“ಆ ಚಿತ್ರವನ್ನು ಹೊಸ ತಂತ್ರಜ್ಞಾನದಿಂದ ಮರುಸೃಷ್ಟಿ ಮಾಡಬಹುದು. ಆದರೆ, ಅಂಥದ್ದೊಂದು ಚಿತ್ರವನ್ನ ಈಗ ಸೃಷ್ಟಿ ಮಾಡೋಕೆ ಸಾಧ್ಯವಾ? …’
ರವಿಚಂದ್ರನ್ ಅವರು ಇಂಥದ್ದೊಂದು ಮಾತು ಹೇಳಿದ್ದು “ನಾಗರಹಾವು’ ಚಿತ್ರದ ಬಗ್ಗೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ “ನಾಗರಹಾವು’ ಚಿತ್ರವು 1972ರಲ್ಲಿ ಬಿಡುಗಡೆಯಾಗಿತ್ತು. ವಿಷ್ಣುವರ್ಧನ್, ಅಂಬರೀಶ್ ಮುಂತಾದ ಹಲವು ಕಲಾವಿದರಿಗೆ ದೊಡ್ಡ ಬ್ರೇಕ್ ನೀಡಿದ್ದ ಈ ಚಿತ್ರವನ್ನು ರವಿಚಂದ್ರನ್ ಅವರ ತಂದೆ ವೀರಾಸ್ವಾಮಿ ಅವರು ನಿರ್ಮಿಸಿದ್ದರು. ಕನ್ನಡ ಚಿತ್ರರಂಗದ ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ ಈ ಚಿತ್ರವನ್ನು ಈಗ 7.1 ಡಿಟಿಎಸ್ ಸೌಂಡ್ ಮತ್ತು ಡಿಐ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ ರವಿಚಂದ್ರನ್ ಅವರ ಸಹೋದರ ಬಾಲಾಜಿ.
ಇದಕ್ಕೆ ಪೂರ್ವಭಾವಿಯಾಗಿ ಹೊಸ ತಂತ್ರಜ್ಞಾನದಲ್ಲಿ ಮೂಡಿಬಂದಿರುವ ಈ ಚಿತ್ರದ ಕೆಲವು ಹಾಡುಗಳು, ತುಣುಕುಗಳು ಮತ್ತು ಮೇಕಿಂಗ್ ವೀಡಿಯೋವನ್ನು ಕಲಾವಿದರ ಸಂಘದಲ್ಲಿ ತೋರಿಸಲಾಯಿತು. ಈ ಸಮಾರಂಭಕ್ಕೆ ಹಿರಿಯ ನಟರಾದ ಲೀಲಾವತಿ, ಜಯಂತಿ, ಭಾರತೀ ವಿಷ್ಣುವರ್ಧನ್, ಅಂಕಲ್ ಲೋಕನಾಥ್, ಶಿವರಾಮಣ್ಣ, ಅಂಬರೀಶ್ ಮುಂತಾದವರು ಬಂದಿದ್ದರು. ಜೊತೆಗೆ ಪುಟ್ಟಣ್ಣ ಕಣಗಾಲ್ ಅವರ ಪತ್ನಿ ನಾಗಲಕ್ಷ್ಮೀ ಕಣಗಾಲ್ ಸಹ ಸಮಾರಂಭದಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಎಲ್ಲರೂ ಚಿತ್ರದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಹೊಸ ತಂತ್ರಜ್ಞಾನದಲ್ಲಿ ಮೂಡಿ ಬಂದಿರುವ “ನಾಗರಹಾವು’ ಸೂಪರ್ ಹಿಟ್ ಆಗಲಿ ಎಂದು ಹಾರೈಸಿದರು.
