Advertisement

ಐಫೋನ್‌ನಲ್ಲಿ ಸಹಿಷ್ಣು

07:30 AM Dec 08, 2017 | Harsha Rao |

ತಂತ್ರಜ್ಞಾನ ಮುಂದುವರೆದಂತೆ ಸಿನಿಮಾ ಮಾಡೋದು ಕೂಡಾ ಸುಲಭವಾಗುತ್ತಿದೆ. ಹಾಗಾಗಿಯೇ ಸಾಕಷ್ಟು ಪ್ರಯೋಗಗಳು ಕೂಡಾ ನಡೆಯುತ್ತಿರುತ್ತದೆ. ಈಗಾಗಲೇ ಅನೇಕರು ಐಫೋನ್‌ನಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಸಹಿಷ್ಣು’. ಹೌದು, “ಸಹಿಷ್ಣು’ ಎಂಬ ಸಿನಿಮಾವೊಂದು ಸಂಪೂರ್ಣವಾಗಿ ಐಫೋನ್‌ನಲ್ಲಿ ಚಿತ್ರೀಕರಣವಾಗಿದೆ. ವಿಶೇಷವೆಂದರೆ ಸಿಂಗಲ್‌ ಶಾಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಎರಡು ಗಂಟೆ 1 ನಿಮಿಷ 18 ಸೆಕೆಂಡಿನ ಈ ಸಿನಿಮಾವನ್ನು ಸಿಂಗಲ್‌ ಶಾಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರವನ್ನು ಸಂಪತ್‌ ಎನ್ನುವವರು ನಿರ್ಮಿಸಿ, ನಿರ್ದೇಶಿಸಿದ್ದಾರೆ. 

Advertisement

ಈಗಾಗಲೇ ಕೆಲವು ಸಿನಿಮಾಗಳಿಗೆ ಸಹಾಯಕರಾಗಿ ದುಡಿದ ಅನುಭವವಿರುವ ಸಂಪತ್‌ ಅವರಿಗೆ ಏನಾದರೊಂದು ಹೊಸ ಪ್ರಯೋಗ ಮಾಡಬೇಕೆಂದೆನಿಸಿದಾಗ ಈ ಆಲೋಚನೆ ಬಂತಂತೆ. ಅದಕ್ಕಾಗಿ ಐಫೋನ್‌ ಹಾಗೂ ಅದಕ್ಕೆ ತಾಂತ್ರಿಕವಾಗಿ ಬೇಕಾದ ವಸ್ತುಗಳನ್ನು ಖರೀದಿಸಿ, ಮೊದಲು ಇಡೀ ಬೆಂಗಳೂರು ಸುತ್ತಾಡಿ ಟೆಸ್ಟ್‌ ಶೂಟ್‌ ಮಾಡಿದರಂತೆ. ಎಲ್ಲವೂ ಪಕ್ಕಾ ಆದ ಮೇಲೆ ಮಡಿಕೇರಿಯ ಸುತ್ತಮುತ್ತ ಸಿಂಗಲ್‌ ಟೇಕ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಇದೊಂದು ದಾಖಲೆಯಾಗಿದ್ದು, ಅಗತ್ಯ ಪತ್ರಗಳೊಂದಿಗೆ ಗಿನ್ನೆಸ್‌ಗೆ ಕಳುಸಿದ್ದಾರಂತೆ.

ಈಗಾಗಲೇ ಅನೇಕ ಸಿನಿಮಾಗಳು ಸಿಂಗಲ್‌ ಟೇಕ್‌ನಲ್ಲಿ ಶೂಟ್‌ ಆದರೂ ಆ ನಂತರ ಅವುಗಳನ್ನು ಎಡಿಟ್‌ ಮಾಡಲಾಗಿದೆ. ಆದರೆ, “ಸಹಿಷ್ಣು’ ಮಾತ್ರ ಎಡಿಟ್‌ ಮಾಡದ ಸಿಂಗಲ್‌ ಟೇಕ್‌ ಸಿನಿಮಾವಾದ್ದರಿಂದ ವಿಶ್ವದಲ್ಲೇ ಇಂತಹ ಪ್ರಯತ್ನ ಮೊದಲು ಎನ್ನುವುದು ಸಂಪತ್‌ ಅವರು ಮಾತು. ವಿಚಾರವಾದಿಯೊಬ್ಬನ ಹತ್ಯೆಗೆ ಸುಪಾರಿ ನೀಡುವ ಕಾಣದ ವ್ಯಕ್ತಿಗಳು ಒಂದು ಕಡೆಯಾದರೆ, ವಿಚಾರವಾದಿಯನ್ನು ಕಿಡ್ನಾಪ್‌ ಮಾಡುವ ಮಂದಿ, ಆ ವಿಚಾರವಾದಿಯ ನಿರ್ಲಿಪ್ತತೆ ಹಾಗೂ ನಡವಳಿಕೆಯಿಂದ ಬದಲಾಗುತ್ತಾರಾ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ವಿಚಾರಧಾರೆ ಏನೇ ಇರಬಹುದು. ಆದರೆ, ಮನುಷ್ಯನನ್ನು ಮನುಷ್ಯ ಸಾಯಿಸೋದು ತಪ್ಪು ಎಂಬ ಸಂದೇಶವನ್ನು ಕೂಡಾ ಇಲ್ಲಿ ನೀಡಲಾಗಿದೆಯಂತೆ.

“ಮುಂದೆ ವಿಭಿನ್ನವಾದ ಸಿನಿಮಾಗಳನ್ನು ಮಾಡಬೇಕೆಂದಿದ್ದೇನೆ. ಅದಕ್ಕಿಂತ ಮೊದಲು ನನಗೊಂದು ಪ್ರೊಫೈಲ್‌ ಬೇಕು. ಆ ಉದ್ದೇಶದ ಜೊತೆಗೆ ಪ್ರಯೋಗಾತ್ಮಕ ಸಿನಿಮಾ ಮಾಡಬೇಕೆಂಬ ಕಾರಣದಿಂದ ಈ ಸಿನಿಮಾ ಮಾಡಿದ್ದೇನೆ’ ಎನ್ನುವುದು ಸಂಪತ್‌ ಮಾತು. ಚಿತ್ರದಲ್ಲಿ ಹಿರಿಯ ನಟ ವಿಶ್ವನಾಥ್‌ ಹಾಗೂ ಅಶೋಕ್‌ ಎನ್ನುವವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next