ಶಿರಸಿ: ಚುನಾವಣಾ ರಾಜಕಾರಣದಿಂದ ಹೊರಗೆ ಹೋಗಬೇಕು ಎಂದಿದ್ದವನಿಗೆ ಸಮಯ ಕೊಡಿ, ಎಲ್ಲರ ಜೊತೆ ಚರ್ಚೆ ಮಾಡಿ ಚುನಾವಣೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವದಾಗಿ ಸಂಸದ ಅನಂತ ಕುಮಾರ ಹೆಗಡೆ ಹೇಳಿದರು.
ಮಂಗಳವಾರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಒತ್ತಾಯ ಹಾಕಲು ಆಗಮಿಸಿದ ಅಭಿಮಾನಿಗಳ, ಕಾರ್ಯಕರ್ತರ ಜೊತೆ ಮಾತನಾಡಿ, ಒಮ್ಮೆಲೆ ಯು ಟರ್ನ ಆಗಿದ್ದರೆ ವಾಹನ ಪಲ್ಟಿ ಆಗುತ್ತದೆ. ಬರಲಿರುವ ಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ವಾರದ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ನನ್ನ ತೀರ್ಮಾನದ ಬಗ್ಗೆ ಪಕ್ಷದ ವರಿಷ್ಠರಿಂದಲೂ ಯಾವುದೇ ಅಪಸ್ವರ ಇಲ್ಲ. ವರಿಷ್ಠರು ನನ್ನನ್ನು ಸಹಿಸಿಕೊಂಡಿದ್ದಾರೆ. ಹೋಗಬೇಕು ಎಂದೇ ಇದ್ದವನಿಗೆ ಮತ್ತೆ ಬರಲು ಸಮಯ ಬೇಕು. ಮೋದಿ ಅವರು ಗೆಲ್ಲಬೇಕು. ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಬೇಕಿದೆ. ಎಲ್ಲ ಶ್ರಮ ಒಟ್ಟಿಗೆ ಹಾಕಬೇಕು. ಮುಂದೆ ಬಿಜೆಪಿ ಹಿಂದೆ ನೋಡುವುದಿಲ್ಲ ಎಂದೂ ಹೇಳಿದರು.
ಚುನಾವಣಾ ರಾಜಕೀಯ ಸುಮ್ಮನೆ ಯಾಕೆ ಅಂತ ಸುಮ್ಮನಿದ್ದೆ. ನನಗೆ ಯಾರೂ ರಾಜಕಾರಣ ಬೇಡ ಎಂದು ನನ್ನ ಮೇಲೆ ಒತ್ತಾಯ ಮಾಡಿಲ್ಲ. 3 ಚುನಾವಣೆಯಿಂದ ಹೇಳುತ್ತಲೇ ಬಂದಿದ್ದೇನೆ. ಚುನಾವಣಾ ರಾಜಕಾರಣ ಬೇಡ ಎನ್ನುತ್ತಿದ್ದೆ. ಕಳೆದ ಅವಧಿಯಲ್ಲೇ ಸಂಘಟನೆ ಹಿರಿಯರಿಗೆ ಚುನಾವಣಾ ಫಲಿತಾಂಶ ಬರುವುದರೊಳಗೆ ಮುಂದೆ ನಿಲ್ಲೋದಿಲ್ಲ. ಕ್ಷೇತ್ರಕ್ಕೆ ಹೋಗುವುದಿಲ್ಲ. ಬೇರೆ ಹೆಸರು ಹೇಳಿ ಅವರನ್ನು ಕರೆಸಿಕೊಂಡು ಹೋಗುತ್ತೇನೆ ಎಂದೂ ನಿರ್ಧಾರ ತಿಳಿಸಿದ್ದೆ ಎಂದರು.
ನನಗೆ ಆರೋಗ್ಯ ಸಮಸ್ಯೆನೂ ಇತ್ತು. ಬೇಡ ಎಂದೇ ದೂರವಿದ್ದೆ. ರಾಜಕಾರಣ ಬೇಡವೆಂದು ದೂರ ಇರಲು ವಯಕ್ತಿಕ ತೀರ್ಮಾನ. ಯಾರ ಒತ್ತಡವೂ ಇಲ್ಲ ಎಂದರು.
ಅನೇಕ ಧುರೀಣರು ಆಕಾಂಕ್ಷಿತರು ಇದ್ದಾರೆ. ಜನರಿಗೆ ಹೊಸತು ಬೇಕು ಎಂದಾಗ ನಮಗೆ ನೀವೇ ಬೇಕು ಎಂದು ಅಭಿಮಾನಿಗಳು ಕೂಗಿದರು.
ನನಗೂ ಕಳೆದ ನಾಲ್ಕು ವರ್ಷದಲ್ಲಿ ಜನರಿಗೆ ಭೇಟಿ ಆಗದ ಬಗ್ಗೆ ಬೇಸರವಿತ್ತು. ಗಟ್ಟಿ ನಿರ್ಧಾರ ಮಾಡಿದ್ದೆ. ಕಳೆದ ವಿಧಾನ ಸಭಾ ಚುನಾವಣೆ ಬಳಿಕ ಚರ್ಚೆ ಶುರುವಾಗಿದೆ. ಹೇಗೆ ಅಂತ ಗೊತ್ತಾಗಿಲ್ಲ. ಹೇಗೆ ಪ್ರತಿಕ್ರಿಯಸಬೇಕು ಗೊತ್ತಿಲ್ಲ ಎಂದೂ ಪುನರುಚ್ಛರಿಸಿದರು.
ಈ ವೇಳೆ ಪ್ರಮುಖರಾದ ಕೃಷ್ಣ ಕೊಡಿಯಾ, ರಾಜೇಶ ಶೆಟ್ಟಿ, ರೇಖಾ ಹೆಗಡೆ, ಆನಂದ ಗೋಕರ್ಣ, ಭಾಸ್ಕರ ಹೆಗಡೆ ಯಡಹಳ್ಳಿ, ನಂದನ್ ಸಾಗರ, ವಿಶ್ವನಾಥ ಶೀಗೇಹಳ್ಳಿ, ವೀಣಾ ಶೆಟ್ಟಿ ಸೇರಿದಂತೆ ಅಂಕೋಲಾ, ಕುಮಟಾ, ಶಿರಸಿ ಭಾಗದ ನೂರಕ್ಕೂ ಅಧಿಕ ಕಾರ್ಯಕರ್ತರಿದ್ದರು.