ಸಹಾಯ ನಿರ್ದೇಶಕರು ಜಿಲ್ಲಾ ಕೇಂದ್ರ ಸೇರಿದಂತೆ ಇಲ್ಲಿನ ಸರ್ಕಾರಿ ಕಾರ್ಯಕ್ರಮಗಳಿಗೆ ಗಮನ ಹರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಏಕಕಾಲಕ್ಕೆ ಜಿಲ್ಲೆಯಲ್ಲಿ ಎರಡು ಮೂರು ಕಾರ್ಯಕ್ರಮಗಳಿದ್ದರೆ ದೇವರೇ ಗತಿ.
ಕಚೇರಿಯ ಮುಖ್ಯಸ್ಥರ ಹುದ್ದೆ ಖಾಲಿ ಇರುವ ಪರಿಣಾಮ ನಿತ್ಯದ ಕಾರ್ಯದಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ಪ್ರಮುಖವಾಗಿ ಸರ್ಕಾರಿ ಯೋಜನೆಗಳಿಗೆ ಪ್ರಚಾರ ಕೊಡಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಕೇವಲ ಸರ್ಕಾರಿ ಕಾರ್ಯಕ್ರಮಗಳ ವರದಿಗೆ ಮಾತ್ರ ಸೀಮಿತವಾದಂತಾಗಿದೆ.
Advertisement
ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಅರವತ್ತರ ದಶಕದಲ್ಲಿ ಹುಬ್ಬಳ್ಳಿಯಲ್ಲಿ ರಾಜ್ಯ ಸಮಾಚಾರ ಕೇಂದ್ರವನ್ನು ಅಂದಿನ ಸರ್ಕಾರ ಆರಂಭಿಸಿತು. ಪ್ರಮುಖ ಪತ್ರಿಕಾ ಕಚೇರಿಗಳು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಅಲ್ಲದೇ ಅಂದಿನ ಸಮಯದಲ್ಲಿ ಪೂರ್ಣ ಪ್ರಮಾಣದ ವರದಿಗಾರರು ಕೂಡ ಇಲ್ಲಿಂದಲೇ ಕಾರ್ಯನಿರ್ವಹಿಸುತ್ತಿದ್ದರು. ಈ ಎಲ್ಲಾ ಕಾರಣದಿಂದ ಉತ್ತರ ಕರ್ನಾಟಕ ಈ ಕಚೇರಿಯ ವ್ಯಾಪ್ತಿಯಾಗಿತ್ತು. ಬೆಂಗಳೂರು ಹೊರತುಪಡಿಸಿದರೆ ವಾರ್ತಾ ಇಲಾಖೆಯ ಬಹು ದೊಡ್ಡ ಕಚೇರಿ ಇದಾಗಿತ್ತು. ರಾಜ್ಯದ ಎರಡನೇ ದೊಡ್ಡ ಕಚೇರಿ ಎಂಬ ಹೆಗ್ಗಳಿಕೆ ಹೊಂದಿದ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಹುದ್ದೆ ಆರು ವರ್ಷದಿಂದ ಪ್ರಭಾರಿಯಲ್ಲೇ ಸಾಗುತ್ತಿದೆ. ಕೇಂದ್ರ ಹಾಗೂ ರಾಜ್ಯದ ಪ್ರಮುಖ ಖಾತೆಗಳನ್ನು ಹೊಂದಿದ ಇಬ್ಬರೂ ಸಚಿವರು ಇಲ್ಲಿನವರು ಇರುವಾಗಲೇ ಇಂತಹ ಪರಿಸ್ಥಿತಿ ಬಂದೊದಗಿರುವುದು ದುರಂತ.
