Advertisement

ಹೊಂಬಿಸಿಲು: ಇಂದಿಗೂ ನನ್ನೊಳಗೆ ಚಿಗುರುತ್ತಿರುವ ಭಾವ-ಬಳ್ಳಿ

07:23 PM Jun 25, 2020 | Hari Prasad |

ಈ ಅಂಕಣ ನಿಮ್ಮ ಮೆಚ್ಚಿನ ಸಿನಿಮಾ ಕುರಿತು ಅಭಿಪ್ರಾಯ ಹಂಚಿಕೊಳ್ಳಲು. ಇಲ್ಲಿ ಪದಗಳ ಮಿತಿ ಇಲ್ಲ. ಕನಿಷ್ಠ 150-200 ಪದಗಳಿದ್ದರೆ ಚೆಂದ. ಒಂದುವೇಳೆ ಬರಹಗಾರರಲ್ಲದವರು ಕಡಿಮೆ ಪದಗಳಲ್ಲೂ ಹೇಳಬಹುದು. ಯಾಕೆಂದರೆ, ಚಿತ್ರದ ಕುರಿತು ಆಲೋಚಿಸುವ ಕ್ರಮ ಆರಂಭವಾಗಬೇಕು. ಅದು ಈ ಮೂಲಕ ಆಗಲೆಂಬುದು ನಮ್ಮ ಆಶಯ.

Advertisement

ಆಂಕಣದ ಮೊದಲ ಬರಹ ಬೆಂಗಳೂರಿನ ಸಾಫ್ಟ್ ವೇರ್‌ ಎಂಜಿನಿಯರ್‌ ಸುಪ್ರೀತಾ ವೆಂಕಟ್‌ ಅವರದ್ದು. ಚಿತ್ರ ಹೊಂಬಿಸಿಲು. ವಿಷ್ಣುವರ್ಧನ್‌ ಮತ್ತು ಆರತಿ ಅಭಿನಯದ ಈ ಚಿತ್ರ ರೂಪುಗೊಂಡು ಬಿಡುಗಡೆಯಾದದ್ದು 1978ರಲ್ಲಿ. ಆಗ ಸಾಹಿತ್ಯ ಕೃತಿಗಳು, ಕಾದಂಬರಿಗಳ ಹವಾ ಇದ್ದ ಕಾಲ. ಆಗ ಪ್ರಣಯದ ಕಥೆಗಳು ಒಂದು ಸ್ತರದಿಂದ ಮತ್ತೊಂದು ಸ್ತರಕ್ಕೆ ಜಿಗಿಯುತ್ತಿದ್ದ ಹೊತ್ತು.

ಶ್ರೀಮಂತರ ಬದುಕು, ಭಾವನೆಗಳು ಒಂದು ಬಗೆಯಲ್ಲಿ ಗಗನ ಚುಂಬಿ ಕಟ್ಟಡದಂತೆ ತೋರುತ್ತಿದ್ದ ಸಂದರ್ಭ. ಉಷಾ ನವರತ್ನರಾಮ್‌ ಅಂತದ್ದೇ ವಿಷಯಗಳನ್ನು ತೆಗೆದುಕೊಂಡು ಕುಸುರಿ ಮಾಡುತ್ತಿದ್ದರು. ಅಂಥದ್ದೇ ಅವರ ಕಾದಂಬರಿಯನ್ನು  ಚಿತ್ರ ನಿರ್ದೇಶಕ ಗೀತ ಪ್ರಿಯ ಅವರು ಸಿನಿಮಾವಾಗಿ ರೂಪಿಸಿದರು. ಬಿಎಸ್‌ ಸೋಮಶೇಖರ್‌ ಮತ್ತು ಸಂಪತ್‌ರಾಜ್‌ ಅವರು ಸುಮಾರು 10 ಲಕ್ಷ ರೂ. ಗಳ (ಲಭ್ಯ ಮಾಹಿತಿ ಪ್ರಕಾರ) ಲ್ಲಿ ರೂಪಿಸಿದ ಸಿನಿಮಾ.

