Advertisement

ಮಾರ್ಚ್‌ 16 ರಿಂದ ಚಿತ್ರ ಪ್ರದರ್ಶನ ಬಂದ್‌ 

07:30 AM Mar 11, 2018 | Team Udayavani |

ಬೆಂಗಳೂರು: ಯುಎಫ್ಓ ಮತ್ತು ಕ್ಯೂಬ್‌ನೊಂದಿಗೆ ಮಾತುಕತೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ಮಾ.16 ರಿಂದ ಯಾವುದೇ ಚಿತ್ರ ಪ್ರದರ್ಶನ ಮಾಡದಿರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮಾನಿಸಿದೆ.

Advertisement

ಕನ್ನಡ ಸೇರಿದಂತೆ ಯಾವುದೇ ಭಾಷೆಯ ಚಿತ್ರಗಳನ್ನೂ ಸಹ ಪ್ರದರ್ಶಿಸಬಾರದು ಎಂದು ಪ್ರದರ್ಶಕ ಹಾಗೂ ವಿತರಕರಿಗೆ ಮಂಡಳಿ ಮನವಿ ಮಾಡಿದೆ. ಈ ತೀರ್ಮಾನಕ್ಕೆ ತಮಿಳು ನಿರ್ಮಾಪಕರ ಸಂಘ ಕೂಡ ಬದ್ಧವಾಗಿದ್ದು, ಹೋರಾಟಕ್ಕೆ ಕೈ ಜೋಡಿಸಿದೆ. ಸಮಸ್ಯೆ ಬಗೆಹರಿಯುವವರೆಗೂ ಯಾವ ಸಿನಿಮಾ ಪ್ರದರ್ಶನವನ್ನೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಶನಿವಾರ ತಮಿಳುನಾಡು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ವಿಶಾಲ್‌ ಹಾಗೂ ಉಪಾಧ್ಯಕ್ಷ ಪ್ರಕಾಶ್‌ ರಾಜ್‌ ಜೊತೆ ಪತ್ರಿಕಾಗೋಷ್ಠಿ  ಯಲ್ಲಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, “ಇನ್ನು ಮುಂದೆ ಭೂಮಿ ನಮ್ಮದೆ ಫ‌ಸಲೂ ನಮ್ಮದೆ ಮತ್ತು ರೈತರು ನಮ್ಮವರೇ. ಯುಎಫ್ಓ ಮತ್ತು ಕ್ಯೂಬ್‌ ಸಂಸ್ಥೆಯವರು ನಮ್ಮ ಮನವಿಗೆ ಸ್ಪಂದಿಸಿಲ್ಲ. ಅವರಿಗೆ ಅಷ್ಟೊಂದು ಹಣ ಸಂದಾಯವಾಗುತ್ತೆ ಎಂದು ಯೋಚಿಸಿಯೂ ಇರಲಿಲ್ಲ. ಈಗ ನಾವು ದೊಡ್ಡ ಪಾಠ ಕಲಿತಿದ್ದೇವೆ. 

ಯುಎಫ್ಓ, ಕ್ಯೂಬ್‌ ಸಂಸ್ಥೆ ಪ್ರತಿ ವರ್ಷ ಸುಮಾರು 500 ಕೋಟಿ ರೂ. ಲಾಭ ಮಾಡುತ್ತಿದೆ. ನಾವು ಕೇಳಿದ್ದು ಶೇ.25 ರಷ್ಟು ಕಡಿಮೆ ಮಾಡಿಕೊಳ್ಳಿ ಎಂದು. ಆದರೆ, ನಮ್ಮ ಮನವಿಗೆ ಕಿವಿಗೊಟ್ಟಿಲ್ಲ. ಆ ಸಂಸ್ಥೆಯಿಂದ ಎಷ್ಟೋ ಚಿತ್ರಮಂದಿರಗಳು ಬಾಗಿಲು ಹಾಕಿ, ಕೆಲವು ಕಲ್ಯಾಣ ಮಂಟಪ, ಗೋದಾಮುಗಳಾಗಿ ಪರಿವರ್ತನೆಯಾಗಿವೆ. ನಾವು ಅವರ ಜೊತೆ ಕಳೆದ ಮೂರು ತಿಂಗಳಿನಿಂದಲೂ ಮಾತುಕತೆ ನಡೆಸುತ್ತಿದ್ದೇವೆ. ಆದರೆ, ಬಗೆಹರಿಯಲಿಲ್ಲ. ಹೀಗಾಗಿ ನಾವೊಂದು ತೀರ್ಮಾನ ಮಾಡಿಕೊಂಡಿದ್ದು, ಮುಂಬರುವ ದಿನಗಳಲ್ಲಿ ನಾವೇ ಸ್ವಂತದ್ದಾಗಿ ಪ್ರೊಜೆಕ್ಟರ್‌ ಮತ್ತು ಸರ್ವರ್‌ ಜೋಡಿಸಿ ನಿರ್ಮಾಪಕರ ಸಹಾಯಕ್ಕೆ ನಿಲ್ಲುವ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದು ಸಾ.ರಾ.ಗೋವಿಂದು ಹೇಳಿದರು.

