Advertisement

ಅಪಘಾತದಿಂದ ನಿರ್ದೇಶಕ ಸಾವು: ರಕ್ತದ ಮಡುವಿನಲ್ಲಿ ಬಿದ್ದರೂ ಸಹಾಯ ಮಾಡದೆ ಮೊಬೈಲ್‌ ಕದ್ದ ಜನ.!

03:58 PM Nov 02, 2023 | Suhan S |

ದೆಹಲಿ: ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವ ಸಿನಿಮಾ ನಿರ್ದೇಶಕನೊಬ್ಬ ಒದ್ದಾಡಿ ಪ್ರಾಣ ಬಿಟ್ಟಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ಇತ್ತೀಚೆಗೆ (ಅ.28 ರಂದು) ನಡೆದಿದೆ.

Advertisement

ಪಿಯೂಷ್ ಪಾಲ್(30) ಮೃತ ನಿರ್ದೇಶಕ. ಎಂಜಿನಿಯರಿಂಗ್ ಪದವೀಧರರಾಗಿದ್ದ ಪಿಯೂಷ್‌ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಕಾರಣ ಸಾಕ್ಷ್ಯಚಿತ್ರಗಳನ್ನು ಹಾಗೂ ಪ್ರೀಲ್ಯಾನ್ಸ್‌ ಪ್ರಾಜೆಕ್ಟ್‌ ಗಳನ್ನು ಮಾಡುತ್ತಿದ್ದರು. ನಿರ್ದೇಶಕನಾಗುವ ಕನಸು ಅವರಲಿ ಇತ್ತು. ಆ ಕಾರಣದಿಂದ ಅವರು ಸಿನಿಮಾ ಸಂಬಂಧಿತ ಕೆಲಸದಲ್ಲಿ ತೊಡಗಿಕೊಂಡಿದ್ದರು.

ಘಟನೆ ಹಿನ್ನೆಲೆ: ಅ.28 ರ ರಾತ್ರಿ 9:45 ರ ಹೊತ್ತಿಗೆ ಪಿಯೂಷ್‌ ಪಂಚಶೀಲ ಪಾರ್ಕ್ ರಸ್ತೆಯಲ್ಲಿ ಶೂಟಿಂಗ್‌ ಮುಗಿಸಿ ಬರುತ್ತಿದ್ದರು. ಈ ವೇಳೆ ಅವರ ಬೈಕ್‌ ಗೆ ಹಿಂದಿನಿಂದ ಬಂಟಿ ಎನ್ನುವಾತನ ಬೈಕ್‌ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸ್ಕಿಡ್‌ ಆಗಿ ಪಿಯೂಷ್‌ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಅವರ ತಲೆಗೆ ತೀವ್ರವಾದ ಗಾಯಗಳಾಗಿವೆ. ಕಾರಣ ಪಿಯೂಷ್ ರಕ್ತದ ಮಡುವಿನಲ್ಲಿ ಬಿದ್ದು, ಒದ್ದಾಡುತ್ತಿದ್ದರು. ಈ ವೇಳೆ ಅಪಘಾತವಾದ ಸ್ಥಳದಲ್ಲಿ ಜನ ಸೇರಿದ್ದಾರೆ. ಆದರೆ ಯಾರು ಕೂಡ ಗಾಯಾಳು ಪಿಯೂಷ್‌ ಅವರನ್ನು ಆಸ್ಪತ್ರೆಗೆ ಸಾಗಿಸದೇ ಬದಲಾಗಿ ಅಪಘಾತ ದೃಶ್ಯವನ್ನು ಮೊಬೈಲ್‌ ನಲ್ಲಿ ಸೆರೆ ಹಿಡಿಯಲು ಶುರು ಮಾಡಿದ್ದಾರೆ.

ಈ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ  ಪಂಕಜ್ ಮಿಸ್ತ್ರಿ ಎನ್ನುವವರು ಜನ ಸೇರಿದ್ದನ್ನು ನೋಡಿ, ಗಂಭೀರ ಸ್ಥಿತಿಯಲ್ಲಿದ್ದ ಪಿಯೂಷ್‌ ಅವರನ್ನು ಆಟೋವೊಂದರಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತವಾದ ಕನಿಷ್ಠ 30 ನಿಮಿಷದ ಬಳಿಕ ಪಿಯೂಷ್‌ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಈ ವೇಳೆ ತೀವ್ರ ರಕ್ತಸ್ರಾವವಾಗಿದ್ದ ಅವರ ಚಿಕಿತ್ಸೆ ಆ ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯಗಳಿರಲಿಲ್ಲ. ಈ ವೇಳೆ ಬೇರೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತಾದರೂ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಘಟನಾ ಸ್ಥಳದಲ್ಲಿದ್ದ ಜನ ಪಿಯೂಷ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡುವ ಬದಲು, ಅವರ ಬಳಿಯಿದ್ದ ಮೊಬೈಲ್‌, ಪಾರ್ಸ್‌ ಹಾಗೂ ಗೋಪ್ರೋ ಕ್ಯಾಮೆರಾಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಪೊಲೀಸರ ಬಳಿ ಪಿಯೂಷ್‌ ಸ್ನೇಹಿತರು ಹೇಳಿದ್ದಾರೆ.

Advertisement

ಸದ್ಯ ಈ ಬಗ್ಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಬಂಟಿ ಎಂಬಾತನ ವಿರುದ್ಧ ಅಜಾಗರೂಕತೆಯಿಂದ ಚಾಲನೆ ಮಾಡಿದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಪಿಯೂಷ್‌ ಸೆಕೆಂಡ್‌ ಹ್ಯಾಂಡ್‌ ಬೈಕ್‌ ಖರೀದಿಸಿದ್ದರು ಎಂದು ವರದಿ ತಿಳಿಸಿದೆ.

ಪಾಲ್ ತಂದೆ ಮತ್ತು ತಾಯಿ ಮತ್ತು ಅಕ್ಕನನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next