Advertisement

ತರರ್ಲೆ ಹುಡುಗನ ಮದ್ವೆ ಫ‌ಜೀತಿ

10:27 AM Mar 09, 2020 | Suhan S |

ನಾನು ಜಾನಪದ ಹಾಡುಗಾರ, ಇಷ್ಟ ಆಗದಿರೋ ಹಾಡನ್ನೇ ಹಾಡಂಗಿಲ್ಲ. ಅಂಥದ್ರಲ್ಲಿ ಇಷ್ಟ ಆಗದಿರೋ ಹುಡುಗೀನ ಲಗ್ನ ಹಾಕ್ತೀನೇನ್ರೀ…’

Advertisement

-ಆ ನಾಯಕ, ನಾಯಕಿ ಮುಂದೆ ನಿಂತು ಈ ಡೈಲಾಗ್‌ ಹೇಳುವ ಹೊತ್ತಿಗೆ, ಊರ ಜನರೆಲ್ರೂ ಅವನನ್ನು ಊರಿಂದ ಹೊರ ಹಾಕಬೇಕು ಅಂತ ನಿರ್ಧರಿಸಿರುತ್ತಾರೆ. ಅದಕ್ಕೆ ಕಾರಣ, ಅವನೊಬ್ಬ ಉಢಾಳ, ಭಂಡ ಆನ್ನೋದು. ಹಾಗೆ ಯಾಕೆ ಇರ್ತಾನೆ ಎಂಬ ಪ್ರಶ್ನೆಗೆ ಸಿನಿಮಾದಲ್ಲೇ ಉತ್ತರ ಸಿಗಲಿದೆ. ಚಿತ್ರದ ಶೀರ್ಷಿಕೆ ನೋಡಿದವರಿಗೆ ಅದೊಂದು ಮಜವಾದ ಸಿನಿಮಾ ಎಂಬ ಕಲ್ಪನೆ ಮೂಡುವುದು ಸಹಜ. ಆ ಕಲ್ಪನೆಗೆ ನಿರ್ದೇಶಕರು ಮೋಸ ಮಾಡಿಲ್ಲ ಅನ್ನೋದು ಸಹ ನಿಜ. ಆದರೆ, ಕಥೆಯಲ್ಲಿ ಹೇಳಿಕೊಳ್ಳುವಂತಹ ಹೊಸತನವಿಲ್ಲ. ಈಗಾಗಲೇ ಈ ರೀತಿಯ ಕಥೆಗಳು ಸಾಕಷ್ಟು ಬಂದು ಹೋಗಿವೆ. ಚಿತ್ರಕಥೆಯಲ್ಲಿ ಚುರುಕುತನವಿದೆ.

ಹೊಸಬಗೆಯ ತಿಳಿಹಾಸ್ಯದೊಂದಿಗೆ ಸುಮ್ಮನೆ ನೋಡಿಸಿಕೊಂಡು ಹೋಗುವ ಸಣ್ಣದ್ದೊಂದು ತಾಕತ್ತು ಇಲ್ಲಿದೆ. ಹಾಗಂತ, ಇಲ್ಲಿಎಲ್ಲವೂ ಸರಿ ಇದೆಯಂತಲ್ಲ. ಒಂದಷ್ಟು ಸಣ್ಣಪುಟ್ಟ ಎಡವಟ್ಟುಗಳಿವೆ. ಆ ಎಡವಟ್ಟುಗಳು ಬರುವ ಹಾಡುಗಳಿಂದ ಕಳೆದುಹೋಗಿವೆ ಎಂಬುದನ್ನು ಒಪ್ಪಬೇಕು. ಮೊದಲರ್ಧ ಜಾಲಿಯಾಗಿಯೇ ಸಾಗುವ ಚಿತ್ರದಲ್ಲಿ ದ್ವಿತಿಯಾರ್ಧ ಒಂದು ಗಂಭೀರ ವಿಷಯವಿದೆ. ಹೀಗೆ ಆಗುತ್ತೆ ಅಂದುಕೊಂಡವರಿಗೆ ನಿರ್ದೇಶಕರು ಅಲ್ಲೊಂದು ಟ್ವಿಸ್ಟ್‌ ಕೊಟ್ಟು ಟೆಸ್ಟ್‌ ಮಾಡಿದ್ದಾರೆ. ಆ ಟ್ವಿಸ್ಟ್‌ನ ಟೆಸ್ಟ್‌ ಮಾಡುವ ಕುತೂಹವಿದ್ದರೆ, ಹೊಸಬರ ಮದುವೆ ದರ್ಬಾರ್‌ನ್ನೊಮ್ಮೆ ನೋಡಿ ಬರಲು ಅಡ್ಡಿಯಿಲ್ಲ.

