Advertisement

ಚಿತ್ರನಟ ಮಂಡ್ಯ ರಮೇಶ್‌ಗೆ ರಂಗಪ್ರಶಸ್ತಿ ಪ್ರದಾನ

12:39 PM Jul 19, 2017 | Team Udayavani |

ಕಲಬುರಗಿ: ಕಲಬುರಗಿ ಎನ್ನುವ ಬಿಸಿಲು ನಾಡು ರಾಜ್ಯದ ದೊಡ್ಡ ಭಾವೈಕ್ಯದ ಮಹಾಮನೆ. ಇಲ್ಲಿ ಆತ್ಮಾನುಭವದ
ದರ್ಶನ ಸಾಧ್ಯವಾಗುತ್ತದೆ. ಬಸವಣ್ಣನಿಂದ ಹಿಡಿದು ಸಂತರು, ಸೂಫಿಗಳು ಹಾಗೂ ಶರಣರು ಓಡಾಡಿದ ನೆಲ ಸರ್ವಧರ್ಮದ
ನೆಲೆಯಾದ ಮಹಾಮನೆಯ ಅನುಭಾವ ನನಗೆ ನೀಡಿದೆ ಎಂದು ಬಹುಮುಖ ಹಾಸ್ಯ ಕಲಾವಿದ ಹಾಗೂ ರಂಗಭೂಮಿ ಪ್ರತಿಭೆ ಮಂಡ್ಯ ರಮೇಶ್‌ ಹೇಳಿದರು.

Advertisement

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಮಂಗಳವಾರ ರಂಗಸಂಗಮ ಕಲಾವೇದಿಕೆ ಎಸ್‌.ಬಿ.ಜಂಗಮಶೆಟ್ಟಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಂಗಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಮಹಾಮನೆಯಲ್ಲಿ ಬಸವಣ್ಣ, ಮಹಾತ್ಮಗಾಂಧಿ, ಅಂಬೇಡ್ಕರ್‌, ಬುದ್ಧನ ಪಾತ್ರಗಳು ನನಗೆ ಅಚ್ಚುಮೆಚ್ಚಾಗಿವೆ. ಇದರ ನೆರಳು ರಂಗಭೂಮಿಯ ಮೇಲೂ ಇದೆ. ಅದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೋಯ್ಯಲು ಈ ಭಾಗದ ಕಲಾವಿದರು, ರಂಗಕರ್ಮಿಗಳು ಪ್ರಯತ್ನ ಮಾಡುತ್ತಲೇ ಇದ್ದಾರೆ ಎಂದು ಹೇಳಿದರು.

ಚಲನಚಿತ್ರ ಕಲಾ ನಿರ್ದೇಶಕ ಶಶಿಧರ ಅಡಪ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಬಡವರ ಪರ, ಮಹಿಳೆಯರ ಪರ ದುಡಿಯುವ ಮನಸ್ಸುಗಳಿಗೆ ನಮಸ್ಕರಿಸುವೆ. ಸ್ಪಷ್ಟವಾದ ನಿಲುವು ಗಳನ್ನು ಹೊಂದಿರುವ ಸುಜಾತಾ ಜಂಗಮಶೆಟ್ಟಿ ಅವರ ಕಾರ್ಯವೈಖರಿ ಮೆಚ್ಚಲೇಬೇಕು ಎಂದರು. ಕೇಂದ್ರಿಯ ವಿಶ್ವವಿದ್ಯಾಲಯ ಕುಲಪತಿ ಎಚ್‌.ಎಂ.ಮಹೇಶ್ವರಯ್ಯ ಮಾತನಾಡಿ, ತಂದೆ, ತಾಯಿ ಎಂದರೆ ವೃದ್ಧಾಶ್ರಮಗಳಿಗೆ ಕಳಿಸುವಂತಹ ಇಂದಿನ ತಾಂತ್ರಿಕ ದಿನಗಳಲ್ಲೂ ತಂದೆಯನ್ನು ನೆನೆದು, ಆತ ಕೈ ಹಿಡಿದು ರಂಗಭೂಮಿ ನಡೆಸಿದ ಎನ್ನುವ ಕಾರಣಕ್ಕೆ ಒಂದು ಪ್ರಶಸ್ತಿ ಸ್ಥಾಪಿಸಿ ಅದನ್ನು ರಂಗದಲ್ಲಿ ಕೆಲಸ ಮಾಡುವವರಿಗೆ ಕೊಟ್ಟು ಖುಷಿ ಪಡುವುದು ಇದೆಯಲ್ಲ ಅದು
ನಿಜಕ್ಕೂ ಶ್ಲಾಘಿಸುವ ಕೆಲಸ ಎಂದು ಹೇಳಿದರು. 

