ನಿರ್ಮಾಪಕ ರಾಮು ಅವರು ಆ್ಯಕ್ಷನ್ ಸಿನಿಮಾ ಮಾಡುತ್ತಾರೆಂದರೆ ಅಲ್ಲಿನ ಅದ್ಧೂರಿತನವನ್ನು ಊಹಿಸಿಕೊಳ್ಳಬಹುದು. ನಿರ್ದೇಶಕ ಕೇಳಿದ್ದಕ್ಕಿಂತ ಹೆಚ್ಚಿನದ್ದನ್ನು ನೀಡಿ, ಸಿನಿಮಾಕ್ಕೆ ಕೊರತೆಯಾಗದಂತೆ ನೋಡಿಕೊಳ್ಳುವ ಗುಣ ರಾಮು ಅವರದ್ದಾಗಿತ್ತು. ಅದು ಈ ವಾರ ತೆರೆಕಂಡಿರುವ ರಾಮು ನಿರ್ಮಾಣದ “ಅರ್ಜುನ್ ಗೌಡ’ ಚಿತ್ರದಲ್ಲಿ ಎದ್ದು ಕಾಣುತ್ತದೆ.
ಒಂದು ಮಾಸ್ ಎಂಟರ್‌ಟೈನರ್ ಸಿನಿಮಾವನ್ನು ಯಾವ ರೀತಿ ಕಟ್ಟಿಕೊಡಬೇಕು, ಅದರ ಪರಿಸರ ಹೇಗಿರಬೇಕು, ಫೈಟ್ ಎಷ್ಟು ಗ್ರ್ಯಾಂಡ್ ಆಗಿರಬೇಕು ಎಂಬುದನ್ನು ರಾಮು ಹಾಗೂ ನಿರ್ದೇಶಕ ಶಂಕರ್ ಚೆನ್ನಾಗಿ ಅರ್ಥಮಾಡಿಕೊಂಡಿರೋದು ತೆರೆಮೇಲೆ ಗೊತ್ತಾಗುತ್ತದೆ. ಆ ಮಟ್ಟಿಗೆ “ಅರ್ಜುನ್ ಗೌಡ’ ಒಂದು ಮಾಸ್ ಕಂ ಫ್ಯಾಮಿಲಿ ಡ್ರಾಮಾ ಸಿನಿಮಾವಾಗಿ ಇಷ್ಟವಾಗುತ್ತದೆ.
ನಿರ್ದೇಶಕ ಶಂಕರ್ ಪ್ರೀತಿಯ ಎಳೆಯೊಂದನ್ನು ಇಟ್ಟುಕೊಂಡು ಉಳಿದಂತೆ ಒಂದು ಆ್ಯಕ್ಷನ್ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ಘಟನೆಗಳು, ಸನ್ನಿವೇಶಗಳು ಬರುತ್ತವೆ. ಹಾಗಾಗಿ, ಇಲ್ಲೂ ಕಥೆಗಿಂತ ಇಡೀ ಸಿನಿಮಾವನ್ನು ಸನ್ನಿವೇಶಗಳೇ ಮುಂದುವರೆಸಿಕೊಂಡು ಹೋಗುತ್ತವೆ. ಮೊದಲೇ ಹೇಳಿದಂತೆ ಚಿತ್ರದಲ್ಲಿ ಲವ್, ಫ್ಯಾಮಿಲಿ ಡ್ರಾಮಾ ಹಾಗೂ ಆ್ಯಕ್ಷನ್, ಮದರ್ ಸೆಂಟಿಮೆಂಟ್ ಅಂಶಗಳಿದ್ದರೂ ನಿರ್ದೇಶಕರು ಯಾವೊಂದನ್ನು ಅತಿಯಾಗಿ ತೋರಿಸಿಲ್ಲ. ಚಿತ್ರದಲ್ಲಿ ಲವ್ ಇದ್ದರೂ ಅದನ್ನು ಹೆಚ್ಚು ತೋರಿಸದೇ, ಮಾಸ್ ಅಂಶಗಳಿಗೆ ಗಮನ ಕೊಟ್ಟಿದ್ದಾರೆ. ಆ ಮೂಲಕ “ಅರ್ಜುನ್ ಗೌಡ’ ಮಾಸ್ ಪ್ರಿಯರ ಗಮನ ಸೆಳೆಯುತ್ತದೆ.
ಇದನ್ನೂ ಓದಿ:‘ಲವ್ ಯು ರಚ್ಚು’ ಚಿತ್ರವಿಮರ್ಶೆ: ಮತ್ತೆ ಮತ್ತೆ ಕಾಡುವ ‘ರಚ್ಚು’ ಕರ್ಮ ಕಥೆ!
ಸಿನಿಮಾದ ಕಥೆ ಮಂಗಳೂರಿನಿಂದ ಆರಂಭವಾಗಿ ಬೆಂಗಳೂರು ತಲುಪಿ, ಸಿಂಗಾಪೂರದ ದೃಶ್ಯಗಳವರೆಗೂ ಹೋಗುತ್ತದೆ. ಸಿನಿಮಾದ ಕಥೆ ಗಂಭೀರವಾಗಿ ಸಾಗುವುದರಿಂದ ಅಲ್ಲಲ್ಲಿ ಪ್ರೇಕ್ಷಕ ಮೊಗದಲ್ಲಿ ನಗುಮೂಡಿಸಲು ಒಂದಷ್ಟು ಕಾಮಿಡಿ ಸನ್ನಿವೇಶಗಳನ್ನು ಜೋಡಿಸಲಾಗಿದೆ. ಕೆಲವೊಮ್ಮೆ ಈ ದೃಶ್ಯಗಳು ಕಿರಿಕಿರಿ ಎನಿಸಿದರೂ, ಕಮರ್ಷಿಯಲ್ ಸಿನಿಮಾವಾದ್ದರಿಂದ ಅವೆಲ್ಲವನ್ನು ಸಹಿಸಿಕೊಂಡು ಮುಂದೆ ಸಾಗಬೇಕು. ಅದು ಬಿಟ್ಟರೆ ಯಾವುದೇ ಗೊಂದಲವಿಲ್ಲದಂತೆ ಸಿನಿಮಾ ಮುಗಿಸಿದ್ದಾರೆ ಶಂಕರ್.
ನಾಯಕ ಪ್ರಜ್ವಲ್ ಕೆರಿಯರ್ ನಲ್ಲಿ ಇದೊಂದು ಅದ್ಧೂರಿ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಜ್ವಲ್ ಕೂಡಾ ಮಾಸ್ ಹೀರೋ ಆಗಿ, ಲವರ್ ಬಾಯ್ ಆಗಿ ಇಷ್ಟವಾಗುತ್ತಾರೆ. ಸಿನಿಮಾದ ಟೈಟಲ್ ಗೆ ತಕ್ಕಂತೆ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಪ್ರಿಯಾಂಕಾ ಇದ್ದಷ್ಟು ಹೊತ್ತು ಚೆಂದ. ರೇಖಾ, ರಾಹುಲ್ ದೇವ್, ದೀಪಕ್ ರಾಜ್, ಅರವಿಂದ್ ರಾವ್ ಸೇರಿದಂತೆ ಅನೇಕರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕಥೆಯ ಆಶಯಕ್ಕೆ ಛಾಯಾಗ್ರಹಕ ಜೈ ಆನಂದ್ ಸಾಥ್ ನೀಡಿದ್ದಾರೆ.
ರವಿಪ್ರಕಾಶ್ ರೈ