Advertisement

ರಿಲೀಸ್ ಸಮಸ್ಯೆಗೆ ಹೊಣೆ ಯಾರು ?

10:19 AM Feb 15, 2020 | sudhir |

ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ. ಆದರೆ, ನಮ್ಮ ನಡುವೆಯೇ ಪೈಪೋಟಿ ಏರ್ಪಟ್ಟರೆ, ಒಳ್ಳೆಯ ಸಿನಿಮಾಗಳಿಗೆ ನೆಲೆ ಎಲ್ಲಿ?

Advertisement

ವಾರಕ್ಕೆ ಎಂಟು, ಒಂಬತ್ತು , ಹತ್ತು …!
-ಅಬ್ಟಾ ಇದು ಕನ್ನಡ ಸಿನಿಮಾಗಳ ಬಿಡುಗಡೆ ವಿಷಯ. ಹೀಗಾದರೆ, ಯಾವುದನ್ನ ನೋಡಬೇಕು, ಯಾವುದನ್ನ ಬಿಡಬೇಕು? ಸಿನಿಮಾ ಬಿಡುಗಡೆಯ ಸ್ಪರ್ಧೆ ಒಂದೆಡೆಯಾದರೆ, ಅಮೆಜಾನ್‌, ನೆಟ್‌ಫ್ಲಿಕ್ಸ್‌ ಪೈಪೋಟಿ ಇನ್ನೊಂದೆಡೆ. ಇಲ್ಲಿ ಯಾರನ್ನು ದೂರಬೇಕು? ಚಿತ್ರಮಂದಿರಗಳ ಸಮಸ್ಯೆಯಂತೂ ಅಲ್ಲ. ಇದು ನಿರ್ಮಾಪಕರೇ ಮಾಡಿಕೊಂಡ ಸಮಸ್ಯೆ.

-ಹೌದು. ಕನ್ನಡ ಚಿತ್ರರಂಗ ಈಗ ಎಂದಿಗಿಂತಲೂ ರಂಗೇರಿದೆ. ಆದರೆ, ನಮ್ಮ ನಡುವೆಯೇ ಬಿಡುಗಡೆಯ ಸ್ಪರ್ಧೆ ಏರ್ಪಟ್ಟಿದೆ. ಇದರಿಂದ ಪೆಟ್ಟು ತಿನ್ನುತ್ತಿರೋದು ನಿರ್ಮಾಪಕರೇ ಹೊರತು ಬೇರಾರೂ ಅಲ್ಲ. ಈ ಸತ್ಯ ಗೊತ್ತಿದ್ದರೂ, ಮತ್ತದೇ ತಪ್ಪುಗಳಾಗುತ್ತಿವೆ. ಒಂದೆರೆಡು ಬಾರಿ ಅಂತಹ ತಪ್ಪಾದರೆ ಸಮಸ್ಯೆ ಏನೂ ಇಲ್ಲ. ಆದರೆ, ಪ್ರತಿ ವಾರವೂ ಬಿಡುಗಡೆ ಸಂಖ್ಯೆ ಐದು, ಆರು ಚಿತ್ರಗಳನ್ನು ದಾಟಿದರೆ ಹೊಡೆತ ತಡೆದುಕೊಳ್ಳೋದಾದರೂ ಹೇಗೆ? ಇದು ನಿನ್ನೆ, ಮೊನ್ನೆಯ ಸಮಸ್ಯೆ ಅಲ್ಲ. ಆದರೂ, ಇದಕ್ಕೊಂದು ಪರಿಹಾರ ಇಲ್ಲವೇನೋ ಎಂಬಷ್ಟರ ಮಟ್ಟಿಗೂ ಕನ್ನಡ ಚಿತ್ರರಂಗದ ಸಂಘ-ಸಂಸ್ಥೆಗಳೂ ಕೂಡ ಮೌನವಹಿಸಿವೆ. ಹಾಗಾದರೆ, ಇಲ್ಲಿ ದೂರುವುದು ಯಾರನ್ನ?

