ಆದಿ ಫೋನ್ ಸ್ವೀಚಾಫ್ ಆಗಿರುತ್ತದೆ. ಗೆಳೆಯರಿಗೆ ಟೆನÒನ್. ಮತ್ತೆ ಗೊತ್ತಾಗುತ್ತದೆ, ಆದಿ ನಿಧಿಮಾನ ಹುಡುಕಿಕೊಂಡು ಹೋಗಿದ್ದಾನೆ ಎಂದು. ಹೀಗೆ ಹುಡುಕಿಕೊಂಡು ಹೋದ ಆದಿಗೆ ಕೊನೆಗೂ ನಿಧಿ ಸಿಗುತ್ತಾಳೆ! ಅಲ್ಲಾ, ಸಿನಿಮಾದ ಮೊದಲ ಭಾಗದಲ್ಲಿ ಸತ್ತೋಗಿರೋ ನಿಧಿಮಾ ಹೇಗೆ ಸಿಗೋಕೆ ಸಾಧ್ಯ… ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದೇ ಈ ಸಿನಿಮಾದ ಬ್ಯೂಟಿ.
“ಲವ್ ಮಾಕ್ಟೇಲ್’ ಸಿನಿಮಾದ ಮುಂದುವರೆದ ಭಾಗವಾಗಿರುವ “ಲವ್ ಮಾಕ್ಟೇಲ್ -2′ ಒಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್. ಸ್ನೇಹಿತರ ಕಿತ್ತಾಟದಿಂದ ಆರಂಭವಾಗಿ, ಹುಡುಕಾಟ, ತಿರುಗಾಟ, ಕೊನೆಗೊಂದು ನಿಲುಗಡೆ … ಹೀಗೆ ಸಾಗುವ ಸಿನಿಮಾಕ್ಕೆ ನಗಿಸುವ, ಅಳಿಸುವ, ಅಲ್ಲಲ್ಲಿ ಕಣ್ಣಂಚು ಒದ್ದೆಯಾಗಿಸುವ ಗುಣವಿದೆ. ಅದೇ ಕಾರಣದಿಂದ ಸಿನಿಮಾ ಆರಂಭದಿಂದ ಕೊನೆಯವರೆಗೂ ನಿಮ್ಮನ್ನು ನೋಡಿಸಿಕೊಂಡು ಹೋಗುತ್ತದೆ.
ಚಿತ್ರದ ಮೊದಲ ಭಾಗಕ್ಕೂ ಇದಕ್ಕೂ ಹೆಚ್ಚಿನ ಸಂಬಂಧವಿಲ್ಲ. ಅಲ್ಲಿನ ಒಂದಷ್ಟು ದೃಶ್ಯಗಳನ್ನು ಇಲ್ಲಿಗೆ ಕನೆಕ್ಟ್ ಮಾಡಿಕೊಂಡಿದ್ದಾರೆ. ಉಳಿದಂತೆ ಇದು ಫ್ರೆಶ್ ಸಬ್ಜೆಕ್ಟ್. ಇಲ್ಲಿ ಕಥೆಗಿಂತ ಒಂದಷ್ಟು ಸನ್ನಿವೇಶಗಳ ಮೂಲಕ ಸಿನಿಮಾವನ್ನು ಮುಂದೆ ತಗೊಂಡು ಹೋಗಿರೋದು ನಿರ್ದೇಶಕ ಕೃಷ್ಣ ಅವರ ಜಾಣ್ಮೆ. ಇನ್ನೇನು ದೃಶ್ಯಗಳು ಸ್ವಲ್ಪ ಅತಿಯಾಯಿತು ಎನಿಸುವ ಹೊತ್ತಿಗೆ ಒಂದಷ್ಟು ಫನ್ ಮಾಡಿ, ಪ್ರೇಕ್ಷಕರನ್ನು ಮತ್ತೆ ರಿಲ್ಯಾಕ್ಸ್ ಮೂಡ್‌ಗೆ ಕೊಂಡೊಯ್ಯುತ್ತಾರೆ. ಇಡೀ ಸಿನಿಮಾ ನಿಂತಿರೋದು ದ್ವಿತೀಯಾರ್ಧದಲ್ಲಿ. ಇಲ್ಲಿಂದ ಒಂದಷ್ಟು ಕುತೂಹಲ, ನಗು, ಸುಂದರವಾದ ಲೊಕೇಶನ್… ಎಲ್ಲವೂ ತೆರೆದುಕೊಂಡು ಹೋಗುತ್ತದೆ. ಜೊತೆಗೆ ಸೆಕೆಂಡ್ ಹಾಫ್ನ ಆರಂಭದಲ್ಲೇ ಪ್ರೇಕ್ಷಕರಲ್ಲಿ ಮೂಡುವ ಸಂದೇಹವನ್ನು ಬಗೆಹರಿಸಿಯೇ ಚಿತ್ರ ಮುಂದೆ ಹೋಗುವುದರಿಂದ ಪ್ರೇಕ್ಷಕ ನಿರಾಳ.