ಇದಕ್ಕೆ ಸಂಗೀತ ನಿರ್ದೇಶನ ನೀಡಿದವರು ರಾಜನ್ -‌ ನಾಗೇಂದ್ರ ಜೋಡಿ. ಇದರ ಹಾಡುಗಳು ಆ ದಿನಗಳಲ್ಲಿ ಸೂಪರ್‌ ಹಿಟ್‌. ಅದರ ಮೂರು ಹಾಡುಗಳು ಇಂದಿಗೂ ನಮ್ಮ ಮನದಲ್ಲಿ ಗುನುಗುತ್ತವೆ. ‘ಜೀವ ವೀಣೆ ನೀಡು ಮಿಡಿತದ ಸಂಗೀತ’, ‘ನೀರ ಬಿಟ್ಟು ನೆಲದ ಮೇಲೆ’ ಹಾಗೂ ‘ಹೂವಿಂದ ಹೂವಿಗೆ..’ ಅಂದ ಹಾಗೆ ಈ ಹಾಡುಗಳನ್ನು ಹಾಡಿದವರು ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಎಸ್‌. ಜಾನಕಿ.
**********************

ಇದು ಕಾದಂಬರಿ ಆಧಾರಿತ ಚಲನಚಿತ್ರವಾದರೂ ಸಹ ನನ್ನಿಷ್ಟದ ಸಿನೆಮಾ. ಬಹುಮುಖ್ಯ ಕಾರಣ ಚಿತ್ರದ ನಾಯಕ ಡಾ.ವಿಷ್ಣುವರ್ಧನ್. ಅವರ ಬಹುತೇಕ ಸಿನೆಮಾಗಳನ್ನು ನೋಡಿದ್ದೇನೆ, ಮೆಚ್ಚಿದ್ದೇನೆ ಕೂಡ. ಅವುಗಳಲ್ಲಿ ಹೊಂಬಿಸಿಲು ಸಿನೆಮಾಗೆ ಪ್ರತ್ಯೇಕ ಸ್ಥಾನವಿದೆ. ಸಿನೆಮಾ ನೋಡಿದ ನಂತರವೇ ಕಾದಂಬರಿ ಓದಿದ್ದು, ಎರಡೂ ಇಷ್ಟವಾಯ್ತು. ಸದಾ ಒಂದಿಲ್ಲೊಂದು ರೀತಿಯಲ್ಲಿ ನಮ್ಮನ್ನು ಕಾಡುವ ಚಿತ್ರವಿದು.

ಸಿನೆಮಾದ ನಾಯಕ ವಿಷ್ಣುವರ್ಧನ್ ಹಾಗೂ ನಾಯಕಿ ಆರತಿ ಇಬ್ಬರೂ ಡಾಕ್ಟರ್ಸ್. ಪ್ರೀತಿಸಿ ಮದುವೆಯಾಗಿದ್ದಲ್ಲ, ಮದುವೆಯಾದ ಮೇಲೆ ಪ್ರೀತಿಸಿದ್ದು. ತನಗೊಬ್ಬಳು ಅಸಿಸ್ಟೆಂಟ್ ಬೇಕೆಂದು ಮದುವೆಯಾಗುವ ನಾಯಕ, ಆ ಮಾತನ್ನು ಕೇಳಿ ಛಲದಿಂದ ಮದುವೆಯಾಗುವ ನಾಯಕಿ, ಆಸ್ಪತ್ರೆಯಲ್ಲಿ ನಾಯಕನ ಹಿಂದೆ ಬಿದ್ದಿದ್ದ ಇನ್ನೊಬ್ಬಳು ಡಾಕ್ಟರ್. ಹೀಗೆ ಮೂವರ ಸುತ್ತ ಸುತ್ತುವ ಕಥಾ ಹಂದರ. ಈ ಡೆಡ್ ಲಾಕ್ ಪರಿಸ್ಥಿತಿ ಹೇಗೆ ತಿಳಿಗೊಳ್ಳುತ್ತದೆ ಎಂಬುದೇ ಸ್ವಾರಸ್ಯಕರ.