ಪ್ರತಿ ವಾರ ಇಷ್ಟು ಸಂಖ್ಯೆಯಲ್ಲಿ ಸಿನಿಮಾ ಬಿಡುಗಡೆಯಾದರೆ, ಜನರು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮೂರು ಮತ್ತೂಂದು ಸಿನಿಮಾ ಬಿಡುಗಡೆಯಾದರೆ, ಒಂದೆರೆಡು ಆಯ್ಕೆ ಇರುತ್ತೆ. ಅದು ಡಬ್ಬಲ್‌ ಆಗಿಬಿಟ್ಟರೆ, ಇಲ್ಲಾಗುವ ನಷ್ಟ ಯಾರಿಗೆ? ಈ ಪ್ರಶ್ನೆ ಗೊತ್ತಿದ್ದರೂ, ಮತ್ತದೇ ತಪ್ಪು ನಡೆಯುತ್ತಿದೆ. ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ. ಆದರೆ, ಬಿಡುಗಡೆಗೆ ಸಾಲುಗಟ್ಟಿ ಬಂದಿದ್ದರಿಂದಲೇ ಇಂದು ಆ ಚಿತ್ರಗಳಿಗೆ ಜನ ಬರದಂತಾಗಿದೆ. ನಮ್ಮ ನಡುವೆಯೇ ಪೈಪೋಟಿ ಏರ್ಪಟ್ಟರೆ, ಒಳ್ಳೆಯ ಸಿನಿಮಾಗಳಿಗೆ ನೆಲೆ ಎಲ್ಲಿ?
ಹಾಗಾದರೆ, ಅಷ್ಟೊಂದು ಸಂಖ್ಯೆಯಲ್ಲಿ ಬಿಡುಗಡೆ­ಯಾಗುತ್ತಿರುವ ಚಿತ್ರಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ? ಅದು ನಿರ್ಮಾಪಕರಿಂದ ಮಾತ್ರ ಸಾಧ್ಯವಿದೆ. ಜನರಿಗೆ ರೀಚ್‌ ಆಗಬೇಕು, ಚಿತ್ರವನ್ನು ನಿಲ್ಲಿಸಬೇಕು, ಹಾಕಿದ ಹಣ ಹಿಂಪಡೆಯ­ಬೇಕೆಂದರೆ, ಅವಸರದಲ್ಲಿ ಚಿತ್ರ ಬಿಡುಗಡೆಗೆ ನಿಲ್ಲಬಾರದು. ಇದರಿಂದ ನೋಡುಗರಿಗಾಗಲಿ, ನಟ, ನಟಿಯರಿಗಾಗಲಿ ನಷ್ಟ ಆಗಲ್ಲ. ಈಗ ರಿಲೀಸ್‌ ಆಗಿ ಮೂರ್‍ನಾಲ್ಕು ದಿನದಲ್ಲೇ ಆ ಚಿತ್ರಮಂದಿರದಲ್ಲಿ ಮತ್ತೂಂದು ಸಿನಿಮಾ ಬಿಡುಗಡೆಯ ಅನೌನ್ಸ್‌ ಆಗಿರುತ್ತೆ. ನಾ ಮುಂದೆ, ತಾ ಮುಂದೆ ಅಂತ ಬಿಡುಗಡೆಗೆ ತುದಿಗಾಲ ಮೇಲೆ ನಿಲ್ಲುವ ನಿರ್ಮಾಪಕರು, ಏಳೆಂಟು ಚಿತ್ರ ರಿಲೀಸ್‌ ಮಾಡಿ, ಸಿನಿಮಾಗೆ ಜನರೇ ಬರುತ್ತಿಲ್ಲ ಎಂಬ ನೋವು ತೋಡಿಕೊಳ್ಳುವುದು ಎಷ್ಟು ಸರಿ? ಅಷ್ಟೊಂದು ಸಂಖ್ಯೆಯಲ್ಲಿ ಬಿಡುಗಡೆಯಾಗುವ ಸಿನಿಮಾಗಳನ್ನು ನೋಡುವ ಪ್ರೇಕ್ಷಕನಿಗೂ ಆಯ್ಕೆ ಇರುವುದಿಲ್ಲವೇ? ವಾರದಲ್ಲಿ ಒಂದೋ, ಎರಡೋ ಸಿನಿಮಾ ನೋಡುವ ಮನಸ್ಸು ಮಾಡಿದರೆ ಅದೇ ದೊಡ್ಡದು. ಬಿಡುಗಡೆ ಸಂಖ್ಯೆ ಹೆಚ್ಚಾದಂತೆ, ನೋಡುಗನಿಗೂ ಗೊಂದಲ ಆಗೋದು ನಿಜ.

