ಎರಡು ಹಾಡುಗಳನ್ನು ಫಾರಿನ್‌ನಲ್ಲಿಪ್ಲ್ಯಾನ್ ಮಾಡಿದ್ದೇವೆ… | ಚಿತ್ರದ ಮುಕ್ಕಾಲು ಭಾಗ ವಿದೇಶದಲ್ಲೇ ನಡೆಯಲಿದೆ.. | ವಿದೇಶದಲ್ಲಿ ಯಾರೂ ಮಾಡದ ಲೊಕೇಶನ್‌ನಲ್ಲಿ ಚಿತ್ರೀಕರಿಸಲು ನಮಗೆ ಅವಕಾಶ ಸಿಕ್ಕಿದೆ….
-ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಈ ತರಹದ ಮಾತುಗಳು ತುಂಬಾನೇ ಕೇಳಿಬರುತ್ತಿದ್ದವು.ಈ ತರಹ ಹೇಳಿಬಿಟ್ಟರೆ ತಮ್ಮ ಸಿನಿಮಾದ ಮೈಲೇಜ್ ಹೆಚ್ಚುತ್ತದೆ ಎಂದು ನಂಬಿದವರ ಸಂಖ್ಯೆ ಜಾಸ್ತಿ ಇದೆ. ನಿರ್ಮಾಪಕರಿಗೆ ಇಷ್ಟವಿದೆಯೋ ಇಲ್ಲವೋ, ಎರಡು ಹಾಡುಗಳಿಗೆ ಫಾರಿನ್ ಫ್ಲೈಟ್ ಹತ್ತುವ ನಿರ್ದೇಶಕರು, ನಟರು ಕೂಡಾ ಹೆಚ್ಚೇ ಇದ್ದಾರೆ. ಆದರೆ ಕೋವಿಡ್ 19 ಎಂಬ ಮಹಾಮಾರಿ ಸಿನಿಮಾ ಮಂದಿಯನ್ನು ವಿದೇಶದತ್ತ ತಲೆ ಹಾಕಿಯೂ ಮಲಗದಂತೆ ಮಾಡಿದೆ. ವಿದೇಶಿ ಲೊಕೇಶನ್‌ಗಳ ಸಹವಾಸವೂ ಸಾಕು, ರೋಗವೂ ಸಾಕು ಎಂಬಂತಾಗಿದೆ.
ಹಾಗಾಗಿ ಕೋವಿಡ್ 19 ಸಂಪೂರ್ಣ ನಾಶ ಆಗುವವರೆಗೆ ಸಿನಿಮಾ ಮಂದಿ ಕೂಡಾ ವಿದೇಶಿ ಕನಸು ಕಾಣುವಂತಿಲ್ಲ. ಅಷ್ಟಕ್ಕೂ ಒಂದು ಸಿನಿಮಾಕ್ಕೆ ವಿದೇಶಿ ಲೊಕೇಶನ್ ಆಗತ್ಯವಿದೆಯೇ ಎಂದರೆ, ಖಂಡಿತಾ ಇಲ್ಲ. ಅದು ಆಯಾ ತಂಡದಸಾಮರ್ಥ್ಯಕ್ಕೆ ಬಿಟ್ಟಿದ್ದು. ಸಿನಿಮಾ ಕೇಳ್ಳೋದು ಒಳ್ಳೆಯ ಕಥೆ ಹಾಗೂ ಆಚ್ಚುಕಟ್ಟಾದ ನಿರೂಪಣೆಯನ್ನಷ್ಟೇ. ಇವೆರಡು ಚೆನ್ನಾಗಿದ್ದರೆ ಇಡೀ ಸಿನಿಮಾವನ್ನು ಒಂದೇ ಲೊಕೇಶನ್‌ನಲ್ಲಿ ಕಟ್ಟಿಕೊಟ್ಟರೂ ಜನ ನೋಡುತ್ತಾರೆ. ಅದೇ ನಿಮ್ಮ ಸಿನಿಮಾದ ಕಥೆಯಲ್ಲಿ ತಾಕತ್ತಿಲ್ಲದೇ ಇದ್ದರೆ ನೀವದನ್ನು ಎಷ್ಟೇ ಶ್ರೀಮಂತಗೊಳಿಸಿದರೂ ಅದರಿಂದ ಪ್ರಯೋಜನವಿಲ್ಲ. ಅದು ಈಗಾಗಲೇ ಸಾಬೀತಾಗಿದೆ ಕೂಡಾ. ಇದು ಗೊತ್ತಿದ್ದರೂ ಸಿನಿಮಾ ಮಂದಿಗೆ ಫಾರಿನ್ ಕ್ರೇಜ್ ಜಾಸ್ತಿ ಇದೆ.
ಹಾಗಾದರೆ ನಮ್ಮಲ್ಲಿಸುಂದರ ಲೊಕೇಶನ್‌ಗಳು ಇಲ್ಲವೇ ಎಂದರೆ, ಖಂಡಿತಾ ಇದೆ. ಆದರೆ ಅದನ್ನು ಬಳಸಿಕೊಳ್ಳುವ ಮನಸ್ಸು ಮತ್ತು ಸಾಮರ್ಥ್ಯ ಚಿತ್ರತಂಡಕ್ಕೆ ಇರಬೇಕು. ಭಾರತದಲ್ಲಿ ಅದ್ಭುತವಾದ ತಾಣಗಳಿವೆ. ಹುಡುಕುತ್ತಾ ಹೋದರೆ ಬೇರೆ ಯಾವ ಸಿನಿಮಾಗಳಲ್ಲೂ ಕಂಡಿರದಂತಹ ಲೊಕೇಶನ್‌ಗಳು ಸಿಗುತ್ತವೆ. ಆದರೆ ಆದನ್ನು ಹುಡುಕುವ ಮನಸ್ಸು ಹಾಗೂ ತಾಳ್ಮೆ ಬೇಕು. ಡಾ. ರಾಜ್‌ಕುಮಾರ್ ಅವರ ಚಿತ್ರಗಳಲ್ಲಿ ಚಿಕ್ಕಮಗಳೂರು, ಕುದುರೆಮುಖ … ಇಲ್ಲಿನ ಪ್ರಕೃತಿಯ ಸೊಬಗು ಬಳಕೆಯಾಗುತ್ತಿದ್ದವು.