Advertisement

ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಮಾಧುರ್ಯ, ಅರ್ಥಗರ್ಭಿತ. ಅವುಗಳಲ್ಲಿ ತೀರಾ ಮನಸ್ಸಿಗೆ ಹತ್ತಿರವಾಗಿದ್ದು ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’ ಹಾಡು. ದಂಪತಿಗಳು ಅರ್ಥೈಸಿಕೊಂಡು ಸುಖೀ ಜೀವನ ನಡೆಸಬೇಕಾದ ಅಂಶಗಳಿವೆ. ಚಿತ್ರದ ಸಂಭಾಷಣೆ ಉತ್ತಮವಾಗಿವೆ.

ಬದುಕಿನ ಆಯ್ಕೆಯ ಕುರಿತಾದ ಗೊಂದಲವನ್ನೂ ನಮ್ಮೆದುರು ಮಂಡಿಸುತ್ತಲೇ ಯಾವುದಾದರೂ ಒಂದು ಕಡೆ ವಾಲಿಸಿ ಬಿಡುವ ಶಕ್ತಿಯೂ ಈ ಸಿನಿಮಾಕ್ಕಿತ್ತು. ಇದರಲ್ಲಿನ ಪಾತ್ರಗಳ ನಿರೂಪಣೆ ಅದೇ ಧಾಟಿಯಲ್ಲಿ ಸಾಗುವುದು ವಿಶೇಷ. ಸಿನಿಮಾದಲ್ಲಿ ಪಾತ್ರಗಳ ಆನ್ಯೋನ್ಯತೆಯನ್ನು ಪ್ರತಿಪಾದಿಸುತ್ತಲೇ ಬದುಕೆಂಬ ಪಯಣದಲ್ಲೂ ಪಾತ್ರಗಳಲ್ಲಿನ ಅನ್ಯೋನ್ಯತೆಯನ್ನು ಪ್ರತಿಪಾದಿಸುವ ಸಿನಿಮಾ.

ಕೆಲವೇ ಕೆಲವು ಸಿನೆಮಾಗಳನ್ನು ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ವಿಷ್ಣುವರ್ಧನ್ ಅವರು ಈ ಚಿತ್ರದ ಮೂಲಕ ಮತ್ತೊಂದು ಸಲ ಸಿನೆಮಾ ರಂಗದಲ್ಲಿ ಬೆಳೆಯಲು ಅವಕಾಶ ಸಿಕ್ಕಿತ್ತು. ಅದನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡ ಅವರ ನಟನೆ ಅದ್ಭುತ. ಆರತಿ ಅವರದ್ದು ತೀರಾ ನಾಟಕೀಯ ನಟನೆಯಿಲ್ಲದೆ, ಸಹಜವಾಗಿದೆ. ವಿಷ್ಣುವರ್ಧನ್ ಅವರ ಆಗಿನ ದುಂಡು ಮುಖಕ್ಕೆ ಆ ದೊಡ್ಡ ಕನ್ನಡಕ ಚೆನ್ನಾಗಿ ಒಪ್ಪಿದೆ. ಒಟ್ಟಾರೆಯಾಗಿ ಇಂದಿಗೂ ನನ್ನ ಅಚ್ಚುಮೆಚ್ಚಿನ ಸಿನೆಮಾ ಹೊಂಬಿಸಿಲು.


– ಸುಪ್ರೀತಾ ವೆಂಕಟ್

Advertisement

Udayavani is now on Telegram. Click here to join our channel and stay updated with the latest news.

Next