ಇಲ್ಲಿ ಕೆಟ್ಟ ಸಿನಿಮಾ, ಒಳ್ಳೆಯ ಸಿನಿಮಾಗಳ ಹಣೆಬರಹ ಬರೆಯೋದು ಪ್ರೇಕ್ಷಕ. ಆದರೆ, ಒಮ್ಮೆಲೇ ಏಳೆಂಟು ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟರೆ, ಪ್ರೇಕ್ಷಕ ಯಾವ ಚಿತ್ರಕ್ಕೆ ಅಂತ ಹಣೆಬರಹ ಬರೆಯಲು ಸಾಧ್ಯ? ಆದ್ಯತೆ ಮೇರೆಗೆ ಬಿಡುಗಡೆಗೆ ಸಜ್ಜಾದರೆ, ಒಂದಷ್ಟು ತಾಳ್ಮೆ ಇದ್ದರೆ ತಕ್ಕಮಟ್ಟಿಗಾದರೂ ನಿರ್ಮಾಪಕರು ಖುಷಿ ಪಡಬಹುದು. ಇಲ್ಲವೆಂದರೆ, ಸಮಸ್ಯೆ ಇನ್ನಷ್ಟು ದುಪ್ಪಟ್ಟಾಗುವುದರಲ್ಲಿ ಅನುಮಾನವಿಲ್ಲ.

Advertisement

ಬಿಡುಗಡೆಯ ಸಮಸ್ಯೆ ನಿವಾರಣೆ ಸಾಧ್ಯವಿಲ್ಲವೇ? ಅದಕ್ಕೊಂದು ಬಿಡುಗಡೆ ನಿಯಮ ಅಳವಡಿಸಿ, ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬುದನ್ನು ಪಾಲಿಸಬಹುದಲ್ಲವೇ? ಈ ಪ್ರಶ್ನೆಯನ್ನು ಸಿನಿಪಂಡಿತರೊಬ್ಬರ ಮುಂದಿಟ್ಟರೆ, “ಇದೆಲ್ಲಾ ಹೇಳುವುದಕ್ಕೆ ಮಾತ್ರ ಚೆನ್ನಾಗಿರುತ್ತೆ. ಪಾಲಿಸುವುದಕ್ಕಲ್ಲ. ಇಲ್ಲಿ ನಿಯಮ ಮುಖ್ಯವಲ್ಲ. ನಿರ್ಮಾಪಕರೇ ತಿದ್ದುಕೊಳ್ಳುವುದು ಮುಖ್ಯ’ ಎಂಬುದು ಅವರ ಮಾತು. ಈ ಕುರಿತು ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಹೇಳುವುದಿಷ್ಟು. “ಹಿಂದೆ ಒಂದು ನಿಯಮವಿತ್ತು. ವಾರಕ್ಕೆ ಎರಡು, ಮೂರು ಚಿತ್ರ ಬಿಡುಗಡೆ ಮಾಡಬೇಕು ಅನ್ನೋದು. ಹಬ್ಬ ಹರಿದಿನ ಬಂದರೆ, ಒಂದು ಸಿನಿಮಾ ಹೆಚ್ಚು ಬಿಡುಗಡೆ ಮಾಡಬೇಕೆಂಬ ನಿಯಮವಿತ್ತು. ಆಗೆಲ್ಲಾ ನೂರು ಪ್ಲಸ್‌ ಚಿತ್ರಗಳು ತಯಾರಾಗುತ್ತಿದ್ದವು. ಅದಕ್ಕೆ ತಕ್ಕಂತೆ ಬಿಡುಗಡೆ ಸಂಖ್ಯೆ ಇರುತ್ತಿತ್ತು. ಈಗ ಪರಿಸ್ಥಿತಿ ಬೇರೆಯಾಗಿದೆ. ವರ್ಷಕ್ಕೆ 250 ಪ್ಲಸ್‌ ಚಿತ್ರ ತಯಾರಾಗುತ್ತಿವೆ. ಆ ಪೈಕಿ ಸಬ್ಸಿಡಿಗಾಗಿ ಬರುವ ಚಿತ್ರಗಳೇ ಹೆಚ್ಚು. ಇದರಿಂದಾಗಿ, ಬಿಡುಗಡೆ ಸಂಖ್ಯೆ ಕೂಡ ವಾರ ವಾರಕ್ಕೂ ಹೆಚ್ಚಾಗುತ್ತಿದೆ.