ಇಡೀ ಚಿತ್ರದಲ್ಲೊಂದು ವಿಶೇಷತೆ ಇದೆ. ಅದು ಉತ್ತರ ಕರ್ನಾಟಕದ ಭಾಷೆ. ಆ ಗಮ್ಮತ್ತಿನ ಮಾತುಗಳಲ್ಲೇ ಅಚ್ಚ ಕನ್ನಡದ ಸ್ಪಷ್ಟತೆ ಇದೆ. ಅಲ್ಲಿನ ಆಚಾರ, ವಿಚಾರ, ಆ ಭಾಗದ ಸೊಬಗು ಮತ್ತು ಸೊಗಡನ್ನು ತುಂಬಾ ಚೆನ್ನಾಗಿ ಕಟ್ಟಿಕೊಡಲಾಗಿದೆ. ತುಂಬಾ ಸರಳವಾಗಿರುವ ಕಥೆಯಲ್ಲಿ ಹಾಡುಗಳದ್ದೇ ಹಬ್ಬ. ಇಲ್ಲಿ 11 ಹಾಡುಗಳನ್ನು ಕೇಳಬಹುದು. ಹಾಗಂತ, ವಿನಾಕಾರಣ, ಹಾಡುಗಳನ್ನು ತುರುಕಿಲ್ಲ ಎಂಬ ಸಮಾಧಾನವಿದೆ. ಆ ಎಲ್ಲಾ ಹಾಡುಗಳ ತುಣುಕುಗಳೂ ಕಥೆಗೆ ಪೂರಕವಾಗಿವೆ. ಒಂದು ಗ್ರಾಮದಲ್ಲಿ ನಡೆಯೋ ಕಥೆಯನ್ನು, ನಮ್ಮೂರಲ್ಲೇ ನಡೆದ ಕಥೆಯೇನೋ ಎಂಬಷ್ಟರ ಮಟ್ಟಿಗೆ ಕಟ್ಟಿಕೊಟ್ಟಿರುವ ಪ್ರಯತ್ನ ಮೆಚ್ಚಬೇಕು. ನಿರೂಪಣೆಯಲ್ಲಿ ಇನ್ನಷ್ಟು ಬಿಗಿಹಿಡಿತ ಇದ್ದಿದ್ದರೆ, ವೇಗಮಿತಿ ಕೂಡ ಹೆಚ್ಚುತ್ತಿತ್ತು. ಕೆಲವು ಕಡೆ ಹಾಸ್ಯ ದೃಶ್ಯಗಳಿಗೆ ಕತ್ತರಿ ಹಾಕಲು ಸಾಧ್ಯವಿತ್ತು. ಆದರೂ, ಕಾಣಸಿಗುವ ಹಾಡುಗಳು ಅವೆಲ್ಲವನ್ನೂ ಮರೆಸಿಬಿಡುತ್ತವೆ.

ಒಟ್ಟಾರೆ, ಉತ್ತರ ಕರ್ನಾಟಕ ಭಾಗದ ಒಂದು ಊರಿಗೆ ಹೋಗಿ ಬಂದಂತಹ ಅನುಭವ ಆಗದೇ ಇರದು. ನಾಯಕ ವಿಠಲ್‌ ಹೆಚ್ಚು ಓದದ ಹುಡುಗ. ಆ ಊರಿನ ಒಬ್ಬ ಜಾನಪದ ಹಾಡುಗಾರ. ಆದರೆ, ಇಬ್ಬರು ಗೆಳೆಯರ ಜೊತೆ ಸೇರಿ, ಊರಲ್ಲಿ ಎಲ್ಲರಿಗೂ ಕಾಟ ಕೊಡುವ ಹುಡುಗ. ಅವನ ಕಾಟಕ್ಕೆ ಬೇಸತ ಆ ಊರ ಜನರು, ಅವನ ತಾಯಿ ಬಳಿ ಬಂದು, ಅವನಿಗೊಂದು ಮದುವೆ ಮಾಡ್ರೀ ಸರಿ ಹೋಗ್ತಾನೆ, ಇಲ್ಲಾಂದ್ರೆ, ಊರ ಹುಡುಗರನ್ನೂ ಹಾಳು ಮಾಡ್ತಾನೆ ಎಂದು ದೂರು ಕೊಡುತ್ತಿರುತ್ತಾರೆ. ಜನರ ಮಾತಿಗೆ ಮಗನಿಗೊಂದು ಮದುವೆ ಮಾಡಬೇಕೆಂದು ತೀರ್ಮಾನಿಸುವ ಆಕೆ, ಸಾಕಷ್ಟು ಹುಡುಗಿಯರನ್ನು ತೋರಿಸಿದರೂ ಯಾವ ಹುಡುಗಿಯೂ ಸರಿಹೊಂದಲ್ಲ. ಅವನ ಕಾಟ ಮುಂದುವರೆದಿರುವಾಗಲೇ, ಆ ಊರಿಗೊಬ್ಬ ಟೀಚರ್‌ ಎಂಟ್ರಿಕೊಡುತ್ತಾಳೆ. ಅವಳನ್ನು ಪ್ರೀತಿಸೋ ವಿಠಲ್‌ಗೆ ಆಕೆ ಸಿಕ್ತಾಳಾ, ಇಲ್ಲವೋ ಅನ್ನೋದು ಕಥೆ. ದ್ವಿತಿಯಾರ್ಧದಲ್ಲಿ ಯಾರೂ ಊಹಿಸಲಾಗದ ತಿರುವಿದೆ. ಅದೇ ಚಿತ್ರದ ಸಸ್ಪೆನ್ಸ್‌. ನಾಯಕ ಶಿವ ಚಂದ್ರಕುಮಾರ್‌ಗೆ ಇದು ಮೊದಲ ಅನುಭವ. ನಟನೆಯಲ್ಲಿ ಸೈ ಎನಿಸಿಕೊಂಡಿರುವ ಅವರು, ಡ್ಯಾನ್ಸ್‌, ಫೈಟ್‌ನಲ್ಲೂ ಇಷ್ಟ ಆಗುತ್ತಾರೆ. ಕೊಂಚ ಬಾಡಿಲಾಂಗ್ವೇಜ್‌ ಕಡೆ ಗಮನರಿಸಿದರೆ ಭವಿಷ್ಯವಿದೆ.

Advertisement

ಇನ್ನು, ಆರಾಧ್ಯ ಗ್ಲಾಮರ್‌ಗಷ್ಟೇ ಸೀಮಿತ ಎಂಬಂತಿದೆ. ಡ್ಯಾನ್ಸ್‌ನಲ್ಲಿ ಇಷ್ಟವಾಗುವ ಅವರು, ನಟನೆಯಲ್ಲಿನ್ನೂ ಪಳಗಬೇಕು. ಉಳಿದಂತೆ ಕೃಷ್ಣಮೂರ್ತಿ ಕವಾತ್ತರ್‌, ಚಿತ್ಕಲಾ, ಅರುಣ ಬಾಲರಾಜ್‌, ಸದಾನಂದ ಕಾಳಿ, ಚಕ್ರವರ್ತಿ ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಅವಿನಾಶ್‌ ಬಾಸೂತ್ಕರ್‌ ಅವರ ಸಂಗೀತದ ಮೂರು ಹಾಡುಗಳು ಗುನುಗುವಂತಿವೆ. ಹಿನ್ನೆಲೆ ಸಂಗೀತಕ್ಕೆ ಇನ್ನಷ್ಟು ಸ್ವಾದ ಬೇಕಿತ್ತು. ಸುರೇಶ್‌ ಬಾಬು ಛಾಯಾಗ್ರಹಣದಲ್ಲಿ ಉತ್ತರ ಕರ್ನಾಟಕದ ಸೊಬಗು ಮೇಳೈಸಿದೆ.

 

-ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next