Advertisement

ಸಚಿವ ಸ್ಥಾನಕ್ಕಾಗಿ ಅಂತಿಮ ಕಸರತ್ತು: ಸಿದ್ದು,ಡಿ.ಕೆ.ಶಿ ನಿವಾಸಕ್ಕೆ ಆಕಾಂಕ್ಷಿಗಳ ಪರೇಡ್‌

10:49 PM May 19, 2023 | Team Udayavani |

ಬೆಂಗಳೂರು: ನೂತನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಿವಾಸಕ್ಕೆ ಭೇಟಿ ನೀಡಿದ ಶಾಸಕರು ಸಚಿವ ಸ್ಥಾನಕ್ಕಾಗಿ ಅಂತಿಮ ಹಂತದ ಕಸರತ್ತು ನಡೆಸಿದರು.

Advertisement

ಸಚಿವ ಸಂಪುಟ ರಚನೆಗೆ ಹೈಕಮಾಂಡ್‌ ಒಪ್ಪಿಗೆ ಪಡೆಯಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಪಟ್ಟಿಯೊಂದಿಗೆ ದಿಲ್ಲಿಗೆ ತೆರಳಿದ್ದು, ಅದಕ್ಕೂ ಮುನ್ನ ಶುಕ್ರವಾರ ಬೆಳಗ್ಗೆ ಶಾಸಕರ ದಂಡು ಉಭಯ ನಾಯಕರ ನಿವಾಸಕ್ಕೆ ಲಗ್ಗೆ ಇಟ್ಟಿತ್ತು.

ಜಿಲ್ಲೆ, ಸಮುದಾಯ, ಪ್ರಾದೇಶಿಕ ನ್ಯಾಯ, ಹಿರಿತನ ಮತ್ತಿತರ ಅಂಶಗಳನ್ನು ಮುಂದಿಟ್ಟು ತಮಗೆ ಸಂಪುಟದಲ್ಲಿ ಅವಕಾಶ ಕೊಡುವಂತೆ ಉಭಯ ನಾಯಕರಿಗೆ ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಡಿ.ಕೆ.ಶಿವಕುಮಾರ್‌ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿ ಮನವಿ ಮಾಡಿದವರು ಮತ್ತೆ ಸಿದ್ದರಾಮಯ್ಯ ನಿವಾಸಕ್ಕೆ ಮನವಿ ಸಲ್ಲಿಸುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಇವರಿಬ್ಬರು ಯಾರಿಗೂ ಭರವಸೆ, ಆಶ್ವಾಸನೆ ಕೊಡದೆ ಎಲ್ಲವೂ ಹೈಕಮಾಂಡ್‌ ತೀರ್ಮಾನ, ವರಿಷ್ಠರ ನಿರ್ಧಾರ ಅಂತಿಮ ಎಂದು ಹೇಳಿ ಸಾಗಹಾಕಿದರು.

ಪರಂ ನಿವಾಸದಲ್ಲಿ ಚರ್ಚೆ
ಮತ್ತೂಂದೆಡೆ ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್‌ ನಿವಾಸಕ್ಕೆ ಮಾಜಿ ಸಚಿವರಾದ ಮೋಟಮ್ಮ, ಟಿ.ಬಿ.ಜಯಚಂದ್ರ ಸಹಿತ ಹಲವು ಶಾಸಕರು ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಯಚಂದ್ರ, ಸಚಿವ ಸ್ಥಾನದ ಕುರಿತು ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧ ಎಂದು ಹೇಳಿದರು.

Advertisement

ಜಗದೀಶ್‌ ಶೆಟ್ಟರ್‌ ಭೇಟಿ
ಸಿದ್ದರಾಮಯ್ಯ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಆಗಮಿಸಿ ಅಭಿನಂದನೆ ಸಲ್ಲಿಸಿದರು. ಅನಂತರ ಮಾತನಾಡಿದ ಅವರು, ಸಿದ್ದರಾಮಯ್ಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿರುವುದರಿಂದ ಅವರಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದೆ. ಬೇರೆ ಯಾವುದೇ ಚರ್ಚೆ ಮಾಡಿಲ್ಲ ಎಂದರು.
ಇದೇ ಸಂದರ್ಭದಲ್ಲಿ ನಾನು ಕಾಂಗ್ರೆಸ್‌ ಪಕ್ಷ ವಹಿಸುವ ಹೊಣೆಗಾರಿಕೆ ನಿಭಾಯಿಸಲು ಸಿದ್ಧ. ಯಾವುದೇ ಬೇಡಿಕೆ ಇಟ್ಟಿಲ್ಲ ಎಂದೂ ತಿಳಿಸಿದರು.