ಹೋಗಲಿ, ಬಿಡುಗಡೆಯಾಗುವ ಸಿನಿಮಾ ಚಿತ್ರಮಂದಿರದಲ್ಲಿ ಗಟ್ಟಿಯಾಗಿ ನಿಲ್ಲುತ್ತಿದೆಯಾ ಅದೂ ಇಲ್ಲ. ಈ ಬಗ್ಗೆ ಬೇರೆ ಯಾರೂ ಕಾರಣ ಆಗಲ್ಲ. ಸ್ವತಃ ನಿರ್ಮಾಪಕರೇ ಕಾರಣ ಆಗುತ್ತಾರೆ. ನಿರ್ಮಾಪಕರೇ ಬಿಡುಗಡೆ ಸಂಖ್ಯೆ ಯೋಚಿಸಿದಾಗ ಮಾತ್ರ, ಸಮಸ್ಯೆ ಬಗೆಹರಿಯುತ್ತೆ. ಇಲ್ಲವಾದರೆ ಇಲ್ಲ. ಸದ್ಯಕ್ಕೆ ಈ ಬಿಡುಗಡೆಯದ್ದೇ ದೊಡ್ಡ ಸಮಸ್ಯೆಯಾಗಿದೆ. ಈಗ ವಾರಕ್ಕೆ ಇಂತಿಷ್ಟೇ ಸಿನಿಮಾ ರಿಲೀಸ್‌ ಆಗಬೇಕು ಎಂಬ ನಿಯಮ ಜಾರಿಗೆ ತರುವುದು ಕಷ್ಟ. ಆ ಬಗ್ಗೆ ನಿರ್ಮಾಪಕರ ಜೊತೆಗೇ ಚರ್ಚಿಸಬೇಕಿದೆ. ಒಂದು ವೇಳೆ, ಅವರುಗಳೇ ಸಮಸ್ಯೆ ನಿವಾರಣೆಗೆ ಮುಂದಾಗದಿದ್ದರೆ, ಕನ್ನಡ ಚಿತ್ರರಂಗ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ವಾರಕ್ಕೆ ನಾಲ್ಕು ಸಿನಿಮಾ ಓಕೆ, ಅದಕ್ಕೂ ಮೇಲೆ ಒಂದು ಸಿನಿಮಾ ಬಂದರೂ ಪರವಾಗಿಲ್ಲ. ಆದರೆ, ಏಳೆಂಟು ಸಿನಿಮಾ ಮೇಲೆ ಬಿಡುಗಡೆಯಾದರೆ, ಒಳ್ಳೆಯ ಸಿನಿಮಾಗಳಿಗೂ ಇಲ್ಲಿ ಬೆಲೆ ಇಲ್ಲದಂತಾಗುತ್ತಿದೆ.