ಚಿತ್ರದ ಹೈಲೈಟ್‌ಗಳಲ್ಲಿ ಸಂಭಾಷಣೆ ಪ್ರಮುಖ ಪಾತ್ರ ವಹಿಸುತ್ತದೆ. ಸಣ್ಣ ಸಣ್ಣ ಸನ್ನಿವೇಶಗಳಲ್ಲೂ ಡೈಲಾಗ್ ಮೂಲಕ ನಗೆಬುಗ್ಗೆ ಎಬ್ಬಿಸಿದ್ದಾರೆ. ಅಲ್ಲದೇ, ಎದೆಗೆ ನಾಟುವಂತಹ ಡೈಲಾಗ್‌ಗಳು ಕೂಡಾ ಈ ಸಿನಿಮಾದ ಹೈಲೈಟ್. ಇನ್ನು, ಚಿತ್ರದಲ್ಲಿ ಹೆಚ್ಚು ಪಾತ್ರಗಳಿಲ್ಲ. ಒಂದಷ್ಟು ಪಾತ್ರಗಳು ಹೀಗೆ ಬಂದು ಹಾಗೆ ಹೋಗುತ್ತವೆ. ಸಿನಿಮಾದ ಕಥೆಗೆ ಎಷ್ಟು ಬೇಕೋ, ಅಷ್ಟನ್ನೇ ಹೈಲೈಟ್ ಮಾಡಿ, ಮುಂದೆ ಸಾಗಿಸಿರೋದು ನಿರ್ದೇಶಕರು ಕಥೆ ಹಾಗೂ “ಬಜೆಟ್’ನಲ್ಲಿ ತೋರಿದ ಜಾಣ್ಮೆಗೆ ಸಾಕ್ಷಿ.
ಅಂದಹಾಗೆ, ಚಿತ್ರದಲ್ಲಿ ಮಿಲನಾ ಅವರಿಗೆ ಪ್ರಮುಖ ಪಾತ್ರವಿದೆ. ಮೊದಲ ಭಾಗದಲ್ಲಿ ಸತ್ತೋಗಿರೋ ನಿಧಿಮಾ, ಎರಡನೇ ಭಾಗದಲ್ಲೂ ಮಿಂಚಿದ್ದಾರೆ. ಅದು ಹೇಗೆ ಕುತೂಹಲಕ್ಕೆ ಚಿತ್ರಮಂದಿರದಲ್ಲಿ ಉತ್ತರ ಕಂಡುಕೊಳ್ಳಿ.
ಚಿತ್ರದಲ್ಲಿ ನಾಯಕ ಕೃಷ್ಣ ಈ ಬಾರಿಯೂ ಮಿಂಚಿದ್ದಾರೆ. ಪತ್ನಿಯನ್ನು ಕಳೆದುಕೊಂಡ ಪತಿಯಾಗಿ, ಹುಡುಕಾಟದ ಹುಡುಗನಾಗಿ, ಭಾವನೆಗಳ ಭಾರ ಹೊತ್ತ ಪ್ರೇಮಿಯಾಗಿ ಇಷ್ಟವಾಗುತ್ತಾರೆ.
ಇನ್ನು, ನಾಯಕಿ ರಚೆಲ್ ಕನ್ನಡಕ್ಕೆ ಸಿಕ್ಕ ಅಚ್ಚರಿಯ ನಾಯಕಿ. ಮೊದಲ ಚಿತ್ರದಲ್ಲೇ ಮನ ಸೆಳೆಯುವ ಮೂಲಕ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಅಮೃತಾ, ಮಿಲನಾ ಸೇರಿದಂತೆ ಇತರರು ನಟಿಸಿದ್ದಾರೆ. ಶ್ರೀ ಕ್ರೇಜಿಮೈಂಡ್ಸ್ ಛಾಯಾಗ್ರಹಣದಲ್ಲಿ “ಲವ್ ಮಾಕ್ಟೇಲ್-2′ ಸುಂದರ. ಪ್ರಕೃತಿ ಸೌಂದರ್ಯವನ್ನು ಶ್ರೀ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ನಕುಲ್ ಹಾಡುಗಳು ಗುನುಗುವಂತಿದೆ.
ರವಿಪ್ರಕಾಶ್ ರೈ