ಮೊದಲು ಮಾತನಾಡಿದ್ದರು ರವಿಚಂದ್ರನ್. “ಈ ಚಿತ್ರದ ಮೇಕಿಂಗ್ ವೀಡಿಯೋ ನೋಡುವಾಗ, ಎಲ್ಲರೂ ಪುನಃಸೃಷ್ಟಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಎಂದಿದ್ದನ್ನು ನೋಡಿದೆ. ಈಗಲೇ ಕಷ್ಟವಾದರೆ, ಆಗ ಇನ್ನೆಷ್ಟು ಕಷ್ಟವಾಗಿರಬಹುದು? ಆದರೆ, ಆಗ ಕಷ್ಟ ಅನ್ನೋದೇ ಗೊತ್ತಿರಲಿಲ್ಲ. ಏಕೆಂದರೆ, ಎಲ್ಲರೂ ಪ್ರೀತಿಯಿಂದ, ಪ್ಯಾಶನ್‌ನಿಂದ ಕೆಲಸ ಮಾಡುತ್ತಿದ್ದರು. 46 ವರ್ಷಗಳ ಹಿಂದಿನ ಚಿತ್ರ ಈಗಲೂ ಫ್ರೆಶ್ ಆಗಿದೆ ಎಂದರೆ, ಅದಕ್ಕೆ ಅವರೆಲ್ಲರ ಶ್ರದ್ಧೆ ಮತ್ತು ಪ್ರೀತಿ ಕಾರಣ. ಈ ಚಿತ್ರವನ್ನ ಮರೆಯೋದು ಕಷ್ಟ. ಚಿತ್ರದಲ್ಲಿನ ಪ್ರತಿ ಪಾತ್ರ, ಅಭಿನಯ, ಲೊಕೇಶನ್ ಚೆನ್ನಾಗಿದೆ. ಕನ್ನಡದ ಮಟ್ಟಿಗೆ ಇದೊಂದು ಮಾಸ್ಟರ್‌ಪೀಸ್ ಚಿತ್ರ. ಇದು ಬರೀ ನೋಡೋರಿಗಷ್ಟೇ ಅಲ್ಲ, ಚಿತ್ರ ಮಾಡುವವರು ಸಹ ಇದರಿಂದ ಕಲಿಯುವುದು ತುಂಬಾ ಇದೆ. ನಮ್ಮ ಈಶ್ವರಿ ಸಂಸ್ಥೆಗೆ 50 ವರ್ಷವಾಗುತ್ತಿದೆ. ಈ ಸಂದರ್ಭದಲ್ಲಿ ಚಿತ್ರ ರೀಸೈಕಲ್ ಆಗಿ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಮತ್ತೆ ಇನ್ನಷ್ಟು ಚಿತ್ರಗಳನ್ನು ಕೊಡುತ್ತೇವೆ’ ಎಂದು ಹೇಳುತ್ತಾ ಮಾತು ಮುಗಿಸಿದರು.
ತಾನು ವಿಲನ್ ಆಗಿ ಬಂದು, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು, ನಾಯಕನಾಗಿ, ಜನನಾಯಕನಾಗಿ ಬೆಳೆಯುವುದಕ್ಕೆ ಈ ಚಿತ್ರ ಮೊದಲ ಇಟ್ಟಿಗೆ ಎಂದರು ಅಭಿಪ್ರಾಯ. “ಇವತ್ತು ಇಲ್ಲಿದ್ದೀನಿ ಅಂದರೆ ಪುಟ್ಟಣ್ಣ ಕಣಗಾಲ್ ಮತ್ತು ಎನ್. ವೀರಾಸ್ವಾಮಿಗಳ ಆಶೀರ್ವಾದವೇ ಕಾರಣ. ಈ ಚಿತ್ರಕ್ಕೆ ಬಾಲಾಜಿ ಹೊಸ ರೂಪ ಕೊಟ್ಟಿದ್ದಾರೆ. ಎಲ್ಲರೂ ಸುಂದರವಾಗಿ ಕಾಣಾ¤ರೆ. ಚಿತ್ರ ನೂರಾರು ದಿನ ಓಡಲಿ’ ಎಂದು ಹಾರೈಸಿದರು.
ಶಿವರಾಮಣ್ಣ ಮತ್ತು ಅಂಕಲ್ ಲೋಕನಾಥ್ ಅವರು ಚಿತ್ರದಲ್ಲಿನ ಕೆಲವು ನೆನಪುಗಳನ್ನು ಮೆಲಕು ಹಾಕಿದರೆ, ಲೀಲಾವತಿ, ಜಯಂತಿ ಮತ್ತು ಭಾರತಿ ವಿಷ್ಣುವರ್ಧನ್ ಅವರು ಇಂತಹ ಚಿತ್ರ ನೂರು ದಿನ ಓಡಬೇಕು ಎಂದು ಹಾರೈಸಿದರು.
ಚೇತನ್ ನಾಡಿಗೇರ್