ಇದು ಕೇವಲ ನಿರ್ಮಾಪಕರ ಸಂಘ, ಫಿಲ್ಮ್ ಚೇಂಬರ್‌ ತೆಗೆದುಕೊಳ್ಳುವ ನಿರ್ಧಾರ ಅಲ್ಲ, ಕಲಾವಿದರೂ, ನಿರ್ಮಾಪಕರೂ ಕೂಡ ಕೈ ಜೋಡಿಸಬೇಕು. ಇನ್ನು, ಸರ್ಕಾರ ಜನತಾ ಚಿತ್ರಮಂದಿರ ಮಾಡಿದರೆ, ಸ್ವಲ್ಪಮಟ್ಟಿಗಾದರೂ ಸಮಸ್ಯೆ ಬಗೆಹರಿಯುತ್ತೆ. ಆದರೆ, ಒಂದಷ್ಟು ಷರತ್ತುಗಳಿವೆ. ಅದನ್ನು ಸಡಿಲೀಕರಣಗೊಳಿಸಿದರೆ, ಚಿತ್ರಮಂದಿರ ನಿರ್ಮಾಣಕ್ಕೆ ಒಂದಷ್ಟು ಮಂದಿ ಕೈ ಜೋಡಿಸಬಹುದು. ಈ ಸಮಸ್ಯೆ ಬಗೆಹರಿಯಲೂ ಬಹುದು’ ಎಂಬುದು ಪ್ರವೀಣ್‌ಕುಮಾರ್‌ ಮಾತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಹೇಳುವ ಪ್ರಕಾರ, “ಇದು ಈಗಿನ ಸಮಸ್ಯೆಯಲ್ಲ. ಯಾವಾಗ 8-10 ಸಿನಿಮಾ ರಿಲೀಸ್‌ಗೆ ನಿಂತವೋ ಆಗಿನಿಂದಲೂ ನಾವು ಕ್ಯೂನಲ್ಲಿ ಬನ್ನಿ. ಯಾರಿಗೂ ಸಮಸ್ಯೆ ಆಗಲ್ಲ ಅಂದರೆ, ಇಲ್ಲ, ನಾವು ಇನ್ವೆಸ್ಟ್‌ ಮಾಡಿದ್ದೇವೆ, ಸಾಲ ತಂದಿದ್ದೇವೆ ಬರಲೇಬೇಕು ಅಂತ ರಿಲೀಸ್‌ ಮಾಡ್ತಾರೆ. ಅಷ್ಟೊಂದು ಸಿನಿಮಾ ಒಮ್ಮೆಲೆ ಬಂದರೆ, ಸಮಸ್ಯೆ ಆಗೋದೇ ಅವರಿಗೆ. ಈ ರೀತಿಯ ಬೆಳವಣಿಗೆ ನಿಜಕ್ಕೂ ಒಳ್ಳೆಯದಲ್ಲ.

ಇಂಡಸ್ಟ್ರಿಯನ್ನೇ ಸೋಲಿಸಿಬಿಡುತ್ತೆ. ಇಲ್ಲಿ ಚಿತ್ರಮಂದಿರಗಳಿವೆ. ಜನರು ಬರುತ್ತಿಲ್ಲ. ಇರುವ ಕಡಿಮೆ ಚಿತ್ರಮಂದಿರಗಳಲ್ಲಿ ಏಳೆಂಟು ಚಿತ್ರ ಬಂದರೆ, ಯಾರಿಗೆ ಅಂತ ಥಿಯೇಟರ್‌ ಕೊಡೋಕ್ಕಾಗುತ್ತೆ. ಕೆ.ಜಿ.ರಸ್ತೆಯಲ್ಲೀಗ ಉಳಿದಿರೋದು ನಾಲ್ಕು ಚಿತ್ರಮಂದಿರ, ಅಲ್ಲಿಗೆ ಒಂಬತ್ತು ಚಿತ್ರಗಳು ರಿಲೀಸ್‌ ಆಗಿಬಿಟ್ಟರೆ ಏನು ಮಾಡೋಕ್ಕಾಗುತ್ತೆ. ಈಗಾದರೂ, ಈ ಸಮಸ್ಯೆ ಅರಿತು, ಶಿಸ್ತುಬದ್ಧವಾಗಿ ಪಾಲಿಸಿದರೆ ಸಮಸ್ಯೆ ನಿವಾರಣೆಯಾಗಬಹುದು.

