Advertisement

ಮೇ 3ರ ನಂತರ ಹಾಂಕಾಂಗ್‌ ಮಾದರಿ ಜಾರಿಗೊಳಿಸಲು ಕೇಂದ್ರ ಚಿಂತನೆ

08:11 AM May 01, 2020 | Hari Prasad |

ಭಾರತದಲ್ಲಿ ಎರಡನೇ ಹಂತದ ಕೋವಿಡ್ ಲಾಕ್‌ಡೌನ್‌ ಕೊನೆಗೊಳ್ಳಲು ಇನ್ನು ನಾಲ್ಕೇ ದಿನ ಬಾಕಿ ಇವೆ. ಹೀಗಿರುವಾಗ ದೇಶದಲ್ಲಿ ಲಾಕ್‌ಡೌನ್‌ ತೆರವು ಮಾಡಬೇಕೆ, ಬೇಡವೇ ಎಂಬ ಬಗ್ಗೆ ತಜ್ಞರ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.

Advertisement

ಈ ನಡುವೆ ಸೋಂಕನ್ನು ಪರಿಣಾಮಕಾರಿಯಾಗಿ ಕಟ್ಟಿಹಾಕಲು ಹಾಗೂ ಲಾಕ್‌ಡೌನ್‌ನಿಂದ ಹೊರಬರಲು ಹಾಂಗ್‌ಕಾಂಗ್‌ ಮಾದರಿ ಅನುಸರಣೆ ಸೂಕ್ತ ಎಂಬ ಮಾತುಗಳೂ ಕೇಳಿಬರುತ್ತಿವೆ.

ಮೇ 3ರ ನಂತರ, ಲಾಕ್‌ಡೌನ್‌ ತೆರವಾದ ಬಳಿಕ ಹಾಟ್‌ಸ್ಪಾಟ್‌ಗಳಲ್ಲಿ ಮಾತ್ರ ಈಗಿರುವಂಥ ಎಲ್ಲ ನಿರ್ಬಂಧಗಳೂ ಮುಂದುವರಿಯಲಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಜತೆಗೆ ಈಗಾಗಲೇ ಗುರುತಿಸಿರುವ ವಲಯಗಳ ಆಧಾರದಲ್ಲಿ ಲಾಕ್‌ಡೌನ್‌ನ ನಿರ್ಬಂಧಗಳನ್ನು ಸಡಿಲಿಸುವ ನಿರ್ಧಾರವೂ ಕೇಂದ್ರದ ಮುಂದಿದೆ. ಈಗಾಗಲೇ ಹಸಿರು ವಲಯದಯಲ್ಲಿರುವ ಹಲವು ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಿ, ಕೆಲ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.

ಆದರೆ, ಕೆಂಪು ವಲಯ ಮತ್ತು ಹಾಟ್‌ಸ್ಪಾಟ್‌ಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ಎಚ್ಚರ ವಹಿಸುವ ಚಿಂತೆ ಸರಕಾರವನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಹಾಂಗ್‌ಕಾಂಗ್‌ ಮಾದರಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಭಾರತ ಮಾತ್ರವಲ್ಲದೆ, ಯುರೋಪ್‌ ರಾಷ್ಟ್ರಗಳು ಮತ್ತು ಅಮೆರಿಕ ಕೂಡ ಈ ಮಾದರಿ ಮೊರೆ ಹೋಗಲು ಚಿಂತನೆ ನಡೆಸುತ್ತಿವೆ.

Advertisement

ಅಲ್ಲಿ ಇಬ್ಬರೇ ಮೃತರು!: ಚೀನದ ವುಹಾನ್‌ನಿಂದ ಬಂದಿದ್ದ ಕೇರಳದ ಮೂವರು ಯುವಕರಲ್ಲಿ ಕೋವಿಡ್ ಸೋಂಕು ದೃಢಪಡುವ ಮೂಲಕ ಭಾರತದಲ್ಲಿ ವೈರಸ್‌ ತನ್ನ ಖಾತೆ ತೆರೆದಿತ್ತು. ಅದಕ್ಕೂ ಒಂದು ವಾರ ಹಿಂದಷ್ಟೇ ಹಾಂಗ್‌ಕಾಂಗ್‌ನಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು.

ಆದರೆ, ಭಾರತ ಲಾಕ್‌ಡೌನ್‌ ಜಾರಿಗೊಳಿಸುವ ಮೂಲಕ ಚೀನದ ಹಾದಿಯಲ್ಲಿ ನಡೆದರೆ, ಹಾಂಗ್‌ಕಾಂಗ್‌ ಆಡಳಿತ ಮಾತ್ರ ಲಾಕ್‌ಡೌನ್‌ ಜಾರಿಯ ಯೋಚನೆ ಕೂಡ ಮಾಡಲಿಲ್ಲ.

ಆದಾಗ್ಯೂ ಅಲ್ಲಿ ವೈರಸ್‌ ಅನ್ನು ಪರಿಣಾಮಕಾರಿಯಾಗಿ ಕಟ್ಟಿಹಾಕಲಾಯಿತು. ಈವರೆಗೆ ಅಲ್ಲಿ ಕೇವಲ 1,038 ಸೋಂಕಿತರಿದ್ದು, ಕೇವಲ ಇಬ್ಬರು ಮೃತಪಟ್ಟಿದ್ದಾರೆ. ಲಾಕ್‌ಡೌನ್‌ ಜಾರಿ ಹೊರತಾಗಿಯೂ ಭಾರತದಲ್ಲಿಂದು 30 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದಾರೆ.

ಅದ್ಭುತವಾಗಿತ್ತು ಜನಸ್ಪಂದನೆ: ಜನಸಂಖ್ಯೆ ದೃಷ್ಟಿಯಿಂದ ನೋಡುವುದಾದರೆ ಭಾರತ ಮತ್ತು ಹಾಂಗ್‌ಕಾಂಗ್‌ ಅನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಲು ಆಗುವುದಿಲ್ಲ. ಏಕೆಂದರೆ ಅಲ್ಲಿನ ಜನಸಂಖ್ಯೆ ನಮ್ಮ ಬೆಂಗಳೂರಿಗಿಂತಲೂ ಕಡಿಮೆ.

ಆದರೆ, ಸೋಂಕು ಹರಡದಂತೆ ತಡೆಯಲು ಅಲ್ಲಿನ ಜನ ತೋರಿದ ಪ್ರಬುದ್ಧತೆ ಮಾತ್ರ ಅದ್ಭುತ. ಹಾಂಗ್‌ಕಾಂಗ್‌ ಆಡಳಿತ, ಜನರು ತಪ್ಪದೇ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದಷ್ಟೇ ಹೇಳಿತು.

ಇದಕ್ಕೆ ಜನ ಸ್ಪಂದಿಸಿದ ರೀತಿ ಕಂಡು ಜಗತ್ತೇ ಬೆರಗಾಯಿತು. ಏಕೆಂದರೆ ಹಾಂಗ್‌ಕಾಂಗ್‌ನ ಶೇ. 99 ಜನ ಮಾಸ್ಕ್ ಧರಿಸಿ ಓಡಾಡುತ್ತಿದ್ದರು. ಶೇ. 88 ಮಂದಿ ಸಾಮಾಜಿಕ ಅಂತರದ ನಿಯಮ ಪಾಲಿಸಿದರು.

ಏನಿದು ಹಾಂಗ್‌ಕಾಂಗ್‌ ಮಾದರಿ?
ಚೀನ ಹಾಗೂ ಭಾರತದಂತೆ ಲಾಕ್‌ಡೌನ್‌ ಜಾರಿಗೊಳಿಸದೆ, ಕೋವಿಡ್ ಸೋಂಕಿತರನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚುವುದು, ಸೋಂಕಿತರ ಸಂಪರ್ಕಕ್ಕೆ ಒಳಗಾದವರ ಕಟ್ಟುನಿಟ್ಟಿನ ಕ್ವಾರೆಂಟೈನ್‌ ಮತ್ತು ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ನಿಯಮದ ಶಿಸ್ತಿನ ಪಾಲನೆ; ರೀತಿಯ ಮೂರು ಅಂಶಗಳ ಕಾರ್ಯಕ್ರಮದ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟುವುದೇ ಹಾಂಗ್‌ಕಾಂಗ್‌ ಮಾದರಿ.

ಯುಕೆ ಮೂಲದ ದಿ ಲ್ಯಾನ್ಸೆಟ್‌ ವೈದ್ಯಕೀಯ ವಾರಪತ್ರಿಕೆಯ ಏಪ್ರಿಲ್‌ ಎರಡನೇ ವಾರದ ಸಂಚಿಕೆಯಲ್ಲಿ ಪ್ರಕಟವಾಗಿದ್ದ ವಿಶ್ಲೇಷಣೆ ಮೂಲಕ ಜಗತ್ತಿಗೆ ಹಾಂಗ್‌ಕಾಂಗ್‌ ಮಾದರಿ ಪರಿಚಯವಾಯಿತು. ಸರ್ಕಾರದ ಆದೇಶಕ್ಕೆ ಕಾಯದೆ ಸಾರ್ವಜನಿಕರೇ ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು ಈ ಮಾದರಿ ಯಶಸ್ವಿಯಾಗಲು ಪ್ರಮುಖ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next