Related Articles
Advertisement
ಅಧಿಕಾರಿಗಳಿಗೆ ಕೊರತೆಯಿಲ್ಲ: ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಮಂಜೂರು ಮಾಡುತ್ತಿದ್ದಂತೆ ಕಾಲಕಾಲಕ್ಕೆ ಅಧಿಕಾರಿಗಳ ನೇಮಕಾತಿ ನಡೆಯುತ್ತಿದೆ. ಬಹುತೇಕ ಅಧಿಕಾರಿಗಳು ಬೆಂಗಳೂರಿಗೆ ಸೀಮಿತವಾಗುತ್ತಿದ್ದಾರೆ. ಕೇಂದ್ರ ಕಚೇರಿಯಲ್ಲಿ ಠಿಕಾಣಿ ಹೂಡುತ್ತಿದ್ದು, ಒಂದಿಷ್ಟು ಅಧಿಕಾರಿಗಳು ಕೆಲ ಅಕಾಡೆಮಿಗಳಿಗೆ ವಲಸೆ ಹೋಗಿದ್ದಾರೆ. ರಾಜ್ಯದ ಏಕೈಕ ರಾಜ್ಯ ಸಮಾಚಾರ ಕೇಂದ್ರ ಉತ್ತರ ಕರ್ನಾಟಕ ಭಾಗದಲ್ಲಿ ಇರುವುದರಿಂದ ಅಧಿಕಾರಿಗಳು ಈ ಭಾಗಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚೆಗೆ ಓರ್ವ ಮಹಿಳಾ ಅಧಿಕಾರಿ ಬಡ್ತಿಯೊಂದಿಗೆ ವರ್ಗಾವಣೆ ಪಡೆದು ಈ ಕಚೇರಿಗೆ ಆಗಮಿಸಿ ವರದಿ ಮಾಡಿಕೊಂಡಿದ್ದಷ್ಟೇ. ಹೆಚ್ಚುವರಿ ಕಾರ್ಯಾಭಾರದಿಂದಾಗಿ ಪುನಃ ಬೆಂಗಳೂರಿಗೆ ವರ್ಗಾವಣೆ ಪಡೆದುಕೊಂಡರು.
ಹುಬ್ಬಳ್ಳಿ ಎರಡನೇ ರಾಜಧಾನಿ ಎಂಬುದು ಕೇವಲ ಮಾತಿಗೆ ಸೀಮಿತವಾದಂತಾಗಿದ್ದು, ದೆಹಲಿ ಹೊರತುಪಡಿಸಿದರೆ ರಾಜ್ಯ ಸಮಾಚಾರ ಕೇಂದ್ರ ಇರುವುದು ನಗರದಲ್ಲಿ ಮಾತ್ರ. ಸಿಬ್ಬಂದಿ ನಿವೃತ್ತಿ, ಬಡ್ತಿಯಿಂದ ಹುದ್ದೆಗಳು ಖಾಲಿಯಾಗುತ್ತಿದ್ದು, ಮುಂದೊಂದು ದಿನ ರಾಜ್ಯದ ಏಕೈಕ ಸಮಾಚಾರ ಕೇಂದ್ರ ಮುಚ್ಚುವುದರಲ್ಲಿ ಎರಡು ಮಾತಿಲ್ಲ. ಇಂತಹ ಪರಿಸ್ಥಿತಿ ಎದುರಾಗುವ ಮುಂಚೆಯೇ ಓರ್ವ ಅಧಿಕಾರಿಯನ್ನು ನಿಯೋಜಿಸಿ, ಈ ಭಾಗದ ಕಚೇರಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಮುಂದಾಗಬೇಕಿದೆ.