ಕಲಬುರಗಿ ರಂಗಾಯಣ ನಿರ್ದೇಶಕ ಮಹೇಶ ಪಾಟೀಲ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಲೆ ಕೇವಲ ಸಂತೋಷ ಮತ್ತು ಆಸಕ್ತಿಗಾಗಿ ಅಲ್ಲ. ಅದು ಮಾನವೀಯತೆಯ ಪ್ರತೀಕವೂ ಆಗಿದೆ ಎಂದರು. ಪ್ರಶಸ್ತಿ ಪುರಸ್ಕೃತ ಮಂಡ್ಯ ರಮೇಶ್‌ ಕುರಿತಾಗಿ ರಂಗವಿಮರ್ಶಕ ಶಶಿಕಾಂತ ಯಡಹಳ್ಳಿ ವಿಶ್ಲೇಷಿಸಿದರು. ಹಿರಿಯ ಸಾಹಿತಿ ಚನ್ನಣ್ಣ ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು. ಶಾಂತಾ ಕುಲಕರ್ಣಿ ರಂಗ ಗೀತೆಗಳು ಹಾಡಿದರು. ರಂಗಸಂಗಮ ಕಲಾವೇದಿಕೆ ಕಾರ್ಯದರ್ಶಿ ಡಾ| ಸುಜಾತಾ ಜಂಗಮಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ತಮ್ಮ ಅಪ್ಪ ಹಾಗೂ ಅವರ ಹೆಸರಿನಲ್ಲಿ ಶುರು ಮಾಡಿರುವ ಪ್ರಶಸ್ತಿಯ ಹಿಂದಿನ ಸಾರ್ಥಕ ನಡೆ ವಿವರಿಸಿದರು.

ಜಂಗಮಶೆಟ್ಟಿ ರಂಗಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯರಾದ ಹಿರಿಯ ರಂಗಕರ್ಮಿ ಎಲ್‌.ಬಿ.ಕೆ. ಆಲ್ದಾಳ, ಗವೀಶ ಹಿರೇಮಠ, ಎಚ್‌.ಎಸ್‌. ಬಸವಪ್ರಭು, ಶಾಂತಾ ಕುಲಕರ್ಣಿ, ಮಹೇಶ ಪಾಟೀಲ, ಮಹಿಪಾಲರೆಡ್ಡಿ ಮುನ್ನೂರ್‌ ಅವರನ್ನು ಸನ್ಮಾನಿಸಲಾಯಿತು. ಸಂಜೆ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಶಿಕಾಂತ ಯಡಹಳ್ಳಿ ರಚನೆಯ, ವೈ.ಡಿ. ಬದಾಮಿ ನಿರ್ದೇ ಶನದ ಮಂಜುಳಾ ಬದಾಮಿ ಅಭಿನಯದ ಸೀತಾಂತರಾಳ ಏಕವ್ಯಕ್ತಿ ನಾಟಕ ಪ್ರದರ್ಶನ ಜರುಗಿತು.

Advertisement

ಪತ್ರಕರ್ತ ಮಹಿಪಾಲರಡ್ಡಿ ಮುನ್ನೂರ ನಿರೂಪಿಸಿದರು. ಸುಭದ್ರಾದೇವಿ ಜಂಗಮಶೆಟ್ಟಿ, ರಂಗಸಂಗಮ ಕಲಾವೇದಿಕೆ ಅಧ್ಯಕ್ಷೆ ನಂದಾ ಕೊಲ್ಲೂರ, ಎಚ್‌.ಎಸ್‌.ಬಸವಪ್ರಭು, ಎಲ್‌.ಬಿ.ಕೆ.ಆಲ್ದಾಳ, ಗವೀಶ ಹಿರೇಮಠ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next