ಜಮೀರ್‌ಗೆ ಸಂಪುಟದಲ್ಲಿ

ಬೆಂಗಳೂರು: ಚುನಾವಣ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅವರಿಗೆ ನೂತನ ಸಚಿವ ಸಂಪುಟ ಸೇರಲು ಅವಕಾಶ ನೀಡಬಾರದು ಎಂದು ನವಭಾರತ ಸೇನಾ ಸಂಚಾಲಕ ಎಸ್‌.ರುಕಾ¾ಂಗದ ಅವರು ರಾಜ್ಯಪಾಲರಲ್ಲಿ ಮನವಿ ಮಾಡಿದರು.

ಶುಕ್ರವಾರ ರಾಜ್ಯಪಾಲರನ್ನು ಭೇಟಿ ಮಾಡಿದ ಅವರು, ಜಮೀರ್‌ ಚುನಾವಣ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ಆಯೋಗಕ್ಕೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುವುದಾಗಿ ಹೇಳಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವೈಯಕ್ತಿಕ ಆಸೆ-ಆಕಾಂಕ್ಷೆ ಬದಿಗಿಟ್ಟು ಒಟ್ಟಾರೆ ಕೆಲಸ ಮಾಡುವುದಷ್ಟೇ ನಮ್ಮ ಆದ್ಯತೆ. ಪಕ್ಷ ಎಲ್ಲದಕ್ಕಿಂತ ದೊಡ್ಡದು. ಹೈಕಮಾಂಡ್‌ ತೀರ್ಮಾನವೇ ಅಂತಿಮ. ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ನಡುವಿನ ಸಣ್ಣ ಸಮಸ್ಯೆ ಬಗೆಹರಿದಿದ್ದು ಸಂತೋಷ. –ಡಾ| ಜಿ. ಪರಮೇಶ್ವರ್‌, ಮಾಜಿ ಡಿಸಿಎಂ

ದಲಿತ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಹುದ್ದೆ ಕೊಡಬೇಕಾಗಿದೆ. ಹಿಂದೆಯೂ ಕೊಡಲಾಗಿತ್ತು. ಈ ಸಮುದಾಯ ಕಾಂಗ್ರೆಸ್‌ ಅನ್ನು ಬೆಂಬಲಿಸಿರುವುದರಿಂದ ಸಹಜವಾಗಿ ನಿರೀಕ್ಷೆ ಇರುತ್ತದೆ. ನಾವು ಈ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇವೆ. – ಮೋಟಮ್ಮ, ಮಾಜಿ ಸಚಿವೆ

ಸಚಿವ ಸ್ಥಾನ ವಿಚಾರ ಹೈಕಮಾಂಡ್‌, ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರಿಗೆ ಬಿಟ್ಟದ್ದು. ನಾನು ಸ್ಪೀಕರ್‌ ಸ್ಥಾನ ಅಲಂಕರಿಸುವಷ್ಟು ಆರ್ಹತೆ ಪಡೆದಿಲ್ಲ. – ಆರ್‌.ವಿ. ದೇಶಪಾಂಡೆ, ಮಾಜಿ ಸಚಿವ

ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ನನ್ನನ್ನು ಕಳುಹಿಸಿದ್ದೇ ಹೈಕಮಾಂಡ್‌. ಹೀಗಾಗಿ ಸ್ಥಾನ ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟದ್ದು. ಈಗಿನ ಹಂತದಲ್ಲಿ ಉಪ ಮುಖ್ಯಮಂತ್ರಿ ಬೇಡಿಕೆ ಈಡೇರಿಕೆ ಕಷ್ಟ ಇದೆ. ಹೈಕಮಾಂಡ್‌ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಾಗಿದೆ. – ಕೆ.ಎಚ್‌.ಮುನಿಯಪ್ಪ, ಮಾಜಿ ಕೇಂದ್ರ ಸಚಿವ

ಕಾಂಗ್ರೆಸ್‌ ಪಕ್ಷ ರಾಜ್ಯದ ಜನತೆಗೆ ಒಳ್ಳೆಯ ಸರಕಾರ ಕೊಡಲಿದೆ. ಸಂಪುಟ ರಚನೆ ಸುಸೂತ್ರವಾಗಿ ನಡೆಯಲಿದೆ. ಎಲ್ಲರೂ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧರಾಗುತ್ತಾರೆ. – ಎಚ್‌.ಕೆ.ಪಾಟೀಲ್‌, ಮಾಜಿ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next