Advertisement

ಸಾಮಾಜಿಕ ವಿಡಂಬನೆಯಲ್ಲಿ ತಿಳಿಹಾಸ್ಯ!

10:12 AM Feb 10, 2020 | Suhan S |

ಜಗತ್ತು ಮತ್ತು ಜನಗಳನ್ನು ದೇವರು ರಕ್ಷಿಸಿ, ಪೋಷಿಸುತ್ತಾನೆ ಎನ್ನುವ ನಂಬಿಕೆ ಬಹುತೇಕ (ಆಸ್ತಿಕ)ರದ್ದು. ಅನೇಕರು ಈ ವಿಷಯದಲ್ಲಿ ಅವರವರ ನೆಚ್ಚಿನ ದೇವರ ಮೊರೆ ಹೋಗುವುದನ್ನು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಅದರಲ್ಲೂ ಜನಗಳ ಸಂಕಷ್ಟದ ವಿಷಯದಲ್ಲಿ ವಿಘ್ನ ವಿನಾಶಕ ಗಣೇಶನಿಗೆ ಮೊದಲ ಆದ್ಯತೆ. ಆದರೆ ಇದೇ ಗಣೇಶನಿಗೇ ಸಂಕಷ್ಟ ಬಂದರೆ ಅವನು ಯಾರ ಮೊರೆ ಹೋಗಬೇಕು? ಇದು “ಮತ್ತೆ ಉದ್ಭವ’ ಚಿತ್ರದ ಕಥಾಹಂದರ.

Advertisement

ಸುಮಾರು 30 ವರ್ಷಗಳ ಹಿಂದೆ ತೆರೆಗೆ ಬಂದಿದ್ದ “ಉದ್ಭವ’ ಚಿತ್ರ ಅನೇಕರಿಗೆ ನೆನಪಿರಬಹುದು. ಅದರಲ್ಲಿ ಗಣೇಶ ಉದ್ಭವಿಸಿ ನೋಡುಗರಿಗೆ ತೆರೆಮೇಲೆ ಬೆರಗು ಮೂಡಿಸಲು ಯಶಸ್ವಿಯಾಗಿದ್ದ. 30 ವರ್ಷಗಳ ನಂತರ ಅದೇ ಉದ್ಭವ ಗಣೇಶ ಮತ್ತೆ ಏನೇನು ಬೆರೆಗು ಮೂಡಿಸುತ್ತಾನೆ ಅನ್ನೊದು “ಮತ್ತೆ ಉದ್ಭವ’ದಲ್ಲಿ ಮುಂದುವರೆದಿದೆ. “ಉದ್ಭವ’ ಚಿತ್ರವನ್ನು ತೆರೆಗೆ ತಂದ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರೇ ಮತ್ತೆ ಉದ್ಭವ’ವನ್ನು ತೆರೆಗೆ ತಂದಿರುವುದರಿಂದ, “ಮತ್ತೆ ಉದ್ಭವ’, “ಉದ್ಭವ’ದ ಮುಂದುವರೆದ ಭಾಗ ಎನ್ನಲು ಅಡ್ಡಿಯಿಲ್ಲ. ಇನ್ನು ತಮ್ಮ ಹಿಂದಿನ ಉದ್ಭವ’ ಚಿತ್ರದಲ್ಲಿ ನಿರ್ದೇಶಕ ಕೋಡ್ಲು ರಾಮಕೃಷ್ಣ ಪ್ರಯೋಗಿಸಿದ್ದ ಸಾಮಾಜಿಕ ವಿಡಂಬನೆ, ಧರ್ಮ-ನಂಬಿಕೆಗಳ ವ್ಯಾಖ್ಯಾನ, ಮಠ-ಮಂದಿರಗಳ ಅಧಿಕಾರ ದುರುಪಯೋಗ, ರಾಜಕಾರಣ, ಹಿತಾಸಕ್ತಿಗಳ ಹೋರಾಟ ಮತ್ತೆ ಉದ್ಭದ’ದಲ್ಲಿ ಮುಂದುವರೆದಿದೆ. ಇಡೀ ಚಿತ್ರ ಜನಸಾಮಾನ್ಯರ ಧಾರ್ಮಿಕ ನಂಬಿಕೆ-ಆಚರಣೆಯ ಬಗ್ಗೆ ಗಂಭೀರ ವಿಷಯವನ್ನು ಚರ್ಚಿಸುತ್ತಲೇ, ನೋಡುಗರನ್ನು ನಗುವಿನೊಂದಿಗೆ ಕರೆದುಕೊಂಡು ಹೋಗುತ್ತದೆ. ಕೋಡ್ಲು ಅವರು ಕಥೆ ಕಟ್ಟಿರುವ ರೀತಿ. ಹಳೆಯ ಪಾತ್ರಗಳು ಮತ್ತು ಆಶಯದ ಜೊತೆಗೆ, ಹೊಸದನ್ನೂ ಅವರು ಚೆನ್ನಾಗಿ ಬ್ಲೆಂಡ್‌ ಮಾಡಿದ್ದಾರೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಕರ್ನಾಟಕದಲ್ಲಾದ ಕೆಲವು ನೈಜ ಘಟನೆಗಳನ್ನು ಹೆಕ್ಕಿ ತೆಗೆದಿದ್ದಾರೆ. ಆ ಘಟನೆಗಳನ್ನು ಬೇರೆ ಬೇರೆ ಪಾತ್ರಗಳ ಮೂಲಕ ತೋರಿಸುತ್ತಾ ಹೋಗಿದ್ದಾರೆ. ಯಾವುದೇ ವ್ಯಕ್ತಿಯನ್ನು ಅವರು ಪಿನ್‌ ಪಾಯಿಂಟ್‌ ಮಾಡಿ ತೋರಿಸದಿದ್ದರೂ, ಪ್ರೇಕ್ಷಕರಿಗೆ ಎಲ್ಲವೂ ಸ್ಪಷ್ಟವಾಗುತ್ತಾ ಹೋಗುತ್ತದೆ. ಆ ಮಟ್ಟಿಗೆ ಬಹಳ ಬುದ್ಧಿವಂತಿಕೆಯಿಂದ ಕಥೆ ಹಣೆದಿದ್ದಾರೆ. ಇನ್ನು ಅದನ್ನು ತೆರೆಯ ಮೇಲೆ ಅಷ್ಟೇ ನೀಟ್‌ ಆಗಿ ತೋರಿಸಿದ್ದಾರೆ. ಕೆಲವು ದೃಶ್ಯಗಳು ಅನಗತ್ಯವೆನಿಸಿದರೂ, ಒಟ್ಟಾರೆ ಚಿತ್ರ ವೇಗವಾಗಿ ನೋಡಿಸಿಕೊಂಡು ಹೋಗುತ್ತದೆ. ಚಿತ್ರದ ಗುಣಮಟ್ಟದ ಬಗ್ಗೆ ನಿರ್ದೇಶಕರು ಕಾಳಜಿ ವಹಿಸಿದ್ದರೆ ಸಿನಿಮಾ ಮತ್ತಷ್ಟು ಚೆನ್ನಾಗಿ ಮೂಡಿಬರುತ್ತಿತ್ತು. ಕೆಲವು ದೃಶ್ಯಗಳು ಅನಗತ್ಯವೆನಿಸಿದರೂ, ಒಟ್ಟಾರೆ ಚಿತ್ರ ವೇಗವಾಗಿ ನೋಡಿಸಿಕೊಂಡು ಹೋಗುತ್ತದೆ.