ಪೂರ್ಣ ಪ್ರಮಾಣದ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆ ಖಾಲಿಯಿದ್ದರೆ ಕಚೇರಿ ಕಾರ್ಯಗಳೊಂದಿಗೆ ಪ್ರಮುಖವಾಗಿ ಸರ್ಕಾರದ ಜನರಪರ ಯೋಜನೆಗಳಿಗೆ ಪ್ರಚಾರ ಕೊಡಿಸಿ ಜನರಿಗೆ ಮುಟ್ಟಿಸಲು ಸಾಧ್ಯವಿಲ್ಲ. ಹುಬ್ಬಳ್ಳಿ ಹಿಂದಿಗಿಂತ ಸಾಕಷ್ಟು ಅಭಿವೃದ್ಧಿಯಾಗಿದೆ. ಬೆಂಗಳೂರು ಹೊರತುಪಡಿಸಿದರೆ ಸರ್ಕಾರದ ಗಮನ ಇರುವುದು ಹುಬ್ಬಳ್ಳಿ ಮೇಲೆ. ಹೀಗಾಗಿ ರಾಜ್ಯದ ಏಕೈಕ ರಾಜ್ಯ ಸಮಾಚಾರ ಕೇಂದ್ರಕ್ಕೆ ಹಿರಿಯ ಸಹಾಯಕ ನಿರ್ದೇಶಕರನ್ನು ನೀಡುವುದು ಅಗತ್ಯ. •ಪಿ.ಎಸ್. ಪರ್ವತಿ,
ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ
ಒಂದು ದಶಕದಿಂದ ರಾಜ್ಯ ಸಮಾಚಾರ ಕೇಂದ್ರಕ್ಕೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಪತ್ರಕರ್ತರನ್ನು ಕೊಂಡೊಯ್ಯವ ಇಲಾಖೆ ವಾಹನ ಇಲ್ಲ ಎನ್ನುವುದೇ ದೊಡ್ಡ ದುರಂತ. ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸಿ ಪತ್ರಕರ್ತರು ಹಾಗೂ ಸರ್ಕಾರದ ನಡುವೆ ಸಮನ್ವಯತೆ, ಸಂಪರ್ಕ ಕಲ್ಪಿಸುವ ಕೆಲಸ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಅವರಿಂದ ಆಗಬೇಕು. •ಅರುಣಕುಮಾರ ಹಬ್ಬು, ಹಿರಿಯ ಪತ್ರಕರ್ತ
ವರ್ಷವಾದರೂ ವಾಹನವಿಲ್ಲ:
ಸರ್ಕಾರಿ ಕಾರ್ಯಕ್ರಮಗಳಿಗೆ ವರದಿಗಾರರನ್ನು ಕೊಂಡೊಯ್ಯುವ ಇಲಾಖೆ ವಾಹನ ಇಲ್ಲದೆ ಒಂದು ವರ್ಷ ಕಳೆದಿದೆ. ವಾಹನದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದನ್ನು ಹರಾಜು ಮಾಡಿ ಹೊಸ ವಾಹನ ಖರೀದಿ ಮಾಡಲು ಇನ್ನೂ ಸಾಧ್ಯವಾಗುತ್ತಿಲ್ಲ. ಈ ಕುರಿತು ಸಾಕಷ್ಟು ಬಾರಿ ಕಚೇರಿ ಸಿಬ್ಬಂದಿ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಇದು ಉತ್ತರ ಕರ್ನಾಟಕದ ಕಚೇರಿ ಸಮಸ್ಯೆ ಎನ್ನುವ ತಾತ್ಸಾರ ಅಧಿಕಾರಿಗಳಿಗೆ ಮೂಡಿದಂತಿದೆ. ಏಳೆಂಟು ಕಿಮೀ ದೂರದ ಕಾರ್ಯಕ್ರಮಕ್ಕೆ 20 ಕಿಮೀಧಾರವಾಡದಿಂದ ಇಲಾಖೆ ವಾಹನ ತರಿಸಲಾಗುತ್ತಿದೆ. ಇಲ್ಲದಿದ್ದರೆ ಬಾಡಿಗೆ ವಾಹನ ಅನಿವಾರ್ಯವಾಗಿದ್ದು, ಕಚೇರಿಯ ಸಿಬ್ಬಂದಿ ತಮ್ಮ ಜೇಬಿನಿಂದ ಹಣ ಖರ್ಚು ಮಾಡಿ ಆರೇಳು ತಿಂಗಳ ನಂತರ ಸರ್ಕಾರದಿಂದ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
•ಹೇಮರಡ್ಡಿ ಸೈದಾಪುರ