ಆ ಸಿನಿಮಾಗಳೆಲ್ಲವೂ ಸೂಪರ್ ಹಿಟ್. ಆಲ್ಲಿಗೆ ಒಂದು ಸ್ಪಷ್ಟ, ಜನ ಲೊಕೇಶನ್ ನೋಡಿಕೊಂಡು ಸಿನಿಮಾಕ್ಕೆ ಬರೋದಿಲ್ಲ. ಹೀಗಿದ್ದೂ ನಮ್ಮಲ್ಲಿ ಫಾರಿನ್ ಲೊಕೇಶನ್ ಕ್ರೇಜ್ ಜೋರಿದೆ. ಅದರಲ್ಲೂ ಸ್ಟಾರ್ ಸಿನಿಮಾ ಮಾಡುವವರು ಕಥೆ ಬರೆಯುವ ಮೊದಲೇ ಹಾಡಿಗೆ ಫಾರಿನ್ ಟ್ರಿಪ್ ಎಂದು ಫಿಕ್ಸ್ ಆಗಿರುತ್ತಾರೆ. ಫಾರಿನ್ ಶೂಟಿಂಗ್ ಸುಲಭವಲ್ಲ. ಅಲ್ಲಿನ ಆನುಮತಿ, ಕೋ-ಅರ್ಡಿನೇಟರ್ ಸಮಸ್ಯೆ, ಇಂತಿಷ್ಟೇ ಜನ ಹೋಗಬೇಕು, ಅಲ್ಲಿನ ಮತ್ತೆ ಇನ್ನೇನೋ ಕಿರಿಕ್, ಸ್ವಲ್ಪ ಯಾಮಾರಿದರೂ ಲಾಕ್… ಹೀಗೆ ಸಾಕಷ್ಟು ಸಮಸ್ಯೆಗಳಿರುತ್ತವೆ. ಇವೆಲ್ಲವನ್ನು ದಾಟಿಕೊಂಡು ಸಪ್ತ ಸಾಗರ ದಾಟುವ ಪ್ರಯತ್ನ ಮಾಡುತ್ತಲೇ ಇದ್ದರು ಸಿನಿಮಾ ಮಂದಿ.
ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ. ಕೋವಿಡ್ ದಿಂದಾಗಿ ಫಾರಿನ್ ಟ್ರಿಪ್‌ನ ಲೆಕ್ಕಾಚಾರ ದಲ್ಲಿ ಇದ್ದವರೆಲ್ಲ ಈಗ ಕರ್ನಾಟಕ ದಲ್ಲೇ ಹಾಡುಗಳ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ. ಇನ್ನೊಂದಿಷ್ಟು ಮಂದಿ ಸೆಟ್ ಮೊರೆ ಹೋಗಿದ್ದಾರೆ – ನೂರಾರು ಊರು ಸುತ್ತಿ ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲೂ.. ಮುಂದಿನ ದಿನಗಳಲ್ಲಿ ನಮ್ಮ ದೇಶದ ಅದರಲ್ಲೂ ನಮ್ಮ ರಾಜ್ಯದ ಲೊಕೇಶನ್ ಗಳಿಗೆ ಬೇಡಿಕೆ ಬರುವುದರಲ್ಲಿ ಅನುಮಾನವಿಲ್ಲ.
ಈಗಾಗಲೇ ಒಂದಷ್ಟು ಸಿನಿಮಾಗಳು ತಮ್ಮ ಸಿನಿಮಾ ಫಾರಿನ್ ಟ್ರಿಪ್ ಕೈ ಬಿಟ್ಟು ಇಲ್ಲೇ ಚಿತ್ರೀಕರಿಸಲು ಮುಂದಾಗಿವೆ. ಕೊರೊನಾ ಬಿಗಿಹಿಡಿತ ಸಡಿಲವಾಗುತ್ತಿದ್ದಂತೆ ಮತ್ತೆ ಸಿನಿಮಾ ಕೆಲಸಗಳು ಆರಂಭವಾಗಲಿವೆ. ಮುಂದಿನ ದಿನಗಳಲ್ಲಿ ಸಿನಿಮಾ ಮಂದಿ ಕೂಡಾ ನಮ್ಮ ಸುತ್ತಮುತ್ತಲಿನ ಲೊಕೇಶನ್ ಗಳನ್ನು ಹೆಚ್ಚು ಬಳಸುವತ್ತ ಮನಸ್ಸು ಮಾಡಬೇಕು ಒಂದಂತೂ ಸ್ಪಷ್ಟ, ಮುಂದಿನ ದಿನಗಳಲ್ಲಿ ನಮ್ಮದೇಶದ, ರಾಜ್ಯದ ಲೊಕೇಶನ್‌ಗಳಿಗೆ, ಸ್ಟುಡಿಯೋಗಳಿಗೆ ಬೇಡಿಕೆ ಬರಲಿದೆ.
-ರವಿಪ್ರಕಾಶ್ ರೈ