ಚಿತ್ರದ ಕಥಾಹಂದರ, ನಿರೂಪಣೆ ಚೆನ್ನಾಗಿದ್ದರೂ, ಪ್ರಬುದ್ಧ ಪ್ರೇಕ್ಷಕರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಿರ್ದೇಶಕರು ಚಿತ್ರವನ್ನು ತೆರೆಗೆ ತಂದಂತಿದೆ. ಇನ್ನು ಇಡೀ ಚಿತ್ರದಲ್ಲಿ ತೆರೆಮೇಲೆ ಗಮನ ಸೆಳೆಯುವುದು ರಂಗಾಯಣ ರಘು, ನಾಯಕ ಪ್ರಮೋದ ಅಭಿನಯ. ಇಬ್ಬರೂ ತಮ್ಮ ಪಾತ್ರವನ್ನು ಪ್ರೇಕ್ಷಕರಿಗೆ ಎಲ್ಲೂ ಬೋರ್‌ ಹೊಡೆಸದಂತೆ ಕರೆದುಕೊಂಡು ಹೋಗುತ್ತಾರೆ. ಉಳಿದಂತೆ ಮಿಲನ ನಾಗರಾಜ, ಅವಿನಾಶ, ಮೋಹನ ಮೊದಲಾದ ಚಿತ್ರದ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಕಲಾವಿದರ ಬೃಹತ್‌ ದಂಡೇ ಇರುವುದರಿಂದ, ಚಿತ್ರದ ಬಹುತೇಕ ಪಾತ್ರಗಳಲ್ಲಿ ಪರಿಚಿತ ಕಲಾವಿದರೆ ಬಂದು ಹೋಗುತ್ತಾರೆ. ಚಿತ್ರದ ಛಾಯಾಗ್ರಹಣ ಮತ್ತು ಸಂಕಲನದ ಕಡೆಗೆ ನಿರ್ದೇಶಕರು ಹೆಚ್ಚಿನ ಗಮನ ಕೊಡಬಹುದಿತ್ತು. ಒಟ್ಟಿನಲ್ಲಿ ಕೆಲವೊಂದು ತರ್ಕ ಹಾಗೂ ತಪ್ಪುಗಳನ್ನು ಬದಿಗಿಟ್ಟು ನೋಡಿದರೆ ಮತ್ತೆ ಉದ್ಭವ’ ನೋಡುಗರಿಗೆ ಮಿನಿಮಮ್‌ ಮನರಂಜನೆ ನೀಡುವುದರಲ್ಲಿ ಎರಡು ಮಾತಿಲ್ಲ. „

Advertisement

 

-ಜಿ.ಎಸ್‌. ಕಾರ್ತಿಕ್‌ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next