ನಿರ್ಮಾಪಕರಿಗೆ ತೊಂದರೆ: ಯುಎಫ್ಓ ಮತ್ತು ಕ್ಯೂಬ್‌ನ ವರ್ತನೆಯಿಂದ ನಿರ್ಮಾಪಕರಿಗೆ ತೊಂದರೆ ಆಗಿದೆ. ನಾವು ನಮ್ಮ ನಿಲುವಿನಿಂದ ಹಿಂದಕ್ಕೆ ಸರಿಯದೆ, ಅನಿರ್ದಿಷ್ಟಾವಧಿ ಯಾವುದೇ ಚಿತ್ರ ಬಿಡುಗಡೆ ಮಾಡಬಾರದು ಎಂಬ ತೀರ್ಮಾನ 
ತೆಗೆದುಕೊಂಡಿದ್ದೇವೆ.  ಕೇವಲ ಕನ್ನಡ ಚಿತ್ರ ಮಾತ್ರವಲ್ಲ, ಎಲ್ಲಾ ಭಾಷೆಯ ಚಿತ್ರಗಳೂ ಕೂಡ ಇದೇ ತೀರ್ಮಾನಕ್ಕೆ ಬದ್ಧವಾಗಿವೆ. ಈ ತೀರ್ಮಾನದಿಂದ ನಿರ್ಮಾಪಕರಿಗೆ ಕಷ್ಟ ಆಗುತ್ತೆ. ಆದರೆ, ಎಲ್ಲರೂ ಸಹಿಸಿಕೊಳ್ಳಬೇಕು. ಇದು ಚಿತ್ರರಂಗದ ಒಳಿತಿಗಾಗಿ ಅಷ್ಟೆ ಎಂದರು. 

Advertisement

ಪರ್ಯಾಯ ವ್ಯವಸ್ಥೆಗೆ ಯೋಚನೆ: ಈ ಸಮಸ್ಯೆಯಿಂದ ಹೊರ ಬರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಒಂದು ತೀರ್ಮಾನ ಮಾಡಿಕೊಂಡಿದೆ. ಜಂಟಿಯಾಗಿ ಪ್ರೊಜೆಕ್ಟರ್‌ ಹಾಗು ಸರ್ವರ್‌ ಹಾಕಿಕೊಂಡು ನಾವೇ
ನಿರ್ಮಾಪಕರ ಸಹಾಯಕ್ಕೆ ನಿಲ್ಲುತ್ತೇವೆ. ಇದಕ್ಕೆ ಈಗಾಗಲೇ ರಾಕ್‌ಲೈನ್‌ ವೆಂಕಟೇಶ್‌ ಒಂದು ಹೊಸ ಪ್ಲಾನ್‌ ಕೂಡ ಮಾಡಿದ್ದಾರೆ. ನಾವೇ ಹೂಡಿಕೆ ಮಾಡಲು ತೀರ್ಮಾನಿಸಿರುವ ಒಂದು ಪ್ರೊಜೆಕ್ಟರ್‌ಗೆ ಸುಮಾರು 8 ಲಕ್ಷ ರೂ.ನಷ್ಟು ವೆಚ್ಚ ತಗುಲಲಿದೆ. ರಾಜ್ಯಾದ್ಯಂತ
ಸುಮಾರು 100 ಚಿತ್ರಮಂದಿರಗಳಿಗೆ ಈ ವ್ಯವಸ್ಥೆ ಮಾಡುತ್ತೇವೆ. ಇದಕ್ಕೆ ಸುಮಾರು 8 ಕೋಟಿ ಬೇಕಾಗುತ್ತದೆ ಎಂದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೆಗೆದುಕೊಂಡಿರುವ ಈ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ತಮಿಳುನಾಡು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ವಿಶಾಲ್‌ ಹಾಗೂ ಉಪಾಧ್ಯಕ್ಷ ಪ್ರಕಾಶ್‌ ರಾಜ್‌ ಕೂಡ ಹೇಳಿದ್ದಾರೆ. ಈ ಸಂದರ್ಭದಲ್ಲಿ ರಾಕ್‌ಲೈನ್‌ ವೆಂಕಟೇಶ್‌, ಮುನಿರತ್ನ ಸೇರಿದಂತೆ ಮಂಡಳಿ ಪದಾಧಿಕಾರಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next