ಮಂಗಳೂರು: ಹಿಮಾನಿ ಫಿಲಂಸ್ ಬ್ಯಾನರ್‌ನಡಿಯಲ್ಲಿ ಸುಮನ್ ಸುವರ್ಣ ನಿರ್ದೇಶನದಲ್ಲಿ ಶರತ್ ಕುಮಾರ್ ಎ.ಕೆ. ನಿರ್ಮಾಣದಲ್ಲಿ ತಯಾರಾದ “ಕಲ್ಜಿಗ’ ಸಿನೆಮಾ ಶುಕ್ರವಾರ ರಾಜ್ಯಾದ್ಯಂತ ತೆರೆ ಕಂಡಿತು.
ರಾಜ್ಯದ ಸುಮಾರು 50 ಟಾಕೀಸ್‌ಗಳಲ್ಲಿ ಸಿನೆಮಾ ತೆರೆಕಂಡಿದೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಡಿಕೇರಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಮುಂಬಯಿ ಹಾಗೂ ಗಲ್ಫ್ ದೇಶಗಳಲ್ಲೂ ಸಿನೆಮಾ ಬಿಡುಗಡೆಯಾಗಿದೆ. ಮಂಗಳೂರಿನ ಭಾರತ್ ಮಾಲ್‌ನ ಭಾರತ್ ಸಿನೆಮಾಸ್‌ನಲ್ಲಿ ಚಿತ್ರ ಬಿಡುಗಡೆ ಸಮಾರಂಭ ನಡೆಯಿತು.
ಹಿರಿಯ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಮಾತನಾಡಿ, “ಕಲ್ಜಿಗ ಸಿನೆಮಾ ಕುರಿತು ಟೀಕೆ ಟಿಪ್ಪಣಿ ಬರುತ್ತಿದೆ. ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸೋಣ. ಸಿನೆಮಾ ನೋಡಿದವರು ನಮ್ಮ ತುಳುನಾಡಿನ ದೈವಗಳ ಕಾರಣಿಕವನ್ನು ಚೆನ್ನಾಗಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ತಪ್ಪು ಮಾಡದೆಯೂ ನಮಗೆ ಅನ್ಯಾಯವಾಗುವುದಾದರೆ ನಾನು ಚಿತ್ರತಂಡದ ಜತೆಗೆ ಇರುತ್ತೇನೆ’ ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, “ಅರ್ಜುನ್ ಕಾಪಿಕಾಡ್ ಅಭಿನಯಿಸಿದ ಸಿನೆಮಾದಲ್ಲಿ ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಕೆಲಸ ನಡೆದಿದೆ. ನಾವೆಲ್ಲರೂ ಸಿನೆಮಾ ನೋಡಿ ಬೆಂಬಲಿಸಬೇಕು’ ಎಂದರು. ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ಪ್ರಕಾಶ್ ಧರ್ಮನಗರ, ತಮ್ಮ ಲಕ್ಷ್ಮಣ, ಗಿರೀಶ್ ಶೆಟ್ಟಿ ಕಟೀಲು, ನಟ ಅರ್ಜುನ್ ಕಾಪಿಕಾಡ್, ನಿರ್ಮಾಪಕ ಶರತ್ ಕುಮಾರ್ ಎ.ಕೆ., ನಿರ್ದೇಶಕ ಸುಮನ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.
ಸುಮನ್ ಸುವರ್ಣ “ಕಲ್ಜಿಗ’ದ ಮೂಲಕ ಸ್ವತಂತ್ರ ನಿರ್ದೇಶಕ
ಬಹುಕಾಲದ ಬಳಿಕ ಹಂಸಲೇಖ ಈ ಸಿನೆಮಾ ಮೂಲಕ ಸಂಗೀತ ನಿರ್ದೇಶನಕ್ಕೆ ಮರಳಿದ್ದಾರೆ. ಗಿರ್ಗಿಟ್, ಸರ್ಕಸ್, ಗಮ್ಜಾಲ್ ಮುಂತಾದ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಸುಮನ್ ಸುವರ್ಣ “ಕಲ್ಜಿಗ’ದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತುಳು ಚಿತ್ರರಂಗದಲ್ಲಿ ಕಿಂಗ್ ಆಫ್ ಆಕ್ಷನ್ ಬಿರುದು ಪಡೆದಿರುವ ನಟ ಅರ್ಜುನ್ ಕಾಪಿಕಾಡ್ ಈ ಚಿತ್ರದ ನಾಯಕ. ನಟರಾದ ಗೋಪಿನಾಥ್ ಭಟ್, ಜ್ಯೋತಿಷ್ ಶೆಟ್ಟಿ, ಮಾನಸಿ ಸುಧೀರ್, ವಿಜಯ್ ಶೋಭರಾಜ್ ಪಾವೂರ್, ಶ್ಲಾಘಾ ಸಾಲಿಗ್ರಾಮ ಮುಂತಾದವರಿದ್ದಾರೆ.