ಬೆಂಗಳೂರು: ಕಾಫಿ ಶಾಪ್‌ನ ಮಹಿಳಾ ಶೌಚಾಲಯದ ಡಸ್ಟ್ ಬಿನ್‌ನಲ್ಲಿ ಮೊಬೈಲ್ ಇಟ್ಟು ಅಸಭ್ಯ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಕೆಫೆ ಸಿಬ್ಬಂದಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಭದ್ರಾವತಿ ಮೂಲದ ಮನೋಜ್(24) ಬಂಧಿತ. ಒಂದೂವರೆ ವರ್ಷ ಗಳಿಂದ ಸದಾಶಿವನಗರದ 80 ಅಡಿ ರಸ್ತೆಯಲ್ಲಿರುವ ಥರ್ಡ್ ವೇವ್ ಕಾಫಿ ಶಾಪ್ ನಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಇದರೊಂದಿಗೆ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಫೋನ್ ಇಟ್ಟು, ಅಸಭ್ಯ ದೃಶ್ಯಗಳನ್ನು ರಹಸ್ಯವಾಗಿ ಸೆರೆ ಹಿಡಿಯುವ ಚಟ ಅಂಟಿಸಿಕೊಂಡಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಇನ್ನು ಇತ್ತೀಚೆಗೆ ಮಹಿಳೆಯೊಬ್ಬರು ಕೆಫೆಗೆ ಹೋಗಿದ್ದು, ಕೆಲ ಹೊತ್ತಿನ ಬಳಿಕ ಮಹಿಳಾ ಶೌಚಾಲಯಕ್ಕೆ ಹೋಗಿದ್ದಾರೆ. ಆಗ ಡಸ್ಟ್ ಬಿನ್‌ನಲ್ಲಿ ಮೊಬೈಲ್ ಪತ್ತೆಯಾಗಿದೆ. ಅಚ್ಚರಿಗೊಂಡ ಮಹಿಳೆ, ಅದನ್ನು ತೆಗೆದುಕೊಂಡು ಪರಿಶೀಲಿಸಿದಾಗ, 2 ಗಂಟೆಯಿಂದ ಮೊಬೈಲ್‌ನ ವಿಡಿಯೋ ರೆಕಾರ್ಡ್ ಆನ್ ಆಗಿರುವುದು ಕಂಡು ಬಂದಿದೆ. ಅಲ್ಲದೆ, ಅದನ್ನು ಫ್ಲೈಟ್ ಮೂಡ್‌ಗೆ ಹಾಕಲಾಗಿತ್ತು. ಜತೆಗೆ ಅದನ್ನು ಶೌಚಾಲಯದ ಕಮೋಡ್ ಕಾಣುವಂತೆ ಡಸ್ಟ್‌ಬಿನ್‌ನಲ್ಲಿ ರಹಸ್ಯವಾಗಿ ಇಡಲಾಗಿತ್ತು. ಆಗ ಮಹಿಳೆ, ಮೊಬೈಲ್ ಅನ್ನು ಕೂಡಲೇ ಕೆಫೆಯ ಮಾಲೀಕರಿಗೆ ನೀಡಿ, ದೂರು ನೀಡಿದ್ದಾರೆ. ಮಾಲೀಕರು, ಹೋಟೆಲ್ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮನೋಜ್‌ನ ಕೃತ್ಯ ಬಯಲಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯಿಂದ ದೂರು ದಾಖಲಿಸಿಕೊಂಡು ಆರೋಪಿ ಮನೋಜ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಕುರಿತು ಕ್ಷಮೆಯಾಚಿಸಿರುವ ಥರ್ಡ್ ವೇವ್ ಕಾಫಿ ಕೆಫೆಯ ಆಡಳಿತ ಮಂಡಳಿ, ಗ್ರಾಹಕರ ಸುರಕ್ಷತೆ ಮತ್ತು ಕ್ಷೇಮ ನಮ್ಮ ಆದ್ಯತೆಯಾಗಿದೆ. ಆರೋಪಿತ ಸಿಬ್ಬಂದಿಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿದೆ. ಆರೋಪಿ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.