ನಾವೇನಾದರೂ, ನಿಯಮ ಅಂತೆಲ್ಲಾ ಹೋದರೆ ಕೆಲವರು ಕಾನೂನು ಮೊರೆ ಹೋಗ್ತಾರೆ. ಕಾನೂನು ಕಂಟ್ರೋಲ್‌ ಮಾಡೋಕೆ ನೀವ್ಯಾರಿ ಎನ್ನುತ್ತೆ. ಒಳ್ಳೆಯ ಚಿತ್ರಗಳೂ ಕೂಡ ನಿಲ್ಲಲಾಗುತ್ತಿಲ್ಲ. ಅದೇ ಕಡಿಮೆ ಸಿನಿಮಾ ಬಂದರೆ, ಒಳ್ಳೆಯ ಚಿತ್ರಕ್ಕೂ ಇಲ್ಲಿ ಬೆಲೆ ಸಿಗುತ್ತೆ. ಇದು ಯಾರಿಗೂ ಅರ್ಥ ಆಗುತ್ತಿಲ್ಲ. ಮೊದಲು ನಮ್ಮ ನಡುವೆಯೇ ಸ್ಪರ್ಧೆ ಇದೆ. ಅದು ಹೋಗಬೇಕು. ಈ ಕುರಿತು ಎಲ್ಲಾ ರೀತಿ ಪ್ರಯತ್ನ ಮಾಡಲಾಗುತ್ತಿದೆ. ಹೊಸಬರನ್ನು ಕರೆಸಿ ಚೇಂಬರ್‌ನಲ್ಲಿ ತಿಳಿವಳಿಕೆ ಹೇಳುವ ಯೋಜನೆ ಹಾಕಿಕೊಳ್ಳಲಾಗಿದೆ. ಯಾಕೆಂದರೆ, ಅವರಿಗೆ ನಾಲೆಜ್‌ ಇಲ್ಲ.

ಸಿನಿಮಾ ವ್ಯಾಪಾರ ಹೇಗಾಗುತ್ತೆ, ಬಾಕ್ಸಾಪೀಸ್‌ ಹೇಗಿರುತ್ತೆ ಎಂಬ ಐಡಿಯಾ ಕೊಟ್ಟು, ರಿಲೀಸ್‌ ಮಾಡಿಸುವ ಬಗ್ಗೆ ಕಾರ್ಯಗಾರ ಮಾಡುವ ಕೆಲಸ ನಡೆಸುತ್ತೇವೆ. ಹೋಗಲಿ, ರಿಲೀಸ್‌ ಮುನ್ನ ಚೇಂಬರ್‌ಗೆ ಬಂದು ಮಾಹಿತಿ ಕೇಳುವುದೂ ಇಲ್ಲ. ಅವರವರ ಹಂತದಲ್ಲೇ ರಿಲೀಸ್‌ ಕೆಲಸ ನಡೆಯುತ್ತೆ.

ಕೊನೆಗೆ ಯಾವ ಸಿನಿಮಾಗೂ ಜನರ ಬರದಿದ್ದಾಗ, ಹಿಂಗಾಯ್ತು ಎಂಬ ಬೇಸರ ಪಡುತ್ತಾರೆ. ಇದು ನಮಗೂ ನೋವು ತಂದಿದೆ. ನಿಜ ಹೇಳ್ತೀನಿ ಸಿನಿಮಾ ಸೋತರೆ ಇಂಡಸ್ಟ್ರಿ ಉಳಿಯಲ್ಲ ಸಾರ್‌’ ಎಂಬುದು ಜೈರಾಜ್‌ ಮಾತು.

– ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next