ಮುಂಬಯಿ: ಕಿರುತೆರೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದ ಫಿಲ್ಮ್ ಸ್ಟುಡಿಯೋ ಬೆಂಕಿಗೆ ಅಹುತಿಯಾಗಿರುವ ಬಗ್ಗೆ ವರದಿಯಾಗಿದೆ.
ಶುಕ್ರವಾರ ಮಧ್ಯರಾತ್ರಿ ಮುಂಬೈನ ಹೊರವಲಯದ ವಸೈನಲ್ಲಿರುವ ಕಮಾನ್ನಲ್ಲಿರುವ ಭಜನ್ಲಾಲ್ ಸ್ಟುಡಿಯೋಸ್ ಬೆಂಕಿಗೆ ಅಹುತಿಯಾಗಿ ಸುಟ್ಟು ಕರಕಲಾಗಿದೆ. ಶನಿವಾರ ( ಮೇ.13 ರಂದು) ಮುಂಜಾನೆ 4 ಗಂಟೆಯ ಸುಮಾರಿಗೆ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ ಎಂದು ವಸಾಯಿ-ವಿರಾರ್ ನಗರ ಮುನ್ಸಿಪಲ್ ಕಾರ್ಪೊರೇಷನ್ನ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
‘ಅಲಿ ಬಾಬಾ: ದಾಸ್ತಾನ್-ಇ-ಕಾಬೂಲ್’ ಧಾರಾವಾಹಿ ಮೂಲಕ ಅಪಾರ ಪ್ರೇಕ್ಷಕರ ಮನಗೆದ್ದಿದ್ದ ನಟಿ ತುನಿಶಾ ಶರ್ಮಾ 2022 ರ ಡಿಸೆಂಬರ್ 24 ರಂದು ಶೂಟಿಂಗ್ ಸೆಟ್ ನ ವಾಶ್ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಕರಣ ಸಂಬಂಧ ಮಾಜಿ ಗೆಳಯ ಹಾಗೂ ಸಹನಟ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಮಾ. 5 ರಂದು ಶೀಜಾನ್ ಅವರಿಗೆ ಕೋರ್ಟ್ ಜಾಮೀನು ನೀಡಿತ್ತು. ಸದ್ಯ ಅವರು ರಿಯಾಲಿಟಿ ಶೋವೊಂದರಲ್ಲಿ ಭಾಗಿಯಾಗಲು ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ.